ನವದೆಹಲಿ: ಈ ಬಾರಿಯ ಪದ್ಮ ಪ್ರಶಸ್ತಿಗಳನ್ನು (Padma award) ಘೋಷಿಸಲಾಗಿದೆ. 110 ಪದ್ಮಶ್ರೀ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದ ಸಾಧಕರಿಗೆ, ಅಪೂರ್ವ ಪ್ರತಿಭೆಗಳಿಗೆ ನೀಡಲಾಗಿದೆ. ಈ ಪೈಕಿ ಭಾರತದ ಮೊದಲ ಮಹಿಳಾ ಆನೆ ಮಾವುತ (India’s First Female Elephant Mahout) ಎಂದೇ ಕರೆಯಲ್ಪಡುವ ಪಾರ್ವತಿ ಬರುವಾ (Parbati Baruah) ಅವರಿಗೂ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಅವರು ತಮ್ಮ 14 ವರ್ಷದಲ್ಲೇ ಮಾವುತರಾಗಿ ಗುರುತಿಸಿಕೊಂಡಿದ್ದು, ಸುಮಾರು 4 ದಶಕಗಳಿಂದ ಆನೆಯ ಒಡನಾಡಿಯಾಗಿದ್ದಾರೆ. ಪ್ರಸ್ತುವ ಅವರಿಗೆ 67 ವರ್ಷ.
ಹಸ್ತೀರ್ ಕನ್ಯಾ
ಪಾರ್ವತಿ ಅವರನ್ನು ‘ಹಸ್ತೀರ್ ಕನ್ಯಾ’ ಎಂದು ಕರೆಯಲಾಗುತ್ತದೆ. ಅಂದರೆ ಆನೆಯ ಪುತ್ರಿ ಎಂದರ್ಥ. ಸಮಾಜ ಕಲ್ಯಾಣ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಅಸ್ಸಾಂ ಮೂಲದ ಇವರಿಗೆ ಪದ್ಮಶ್ರೀ ಲಭಿಸಿದೆ. ಪಾರ್ವತಿ ಅಸ್ಸಾಂನ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದರು. ಆಗೆಲ್ಲ ಆನೆಯನ್ನು ಮನೆಯಲ್ಲಿ ಸಾಕುವುದು ಬಹಳ ಪ್ರತಿಷ್ಠೆಯ ವಿಚಾರವಾಗಿತ್ತು. ಇವರ ಕುಟುಂಬವೂ ಆನೆಯನ್ನು ಸಾಕುತ್ತಿತ್ತು. ಇವರ ಬಳಿ ಸುಮಾರು 40 ಆನೆಗಳಿದ್ದವು. ಹೀಗಾಗಿ ಸಹಜವಾಗಿ ಬಾಲ್ಯದಲ್ಲಿಯೇ ಪಾರ್ವತಿ ಆನೆಗಳತ್ತ ಆಸಕ್ತಿ ಬೆಳೆಸಿದ್ದರು.
Parbati Baruah, India's first female elephant mahout who started taming the wild tuskers at the age of 14 to overcome stereotypes, to receive Padma Shri in the field of Social Work (Animal Welfare).#Assam pic.twitter.com/p5wRvi0O2w
— Hemanta Kumar Nath (@hemantakrnath) January 26, 2024
ಚಿಕ್ಕಂದಿನಿಂದಲೇ ಅವರು ಆನೆಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆನೆಗೆ ತರಬೇತಿ ನೀಡುವುದನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಿದ್ದರು. ಅವರ ಆಸಕ್ತಿಯನ್ನು ಗಮನಿಸಿ 14ನೇ ವಯಸ್ಸಿನಲ್ಲಿ ಅವರ ತಂದೆ ದಿ.ಪ್ರಾಕೃತೇಶ್ ಚಂದ್ರ ಬರುವಾ ಆನೆಗಳ ಪ್ರಪಂಚಕ್ಕೆ ಕರೆ ತಂದರು. ಅಲ್ಲಿಂದ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲ.
ಆನೆಗಳ ಸೇವೆಗಾಗಿ ಜೀವವೇ ಮುಡಿಪು
ಪಾರ್ವತಿ ಆನೆಗಳಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ ಎಂದರೆ ಅದು ಖಂಡಿತಾ ಅತಿಶಯೋಕ್ತಿಯಲ್ಲ. ಗಜ ಪಡೆಗಳ ಜೀವನ ಮಟ್ಟ ಸುಧಾರಣೆಗೆ ಅವರು ಹಲವು ರೀತಿಯ ಕ್ರಮ ಕೈಗೊಂಡಿದ್ದಾರೆ. ಅವರು ತಮ್ಮ 14ನೇ ವಯಸ್ಸಿನಲ್ಲಿ ಅಸ್ಸಾಂನ ಕೊಚುಗಾಂವ್ ಅರಣ್ಯದಲ್ಲಿ (Kochugaon forest) ಮೊದಲ ಬಾರಿಗೆ ಆನೆಯನ್ನು ಸಾಕಿದರು. ಅವರು ಅಸ್ಸಾಂ (ದರ್ರಾಂಗ್ ಮತ್ತು ಕೊಚುಗಾಂವ್) ಮತ್ತು ಉತ್ತರ ಬಂಗಾಳದ (ಜಲ್ಪೈಗುರಿ ಮತ್ತು ಡಾರ್ಜಿಲಿಂಗ್) ಕಾಡುಗಳಲ್ಲಿ 14 ಆನೆಗಳನ್ನು ಸ್ವತಂತ್ರವಾಗಿ ಪಳಗಿಸಿದರು. ಹೊಸದಾಗಿ ಪಳಗಿಸಿದ ಆನೆಗಳ ಚಿಕಿತ್ಸೆ ಮತ್ತು ಶುಶ್ರೂಷೆಯಲ್ಲಿ ಅವರು ಅರಣ್ಯ ಅಧಿಕಾರಿಗಳಿಗೆ ಸಹಾಯ ಮಾಡಿದರು. 2000ರಲ್ಲಿ ಪಶ್ಚಿಮ ಬಂಗಾಳ ಅರಣ್ಯ ಇಲಾಖೆ ಆಯೋಜಿಸಿದ್ದ ಆನೆ ಗಣತಿಗಾಗಿ ಕೆಲಸ ಮಾಡುವ ಮಾವುತರು ಮತ್ತು ಕ್ಷೇತ್ರ ಸಿಬ್ಬಂದಿಗೆ ತರಬೇತಿಯನ್ನು ಆಯೋಜಿಸಲು ಅಗತ್ಯ ಮಾರ್ಗದರ್ಶನ ನೀಡಿದರು.
ಚೀಫ್ ಎಲಿಫೆಂಟ್ ವಾರ್ಡನ್
ಆನೆಗಳ ಕಲ್ಯಾಣಕ್ಕಾಗಿ ಕಾರ್ಯ ನಿರ್ವಹಿಸುವ ಪಾರ್ವತಿ ಅವರಿಗೆ 1989ರಲ್ಲಿ ವಿಶ್ವಸಂಸ್ಥೆಯ ʼಗ್ಲೋಬಲ್ 500- ರೋಲ್ ಆಫ್ ಹಾನರ್ʼ (Global 500 – Roll of Honour) ಪ್ರಶಸ್ತಿ ಲಭಿಸಿತು. ಅಲ್ಲದೆ 2003ರ ಜನವರಿ 11ರಂದು ಅಸ್ಸಾಂ ಸರ್ಕಾರವು ಅವರನ್ನು ʼHonorary Chief Elephant Warden of Assamʼ ಎಂದು ಗೌರವಿಸಿತು.
ಬಹುಮುಖ ಪ್ರತಿಭೆ
ಪಾರ್ವತಿ ಅವರು ಆನೆಯ ಬಗ್ಗೆ, ಅವುಗಳ ಜೀವನ ವಿಧಾನಗಳ ಬಗ್ಗೆ ಹಲವು ಲೇಖನಗಳನ್ನು ಇಂಗ್ಲಿಷ್, ಬಂಗಾಳಿ ಮತ್ತು ಅಸ್ಸಾಮಿಯಲ್ಲಿ ಬರೆದಿದ್ದಾರೆ. ಅಲ್ಲದೆ ಅವರು ಗೋಲ್ಪಾರನ್ ಜಾನಪದ ನೃತ್ಯದಲ್ಲಿ ಪರಿಣಿತಿ ಹೊಂದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಪ್ರದರ್ಶನವನ್ನೂ ನೀಡಿದ್ದಾರೆ. ಮಾನವರನ್ನು ಕೊಂದ ಆನೆಗಳಿಗೆ ಯಶಸ್ವಿಯಾಗಿ ತರಬೇತಿ ನೀಡಿದ ಏಕೈಕ ಮಹಿಳಾ ಮಾವುತ ಎನ್ನುವ ಹೆಗ್ಗಳಿಕೆಗೂ ಪಾರ್ವತಿ ಪಾತ್ರರಾಗಿದ್ದಾರೆ. ಅವರು ವಿಶ್ವಸಂಸ್ಥೆಯ ಏಷ್ಯನ್ ಎಲಿಫೆಂಟ್ ಸ್ಪೆಷಲಿಸ್ಟ್ ಗ್ರೂಪ್ ಮತ್ತು ಅಸ್ಸಾಂ ಸರ್ಕಾರದ ʼಮಾನವ-ಆನೆ ಸಂಘರ್ಷʼ (Man- Elephant Conflict) ಕಾರ್ಯಪಡೆಯ ಸದಸ್ಯರೂ ಹೌದು.
ಇದನ್ನೂ ಓದಿ: Padma Awards: ರೋಹನ್ ಬೋಪಣ್ಣ, ಅನುಪಮಾ ಹೊಸಕೆರೆ, ಸಿ.ಆರ್ ಚಂದ್ರಶೇಖರ್ ಸೇರಿ 8 ಕನ್ನಡಿಗರಿಗೆ ಪದ್ಮಶ್ರೀ
ಆನೆಗಳ ರಾಣಿ
ಬಿಬಿಸಿ ಹೊರ ತಂದ ʼಕ್ವೀನ್ ಆಫ್ ಎಲಿಫೆಂಟ್ʼ ಎಂಬ ಸಾಕ್ಷ್ಯ ಚಿತ್ರದ ಬಳಿಕ ಪಾರ್ವತಿ ಹೆಸರು ಇನ್ನಷ್ಟು ಜನಪ್ರಿಯವಾಯಿತು. ಈ ಡಾಕ್ಯುಮೆಂಟ್ರಿ ಅವರ ಜೀವನದ ಮೇಲೆ ಬೆಳಕು ಚೆಲ್ಲಿತ್ತು. ಆನೆಗಳೊಂದಿಗೆ ಅವರ ಒಡನಾಟ, ನಿಸ್ವಾರ್ಥ ಸೇವೆಯನ್ನು ʼಕ್ವೀನ್ ಆಫ್ ಎಲಿಫೆಂಟ್ʼ ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಇದೀಗ ಪದ್ಮಶ್ರೀ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ.