ಬೆಂಗಳೂರು: 1 ಗಂಟೆಯಲ್ಲಿ 6 ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆಯೊಂದು ಪಾಕಿಸ್ತಾನದಲ್ಲಿ (Woman Gives Birth To 6 Babies) ನಡೆದಿದೆ. ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ (hospital in Rawalpindi) 27 ವರ್ಷದ ಮಹಿಳೆ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊಹಮ್ಮದ್ ವಹೀದ್ (Mohammad Waheed) ಅವರ ಪತ್ನಿ ಜೀನತ್ ವಹೀದ್ ( Zeenat Waheed) ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಜೀನತ್ ಒಂದು ಗಂಟೆಯ ಅವಧಿಯಲ್ಲಿ ಎಲ್ಲಾ ಆರು ಮಕ್ಕಳಿಗೆ ಒಂದರ ನಂತರ ಒಂದರಂತೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ರಾವಲ್ಪಿಂಡಿಯ ಹಾಜಿರಾ ಕಾಲೋನಿಯಲ್ಲಿ ನೆಲೆಸಿರುವ ಜೀನತ್ ವಹೀದ್ ಅವರನ್ನು ಗುರುವಾರ (ಏಪ್ರಿಲ್ 18) ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ನಾಲ್ಕು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಸೇರಿದಂತೆ ಎಲ್ಲಾ ಶಿಶುಗಳ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತು ಶಿಶುಗಳು ತಲಾ ಎರಡು ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Tillu Square: ಅನುಪಮಾ ಪರಮೇಶ್ವರನ್ ಸಿನಿಮಾ ಒಟಿಟಿ ಬಿಡುಗಡೆ ದಿನಾಂಕ ಬಹಿರಂಗ
ಶಿಶುಗಳನ್ನು ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದ್ದು, ಮಕ್ಕಳಿಗೆ ಹಾಗೂ ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವರದಿಯಾಗಿದೆ. ಇದು ಜೀನತ್‌ಗೆ ಮೊದಲ ಹೆರಿಗೆಯಾಗಿದ್ದು, ಆಸ್ಪತ್ರೆಯ ವೈದ್ಯರು ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡರು.
ಶಿಶುಗಳನ್ನು ಹೆರಿಗೆ ಮಾಡಿದ ನಂತರ ಜೀನತ್‌ಗೆ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂದು ವೈದ್ಯರು ಹೇಳಿದ್ದು, ಕೆಲವೇ ದಿನಗಳಲ್ಲಿ ಅವರು ಸಹಜ ಸ್ಥಿತಿಗೆ ಮರಳುತ್ತಾರೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದೀಗ ಆಸ್ಪತ್ರೆಯಲ್ಲಿ ನಡೆದ ಈ ಪವಾಡವನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದ್ದಾರೆ. ಜೀನತ್ ಮತ್ತು ವಹೀದ್ ಕುಟುಂಬ ಕೂಡ ಸಂತಸಗೊಂಡಿದೆ.