ನವದೆಹಲಿ: ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನಿಗದಿಯಾಗಿದ್ದ ಗಡುವು ಮೂರು ತಿಂಗಳು ವಿಸ್ತರಣೆಯಾಗಿದೆ. ಈ ಮೊದಲು ಮಾರ್ಚ್ 30 ಅಂತಿಮ ದಿನವಾಗಿತ್ತು. ಈ ಗಡುವನ್ನು 2023ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೇ, ಒಂದೊಮ್ಮೆ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದೇ ಇದ್ದರೆ ಜುಲೈ 1ರಿಂದ ಲಿಂಕ್ ಆಗದ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯವಾಗಲಿವೆ ಎಂದು ಸಚಿವಾಲಯವು ತಿಳಿಸಿದೆ(PAN-Aadhaar link).
ಪ್ಯಾನ್-ಆಧಾರ್ ಅನ್ನು ಮಾರ್ಚ್ 30ರೊಳಗೆ ಲಿಂಕ್ ಮಾಡದಿದ್ದರೆ ಹತ್ತು ಸಾವಿರ ರೂಪಾಯಿ ದಂಡವನ್ನು ತೆರಬೇಕಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ, ಇಲಾಖೆಯ ಸರ್ವರ್ ಡೌನ್ ಆಗಿ ಭಾರೀ ತಾಪತ್ರಯವಾಗಿತ್ತು. ಇದೀಗ ದಿನಾಂಕ ವಿಸ್ತರಣೆಯಾಗಿದ್ದು, ಜನರಲ್ಲಿ ನಿರಾಳತೆ ಮೂಡಿದೆ.
ಪ್ಯಾನ್-ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
ಜೂನ್ 30ರೊಳಗೆ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಜುಲೈ 1ರಿಂದ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ. ಅಲ್ಲದೇ, ಈ ಪ್ಯಾನ್‌ಗಳಿಗೆ ಯಾವುದೇ ರಿಫಂಡ್ ಮಾಡಲು ಸಾಧ್ಯವಾಗುವುದಿಲ್ಲ. ಪ್ಯಾನ್ ನಿಷ್ಕ್ರಿಯವಾಗಿರುವಷ್ಟು ಕಾಲ ಬಡ್ಡಿ ಪಾವತಿಸಲಾಗುವುದಿಲ್ಲ. ಹಾಗೆಯೇ ಕಾನೂನು ಪ್ರಕಾರವೇ, ಟಿಡಿಎಸ್ ಮತ್ತು ಟಿಸಿಎಸ್ ಮೊತ್ತವು ಹೆಚ್ಚಿನ ಪ್ರಮಾಣದಲ್ಲಿ ಕಡಿತವಾಗಬಹುದು.
ಇದನ್ನೂ ಓದಿ: ವಿಸ್ತಾರ Money Guide | EPFO Alert | ಇಪಿಎಫ್‌ಒ ವಾಟ್ಸ್ ಆ್ಯಪ್ ಮೂಲಕ ಬ್ಯಾಂಕ್ ಖಾತೆ, ಆಧಾರ್, ಪ್ಯಾನ್ ವಿವರ ಕೇಳಲ್ಲ
ಈ ಮೊದಲು ಮಾರ್ಚ್ 30 ಕೊನೆಯ ದಿನವಾಗಿತ್ತು
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಈ ಮೊದಲು ಮಾರ್ಚ್ 30 ಕೊನೆಯ ದಿನವಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿದ್ದ ಆದಾಯ ತೆರಿಗೆ ಇಲಾಖೆ ಎಲ್ಲ ಪ್ಯಾನ್ ಕಾರ್ಡುದಾರರು, 1961ರ ಆದಾಯ ತೆರಿಗೆ ಕಾಯ್ದೆಯ ಅನುಸಾರ ಪ್ಯಾನ್ ಸಂಖ್ಯೆಯನ್ನು ತಮ್ಮ ಆಧಾರ್ ಸಂಖ್ಯೆಯ ಜತೆಗೆ 2023, ಮಾರ್ಜ್ 30ರೊಳಗೆ ಲಿಂಕ್ ಮಾಡಬೇಕು. ಲಿಂಕ್ ಆಗದೇ ಇರುವ ಪ್ಯಾನ್‌ಗಳು ಏಪ್ರಿಲ್ 1ರಿಂದಲೇ ನಿಷ್ಕ್ರಿಯವಾಗಲಿವೆ ಎಂದು ಹೇಳಿತ್ತು. ಏತನ್ಮಧ್ಯೆ, ಆಧಾರ್-ಪ್ಯಾನ್ ಲಿಂಕ್ ಮಾಡಲು ಗಡುವು ವಿಸ್ತರಣೆ ಮಾಡುವಂತೆ ಸಾರ್ವಜನಿಕುರ ಆಗ್ರಹಿಸಿದ್ದರು.