ಹೊಸದಿಲ್ಲಿ: ಪರೀಕ್ಷೆಗೂ ಮುನ್ನ ಆರಾಮವಾಗಿ ಕುಳಿತುಕೊಳ್ಳಿ; 5-10 ನಿಮಿಷ ಜೋಕ್ ಮಾಡಿ, ನಕ್ಕು ಮನಸ್ಸನ್ನು ಹಗರಾಗಿಸಿಕೊಳ್ಳಿ; ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆ ಮೊದಲೇ ತಲುಪಿಕೊಳ್ಳಿ… ಇವೇ ಮುಂತಾದ ಹಲವು ಕಿವಿಮಾತುಗಳನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಕ್ಕಳಿಗೆ (Pariksha Pe Charcha 2024) ಹೇಳಿದ್ದಾರೆ.
10ನೇ ಮತ್ತು 12ನೇ ತರಗತಿಯ 2024ರ ಬೋರ್ಡ್ ಎಕ್ಸಾಮ್ಗೆ ಮುನ್ನ ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಡುತ್ತಿರುವ ʼಪರೀಕ್ಷಾ ಪೆ ಚರ್ಚಾ 2024′ (Pariksha Pe Charcha 2024) ಕಾರ್ಯಕ್ರಮದಲ್ಲಿ ಇದೂ ಸೇರಿದಂತೆ ಹಲವು ವಿಚಾರಗಳನ್ನು ಚರ್ಚಿಸಿದರು. ಸೋಮವಾರ ದಿಲ್ಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ ಕಾರ್ಯಕ್ರಮ ನಡೆಯಿತು. ದೇಶಾದ್ಯಂತದಿಂದ ಬಂದ ಹಲವು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ನೇರವಾಗಿ ಹಾಗೂ ಆನ್ಲೈನ್ ಮೂಲಕ ಪ್ರಧಾನಿಗೆ ಪ್ರಶ್ನೆಗಳನ್ನು ಕೇಳಿದರು. ಪ್ರಧಾನಿಯವರು ನೀಡಿದ ಹಲವು ಟಿಪ್ಸ್ ಈ ಕೆಳಗಿನಂತಿದ್ದವು:
- ಪರೀಕ್ಷೆಯ ಹಾಲ್ಗೆ ಅರ್ಧ ಗಂಟೆಗೂ ಮೊದಲು ತಲುಪಿಕೊಂಡರೆ ಯಾವುದೇ ಉದ್ವೇಗ ಇರುವುದಿಲ್ಲ. ಹತ್ತು ನಿಮಿಷದಷ್ಟು ಕಾಲ ಜೋಕ್ ಮಾಡಲು, ನಗಲು ಮೀಸಲಿಡಿ. ಅದರಿಂದ ಮನಸ್ಸು ಹಗುರಾಗುತ್ತದೆ. ನಂತರ ಪ್ರಶ್ನೆ ಪತ್ರಿಕೆ ನಿಮ್ಮ ಕೈಗೆ ಬಂದಾಗ, ನೀವು ಅದನ್ನು ಆರಾಮವಾಗಿ ಮಾಡಲು ಸಾಧ್ಯವಾಗುತ್ತದೆ.
- ಪರೀಕ್ಷಾ ಹಾಲ್ನಲ್ಲಿ ನಾವು ಸಬ್ಜೆಕ್ಟ್ ಹೊರತುಪಡಿಸಿ ಇತರ ವಿಷಯಗಳ ಮೇಲೆ ಮನಸ್ಸು ಕೇಂದ್ರೀಕರಿಸುವುದರಿಂದ ನಮ್ಮ ಶಕ್ತಿ ಅನಗತ್ಯವಾಗಿ ವ್ಯರ್ಥವಾಗುತ್ತದೆ. ನಾವು ನಮ್ಮಲ್ಲೇ ಕಳೆದುಹೋಗಬೇಕು. ಮಹಾಭಾರತದ ಅರ್ಜುನ ಮತ್ತು ಪಕ್ಷಿನೋಟದ ಕಥೆಯನ್ನು ನೀವು ಕೇಳಿರಬಹುದು. ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
- ಆತಂಕಕ್ಕೆ ಕಾರಣವೇನೆಂದರೆ, ಪರೀಕ್ಷೆಯ ಸಮಯದಲ್ಲಿ, ಸಮಯ ಸಾಕಾಗಲಿಕ್ಕಿಲ್ಲ ಎಂದು ನೀವು ಭಾವಿಸುತ್ತೀರಿ. ಪ್ರಶ್ನೆಪತ್ರಿಕೆ ಕೈಗೆ ಬಂದ ಕೂಡಲೇ ಸಮಗ್ರವಾಗಿ ಓದಿ. ಮೊದಲು ಯಾವ ಪ್ರಶ್ನೆಗಳನ್ನು ಪ್ರಯತ್ನಿಸಿದರೆ ಉತ್ತಮ ಎಂದು ನೋಟ್ ಮಾಡಿಕೊಳ್ಳಿ. ಪ್ರತೀ ಪ್ರಶ್ನೆಗೂ ಸಮಯ ನಿಗದಿಪಡಿಸಿಕೊಳ್ಳಿ.
- ಮೊಬೈಲ್ನಲ್ಲಿ ಒಂದರ ಹಿಂದೆ ಒಂದರಂತೆ ರೀಲುಗಳನ್ನು ನೋಡುತ್ತಾ ಹೋದರೆ ಸಮಯ ವ್ಯರ್ಥವಾಗುತ್ತದೆ. ನಿದ್ದೆ ಕೆಡುತ್ತದೆ, ಓದಿದ್ದನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ. ನಿದ್ರೆಯನ್ನು ಕೀಳಂದಾಜು ಮಾಡಬೇಡಿ. ಆಧುನಿಕ ಆರೋಗ್ಯ ವಿಜ್ಞಾನವು ನಿದ್ರೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ನಿಮಗೆ ಬೇಕಾದಷ್ಟು ನಿದ್ದೆ ಮಾಡುತ್ತೀರೋ ಇಲ್ಲವೋ ಎಂಬುದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
- ನಿಮ್ಮ ಆಹಾರದಲ್ಲಿ ನಿಮ್ಮ ವಯಸ್ಸಿಗೆ ಅಗತ್ಯವಿರುವ ವಸ್ತುಗಳು ಇವೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಮ್ಮ ಆಹಾರದಲ್ಲಿ ಸಮತೋಲನವು ಆರೋಗ್ಯಕ್ಕೆ ಮುಖ್ಯವಾಗಿದೆ. ಫಿಟ್ನೆಸ್ಗಾಗಿ ವ್ಯಾಯಾಮವನ್ನು ಮಾಡಬೇಕು. ನೀವು ಪ್ರತಿದಿನ ಹಲ್ಲುಜ್ಜುವ ರೀತಿಯಲ್ಲಿ ವ್ಯಾಯಾಮ ಮಾಡಬೇಕು; ಅದರಲ್ಲಿ ಯಾವುದೇ ರಾಜಿ ಬೇಡ.
- ನಾವು ಮೊಬೈಲ್ ಫೋನ್ ಅನ್ನು ಚಾರ್ಜ್ ಮಾಡದಿದ್ದರೆ. ಅದರ ಬಳಕೆಯ ಅವಧಿ ಕಡಿಮೆಯಾಗುತ್ತದೆ. ಮೊಬೈಲ್ ಕೆಲಸ ಮಾಡಲು ಚಾರ್ಜ್ ಬೇಕಾದಂತೆ, ದೇಹವನ್ನೂ ಚಾರ್ಜ್ ಮಾಡಬೇಕು. ಮೊಬೈಲ್ ಫೋನ್ಗೆ ಚಾರ್ಜಿಂಗ್ ಅಗತ್ಯವಿರುವಂತೆ ದೇಹಕ್ಕೂ ಚಾರ್ಜ್ ಅಗತ್ಯವಿದೆ. ಅದಿಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ, ಹಾಗಾಗಿ ಜೀವನವನ್ನು ಸ್ವಲ್ಪ ಸಮತೋಲನಗೊಳಿಸಬೇಕು. ನಾವು ಆರೋಗ್ಯವಾಗಿಲ್ಲದಿದ್ದರೆ, ಮೂರು ಗಂಟೆಗಳ ಕಾಲ ಪರೀಕ್ಷೆಗೆ ಕುಳಿತುಕೊಳ್ಳಲು ಸಾಧ್ಯವಾಗದಿರಬಹುದು. ಆರೋಗ್ಯಕರ ಮನಸ್ಸಿಗೆ ಆರೋಗ್ಯಕರ ದೇಹ ಅಗತ್ಯ. ಇದರರ್ಥ ನೀವು ಕುಸ್ತಿ ಮಾಡಬೇಕು ಎಂದಲ್ಲ. ಒಂದು ಪುಸ್ತಕವನ್ನು ತೆಗೆದುಕೊಂಡು ಅದನ್ನು ಸೂರ್ಯನ ಬೆಳಕಿನಲ್ಲಿ ಕುಳಿತು ಓದಿ. ಏಕೆಂದರೆ ದೇಹವನ್ನು ರೀಚಾರ್ಜ್ ಮಾಡಲು ಸೂರ್ಯನ ಬೆಳಕು ಕೂಡ ಬೇಕಾಗುತ್ತದೆ.
- ಹೆತ್ತವರಿಗೆ ಕಿವಿಮಾತು: ಇಂದು ಪರೀಕ್ಷೆ ಇರುವುದರಿಂದ ಮಗುವಿಗೆ ಹೊಸ ಪೆನ್ ಬೇಕು ಎಂದು ಭಾವಿಸಬೇಡಿ. ಆದರೆ ಮಗು ದಿನನಿತ್ಯ ಬಳಸುವ ಪೆನ್ನನ್ನೇ ಬಳಸಬೇಕು. ಅದು ಅಬ್ಯಾಸವಾಗಿರುತ್ತದೆ. ಅವನ ಬಟ್ಟೆಯ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ. ಅವನಿಗೆ ಹಿತಕರವಾಗಿದ್ದನ್ನು ಅವನು ಧರಿಸಲಿ. ಪರೀಕ್ಷೆಯ ಸಮಯ ಮಕ್ಕಳಿಗೆ ಆರಾಮದಾಯಕವಾಗಿರುವಂತೆ ಮಾಡಿ.
- ಇಂದು, ಪರೀಕ್ಷೆಯಲ್ಲಿ ದೊಡ್ಡ ಸವಾಲು ಎಂದರೆ ಕೈಯಲ್ಲಿ ಬರೆಯುವುದು. ಇಂದು ಎಲ್ಲವೂ ಮೊಬೈಲ್, ಐಪ್ಯಾಡ್, ಕಂಪ್ಯೂಟರ್ನಲ್ಲಿ ನಡೆಯುತ್ತದಾದ್ದರಿಂದ ಬರೆಯುವ ಅಭ್ಯಾಸವೇ ಬಿಟ್ಟುಹೋಗಿದೆ. ಹೀಗಾಗಿ ದಿನನಿತ್ಯ ಅಧ್ಯಯನಕ್ಕಾಗಿ ಮೀಸಲಿಡುವ ಸಮಯದಲ್ಲಿ ಅರ್ಧ ಭಾಗ ಬರೆಯುವುದಕ್ಕಾಗಿಯೇ ಇಟ್ಟುಕೊಳ್ಳಿ.
- ಅಭ್ಯಾಸದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಪರೀಕ್ಷೆಯ ಮೊದಲು, ವಿಷಯದ ಬಗ್ಗೆ ನೀವು ಓದಿದ್ದನ್ನು ಬರೆಯಿರಿ ಮತ್ತು ನಂತರ ಅದನ್ನು ನೀವೇ ಸರಿಪಡಿಸಿ. ನಿಮಗೆ ಈಜಲು ತಿಳಿದಿದ್ದರೆ ನೀರಿಗೆ ಇಳಿಯುವ ಭಯವಿಲ್ಲ. ಅಭ್ಯಾಸ ಮಾಡುವವನಿಗೆ ತಾನು ಜಯಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ನೀವು ಎಷ್ಟು ಹೆಚ್ಚು ಬರೆಯುತ್ತೀರೋ ಅಷ್ಟು ತೀಕ್ಷ್ಣತೆ ನಿಮಗೆ ಸಿಗುತ್ತದೆ.
- ಪರೀಕ್ಷಾ ಹಾಲ್ನಲ್ಲಿ ನಿಮ್ಮ ಪಕ್ಕದ ವಿದ್ಯಾರ್ಥಿ ಎಷ್ಟು ವೇಗವಾಗಿ ಬರೆಯುತ್ತಿದ್ದಾರೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಡಿ. ಯಾರಿಗೆ ಗೊತ್ತು, ಆತ ಸಿನಿಮಾ ಕಥೆ ಬರೆಯುತ್ತಿರಬಹುದು!
ಇದನ್ನೂ ಓದಿ: Pariksha Pe Charcha 2024: ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮೋದಿ ನೀಡಿದ ಟಾಪ್ 10 ಸಲಹೆಗಳಿವು