Site icon Vistara News

Parliament Building: ಸೋರುತಿಹುದು ನೂತನ ಸಂಸತ್‌ ಭವನದ ಮಾಳಿಗೆ! ವಿಡಿಯೋ ಶೇರ್‌ ಮಾಡಿ ಪ್ರತಿಪಕ್ಷಗಳು ಕಿಡಿ

Parliament session

ನವದೆಹಲಿ: ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆ(Heavy Rain)ಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಇದುವರೆಗೆ ಒಂಬತ್ತು ಮಂದಿಯನ್ನು ಬಲಿ ತೆಗೆದುಕೊಂಡಿದೆ. ಸಾಲದೆನ್ನುವಂತೆ ಇದೀಗ ಭಾರೀ ಮಳೆಗೆ ನೂತನ ಸಂಸತ್‌ ಭವನ(Parliament Building)ದ ಛಾವಣಿಯೇ ಸೋರುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಪ್ರತಿಪಕ್ಷಗಳು ಕಳಪೆ ಕಾಮಗಾರಿ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್‌(Viral Video) ಆಗುತ್ತಿದೆ.

ಸಮಾಜವಾದಿ ಪಕ್ಷದ ಸಂಸದ ಅಖಲೇಶ್‌ ಯಾದವ್‌ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, 1000ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸಂಸತ್‌ ಭವನದ ಛಾವಣಿ ಸೋರುತ್ತಿದೆ. ಛಾವಣಿ ಮೇಲಿನ ಗ್ಲಾಸ್‌ ಒಡೆದಿದ್ದು, ನೆಲದಲ್ಲಿ ನೀಲಿ ಬಕೆಟ್‌ ಇಟ್ಟಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ನೂತನ ಸಂಸತ್‌ ಭವನಕ್ಕಿಂತ ಹಳೆಯ ಕಟ್ಟಡವೇ ಉತ್ತಮವಾಗಿತ್ತು. ಕೊನೇಪಕ್ಷ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಸಂಸತ್‌ ಭವನದಲ್ಲಿ ನೀರು ಸೋರುತ್ತಿರುವುದು ನಿಲ್ಲುವವರೆಗೆ ನಾವು ಹಳೆಯ ಸಂಸತ್‌ ಭವನಕ್ಕೆ ಹೋಗಬಾರದೇಕೆ? ಇದು ಕೇಂದ್ರ ಸರ್ಕಾರದ ಕಲಪೆ ಕಾಮಗಾರಿಗೆ ನಿದರ್ಶನವೇ ಎಂದು ಜನ ಕೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಮತ್ತೊಂದೆಡೆ ತೃಣಮೂಲ ಕಾಂಗ್ರೆಸ್‌ ಸಂಸದ ಮಹುವಾ ಮೋಯಿತ್ರಾ ಕೂಡ ಇದೇ ವಿಡಿಯೋವನ್ನು ಶೇರ್‌ ಮಾಡಿದ್ದು, ಹೊರಗಡೆ ಪ್ರಶ್ನೆ ಪತ್ರಿಕೆ ಸೋರಿಕೆ…ಒಳಗಡೆ ಮಳೆ ನೀರು ಸೋರಿಕೆ ಎಂದು ಟೀಕಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೇ ಅಯೋಧ್ಯೆ ಶ್ರೀರಾಮ ಮಂದಿರದ ಛಾವಣಿಯೂ ಮಳೆಗೆ ಸೋರಿತ್ತು. ಈ ಬಗ್ಗೆ ಎಂಬುದಾಗಿ ದೇವಾಲಯದ ಮುಖ್ಯ ಅರ್ಚಕರೇ ಮಾಹಿತಿ ನೀಡಿದ್ದರು. ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್‌ ಅವರು ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದ್ದರು. “ಮೊದಲ ಮಳೆಗೇ ಗರ್ಭಗುಡಿಯ ಚಾವಣಿ ಮೂಲಕ ನೀರು ಒಳಗೆ ಬಂದಿದೆ. ನೂರಾರು ಎಂಜಿನಿಯರ್‌ಗಳು ಇಲ್ಲಿದ್ದಾರೆ. ಸುಸಜ್ಜಿತವಾಗಿಯೇ ರಾಮಮಂದಿರ ನಿರ್ಮಿಸಲಾಗಿದೆ. ಹೀಗಿದ್ದರೂ ಗರ್ಭಗುಡಿಯೇ ಸೋರುತ್ತಿರುವುದು ಆತಂಕ ಸೃಷ್ಟಿಸಿದೆ. ಹೀಗಾಗುತ್ತದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಕೂಡಲೇ ರಾಮಮಂದಿರ ಕಡೆ ಗಮನ ಹರಿಸಿ, ಸಮಸ್ಯೆಯನ್ನು ಸರಿಪಡಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Yadgiri News: ಕೃಷ್ಣಾ ನದಿ ಪ್ರವಾಹದಿಂದ ಕೊಳ್ಳುರು ಸೇತುವೆ ಮುಳುಗಡೆ; ನೆರೆ ಹಾನಿ ಪ್ರದೇಶಕ್ಕೆ ಛಲವಾದಿ ನಾರಾಯಣಸ್ವಾಮಿ ಭೇಟಿ

Exit mobile version