Site icon Vistara News

Parliament Budget Session: ಅದಾನಿ ವಿಚಾರಕ್ಕೆ ಮತ್ತೆ ಕಲಾಪ ಬಲಿ, ಪಟ್ಟು ಸಡಿಲಿಸದ ಪ್ರತಿಪಕ್ಷಗಳು

Parliament Budget Session again adjourned

ನವದೆಹಲಿ: ಬಜೆಟ್ ಅಧಿವೇಶನ ಬಹುತೇಕ ಅದಾನಿ ಗದ್ದಲಕ್ಕೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಮಂಗಳವಾರವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಕಲಾಪ ನಡೆಯಲಿಲ್ಲ(Parliament Budget Session). ಅದಾನಿ ಷೇರು ವ್ಯವಹಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆ ನೀಡಬೇಕೆಂದು ಒತ್ತಾಯಿಸಿ, ಪ್ರತಿಪಕ್ಷಗಳು ಸದನದ ಪೀಠ ಹತ್ತಿರ ಬಂದು ಪ್ರತಿಭಟಿಸಿದರು. ಹಾಗಾಗಿ, ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಇದೇ ವೇಳೆ, ಲೋಕಸಭೆಯಲ್ಲೂ ಗದ್ದಲ ಮುಂದುವರಿಯಿತು. ಲೋಕಸಭೆಯನ್ನು ಮುಂದೂಡಲಾಯಿತು. ಅದಾನಿ ಷೇರು ವ್ಯವಹಾರ ಕುರಿತು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಏತನ್ಮಧ್ಯೆ, ಟರ್ಕಿ ಭೂಕಂಪದಲ್ಲಿ ಮೃತಪಟ್ಟವರ ಆತ್ಮಗಳಿಗೆ ಶಾಂತಿ ಕೋರಿ ರಾಜ್ಯಸಭೆಯಲ್ಲಿ ಸದಸ್ಯರು ಮೌನಾಚರಣೆ ಆಚರಿಸಿದರು. ಅಲ್ಲದೇ, ಕಷ್ಟದ ಸಂದರ್ಭದಲ್ಲಿ ಭಾರತವು ಟರ್ಕಿ ಮತ್ತು ಸಿರಿಯಾ ಜನರ ಜತೆಗೆ ಇರಲಿದೆ ಎಂದು ಚೇರ್ಮನ್ ಜಗದೀಪ್ ಧನಕರ್ ಅವರು ಹೇಳಿದರು. ಇದಕ್ಕೂ ಮೊದಲು ಬಿಜೆಪಿ ಮತ್ತು ಪ್ರತಿಪಕ್ಷಗಳು ಪ್ರತ್ಯೇಕವಾಗಿ ಸಭೆ ನಡೆಸಿದವು.

ಬಿಜೆಪಿ ಸಂಸದೀಯ ಪಕ್ಷದ ಸಭೆ

ಕಲಾಪ ಆರಂಭಕ್ಕಿಂತಲೂ ಮುಂಚೆ, ಸಂಸತ್ ಭವನದ ಸಭಾಂಗಣದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ನಡೆಯಿತು. ಪ್ರಧಾನಿ ಮೋದಿ ಅವರು ನೇತೃತ್ವ ವಹಿಸಿದ್ದರು. ಅಧಿವೇಶನದ ವೇಳೆ ಪ್ರತಿ ಮಂಗಳವಾರ ಬಿಜೆಪಿಯ ಸಂಸದೀಯ ಸಭೆ ನಡೆಯುತ್ತದೆ. ಈ ಬಾರಿಯ ಸಭೆಯಲ್ಲಿ ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಬಗ್ಗೆ, ಅದಾನಿ ವಿಚಾರದಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡುವ ಬಗ್ಗೆ ಚರ್ಚಿಸಲಾಯಿತು. ಅಲ್ಲದೇ ರಾಷ್ಟ್ರಪತಿಗಳ ಭಾಷಣದ ಮೇಲೆ ಯಾವ ರೀತಿ ಚರ್ಚೆ ಹಾಗೂ ಬಜೆಟ್ ಮೇಲಿನ ಚರ್ಚೆ ಬಗ್ಗೆ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: Parliament Budget Session: ಸಂಸತ್ತಿನಲ್ಲಿ ಇಂದೂ ‘ಅದಾನಿ’ ಗಲಾಟೆ; ಎರಡೂ ಸದನಗಳ ಕಲಾಪ ಮಧ್ಯಾಹ್ನಕ್ಕೆ ಮುಂದೂಡಿಕೆ

ಪ್ರತಿಪಕ್ಷಗಳಿಂದಲೂ ಸಭೆ

ಒಂದೆಡೆ ಬಿಜೆಪಿಯು ಸಂಸದೀಯ ಪಕ್ಷದ ಸಭೆ ನಡೆಸಿದರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಸಂಸತ್ ಕಚೇರಿಯಲ್ಲಿ ಪ್ರತಿಪಕ್ಷಗಳ ನಾಯಕರು ಸಭೆ ನಡೆಸಿದರು. ಅದಾನಿ ಷೇರು ವ್ಯವಹಾರ ಪ್ರಸ್ತಾಪಿಸಲು ಚರ್ಚಿಸಲಾಯಿತು. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಬಗ್ಗೆ ಮಾತುಕತೆ ನಡೆಸಲಾಯಿತು. ಈ ಸಭೆಯಲ್ಲಿ ಕಾಂಗ್ರೆಸ್, ಡಿಎಂಕೆ, ಎನ್‌ಸಿಪಿ ಸೇರಿದಂತೆ 15 ಪ್ರತಿಪಕ್ಷಗಳು ಪಾಲ್ಗೊಂಡಿದ್ದವು.

Exit mobile version