Site icon Vistara News

ಚುನಾವಣೆಯಲ್ಲಿ ಸೋತಿದ್ದಕ್ಕೆ ನಾಲ್ವರ ಆತ್ಮಹತ್ಯೆ; ಸಾಂತ್ವನ ಹೇಳಿ ಕಣ್ಣೀರಿಟ್ಟ ಬಿಜೆಪಿ ನಾಯಕಿ

Pankaja Munde

Pankaja Munde

ಮುಂಬೈ: ಈ ಲೋಕಸಭಾ ಚುನಾವಣೆ (Lok Sabha election)ಯಲ್ಲಿ ಮಹಾರಾಷ್ಟ್ರದ ಬೀಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ನಾಯಕಿ ಪಂಕಜಾ ಮುಂಡೆ (Pankaja Munde) ಸೋತಿದ್ದು, ಈ ಆಘಾತದಿಂದ ಪಕ್ಷದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡವರ ಕುಟುಂಬ ಸದಸ್ಯರನ್ನು ಭೇಟಿಯಾದ ಪಂಕಜಾ ಮುಂಡೆ ಅವರಿಗೆ ಸಾಂತ್ವನ ಹೇಳಿದ್ದಾರೆ. ʼʼಜೀವನದಲ್ಲಿ ಯಾವತ್ತೂ ಎದೆಗುಂದಬೇಡಿ. ಆತ್ಮಹತ್ಯೆಯೊಂದೇ ಅಂತಿಮ ಪರಿಹಾರವಲ್ಲʼʼ ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.

ʼʼನನ್ನ ಕಾರ್ಯಕರ್ತರು ನನಗೆ ಮುಖ್ಯ. ದಯವಿಟ್ಟು ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ಮಕ್ಕಳು, ಕುಟುಂಬವನ್ನು ಈ ರೀತಿ ದೂರ ಮಾಡಬೇಡಿʼʼ ಎಂದು ವಿನಂತಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಪಕ್ಷದ ಕಾರ್ಯಕರ್ತರಾದ ಪೋಪಟ್‌ರಾವ್‌ ವೈಭಸೆ, ಸಚಿನ್‌ ಮುಂಡೆ, ಪಾಂಡುರಂಗ್‌ ಮತ್ತು ಗಣೇಶ್‌ ಬಡೆ ಅವರ ಮನೆಗಳಿಗೆ ತೆರಳಿ ದುಃಖತಪ್ತ ಕುಟುಂಬಗಳನ್ನು ಸಂತೈಸಿದ್ದಾರೆ.

ಪೋಪಟ್‌ರಾವ್‌ ವೈಭವೆ ಅವರ ಮನೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಪಂಕಜಾ ಮುಂಡೆ ಅವರು ಅಳುತ್ತಾ ಕುಟುಂಬ ಸದಸ್ಯರನ್ನು ಸಂತೈಸಿಸುತ್ತಿರುವ ವಿಡಿಯೊ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. “ಪೋಪಟ್‌ರಾವ್‌ ಸಕ್ರಿಯ ಕಾರ್ಯಕರ್ತರಾಗಿದ್ದರು. ಪಕ್ಷದ ಪ್ರತಿಯೊಂದು ಕಾರ್ಯಕ್ಕೂ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ವಾಸ್ತವವಾಗಿ ಅವರೊಬ್ಬ ಹೋರಾಟಗಾರ. ಆದರೆ ಇಂತಹ ದುಡುಕು ನಿರ್ಧಾರ ಯಾಕೆ ತೆಗೆದುಕೊಂಡರು ಎನ್ನುವುದು ಅರ್ಥವಾಗುತ್ತಿಲ್ಲʼʼ ಎಂದು ಪಂಕಜಾ ಮುಂದೆ ಬರೆದುಕೊಂಡಿದ್ದಾರೆ. “ನಾನು ಅವರ ದುಃಖದ ಹೊರೆಯನ್ನು ಹಂಚಿಕೊಳ್ಳುತ್ತೇನೆ. ಅವರ ಮುಗ್ಧ ಮಕ್ಕಳು ಮತ್ತು ಕುಟುಂಬಗಳ ಎಲ್ಲ ಜವಾಬ್ದಾರಿಯನ್ನು ನಾನು ತೆಗೆದುಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.

“ಖಂಡಿತವಾಗಿಯೂ ನಾವು ಸೋಲಿನಿಂದ ಖಿನ್ನತೆಗೆ ಒಳಗಾಗುವಷ್ಟು ದುರ್ಬಲರಲ್ಲ. ಆದರೆ ಈ ನೋವು ನನಗೆ ಅಸಹನೀಯವಾಗಿದೆ. ಯಾವುದೇ ಕಾರಣಕ್ಕೂ, ಯಾವುದೇ ಪರಿಸ್ಥಿತಿಯಲ್ಲಿ ನಿಮ್ಮ ಜೀವನವನ್ನು ಬಿಟ್ಟುಕೊಡಬೇಡಿ. ನೀವು ಧೈರ್ಯದಿಂದ ಹೋರಾಡುವ ನಾಯಕನನ್ನು ಬಯಸಿದರೆ, ಧೈರ್ಯದಿಂದ ಹೋರಾಡುವ ಕಾರ್ಯಕರ್ತರೂ ನನಗೆ ಬೇಕು. ನಾನು ಸೋಲಿನಿಂದ ನಿರುತ್ಸಾಹಗೊಳ್ಳುವುದಿಲ್ಲ. ಆದರೆ ಅಂತಹ ಘಟನೆಗಳು ನನ್ನನ್ನು ದುರ್ಬಲಗೊಳಿಸುತ್ತದೆʼʼ ಎಂದು ಅವರು ನೋವಿನಿಂದ ಹೇಳಿದ್ದಾರೆ.

ಬೀಡ್‌ ಲೋಕಸಭಾ ಕ್ಷೇತ್ರದಲ್ಲಿ ಪಂಕಜಾ ಮುಂಡೆ ಅವರನ್ನು ಎನ್‌ಸಿಪಿ(ಶರದ್‌ ಪವಾರ್‌)ಯ ಬಜರಂಗ್‌ ಸೋನಾವಣೆ ಅವರು 6,553 ಮತಗಳ ಅಂತರದಿಂದ ಸೋಲಿಸಿದ್ದರು. ರಾಜ್ಯದ 48 ಕ್ಷೇತ್ರಗಳ ಪೈಕಿ ಪ್ರತಿಪಕ್ಷಗಳ ಮಹಾ ವಿಕಾಸ್‌ ಅಘಾಡಿ ಮೈತ್ರಿಕೂಟ 30 ಗೆದ್ದಿದೆ. ಬಿಜೆಪಿ 9 ಸೀಟಿಗೆ ಸೀಮಿತವಾಗಿದೆ.

ಇದನ್ನೂ ಓದಿ: Bus Accident: ಪಂಕಜಾ ಮುಂಡೆ ಸೋತರೆ ಸಾಯುತ್ತೇನೆ ಎಂದು ವಿಡಿಯೊ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವು!

Exit mobile version