Site icon Vistara News

Parliament Session: ʼತಾಕತ್ತಿದ್ದರೆ ಬಾʼ- ಸಂಸತ್‌ನಲ್ಲಿ ಸಂಸದರ ಪಂಥಾಹ್ವಾನ; ಭಾರೀ ಕೋಲಾಹಲ

Parliament Session

ಹೊಸದಿಲ್ಲಿ: ಸಂಸತ್‌ ಅಧಿವೇಶನ(Parliament Session)ದ ಇಂದಿನ ಕಲಾಪ ಕಾಂಗ್ರೆಸ್‌ ಸಂಸದ, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಛನ್ನಿ(Charanjit Singh Channi) ಮತ್ತು ಬಿಜೆಪಿ ಸಂಸದ ರವನೀತ್‌ ಬಿಟ್ಟೂ(Ravneet Singh Bittu) ಭಾರೀ ವಾಗ್ಯುದ್ಧಕ್ಕೆ ಸಾಕ್ಷಿಯಾಯಿತು. ಪರಸ್ಪರ ಆರೋಪ-ಪ್ರತ್ಯಾರೋಪಗಳು ಮಾತ್ರವಲ್ಲದೇ ಇಬ್ಬರು ಪರಸ್ಪರ ಪಂಥಾಹ್ವಾನಕ್ಕೆ ಕರೆದಂತಹ ಘಟನೆಯೂ ನಡೆಯಿತು.

ಮಾಜಿ ಸಿಎಂ ಚರಣ್‌ಜಿತ್‌ ಸಿಂಗ್‌ ಛನ್ನಿ ಅವರು ರವನೀತ್‌ ಸಿಂಗ್‌ ಬಿಟ್ಟೂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಲವು ವರ್ಷಗಳ ಹಿಂದೆ ನಿಮ್ಮ ತಾತ ಹುತಾತ್ಮರಾಗಿದ್ದರು. ಆದರೆ ನೀವು ಯಾವಾಗ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾದಿರೋ ಅಂದು ಅವರು ನಿಜವಾಗಿ ಸಾವನ್ನಪ್ಪಿದ್ದು ಎಂದು ಕೆಣಕಿದರು. ಬಿಟ್ಟೂ ಅವರ ತಾತ ಮಾಜಿ ಸಿಎಂ ಬಿಯಾಂತ್‌ ಸಿಂಗ್‌ ಅವರನ್ನು 1995ರಲ್ಲಿ ಆತ್ಮಾಹುತಿ ಬಾಂಬರ್‌ಗಳು ಹತ್ಯೆ ಮಾಡಿದ್ದರು.

ನಂತರ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಛನ್ನಿ, ಬ್ರಿಟಿಷ್‌ ಆಡಳಿತ ಮತ್ತು ನರೇಂದ್ರ ಮೋದಿ ಸರ್ಕಾರ ನಡುವೆ ಯಾವುದೇ ವ್ಯತ್ಯಾಸ ಇಲ್ಲ. ಸರ್ವಾಧಿಕಾರಿ ಸರ್ಕಾರ ಇದಾಗಿದೆ ಎಂದು ಕಿಡಿ ಕಾರಿದರು.

ಇನ್ನು ಛನ್ನಿ ವಾಗ್ದಾಳಿಯಿಂದ ಕೆರಳಿದ ಸಚಿವ ಬಿಟ್ಟೂ, ನನ್ನ ತಾತ ವಿಚಾರದ ಎತ್ತಿದ ಮೇಲೆ ನಾನು ಸುಮ್ಮನಿದ್ದರೆ ಸರಿಯಾಗಲ್ಲ. ಪಕ್ಷಕ್ಕಾಗಿ ನನ್ನ ತಾತ ಪ್ರಾಣತ್ಯಾಗ ಮಾಡಿಲ್ಲ, ಬದಲಾಗಿ ದೇಶಕ್ಕಾಗಿ ಮಾಡಿದ್ದಾರೆ. ಛನ್ನಿ ಪಂಜಾಬ್‌ನಲ್ಲೇ ಅತಿ ಹೆಚ್ಚು ಹಣ ಇರುವ ವ್ಯಕ್ತಿ. ಅವರು ತಮ್ಮನ್ನು ತಾವು ಬಡವ ಎಂದು ಸಾಬೀತು ಪಡಿಸಿದರೆ ನಾನು ನನ್ನ ಹೆಸರನ್ನೇ ಬದಲಿಸಿಕೊಳ್ಳುತ್ತೇನೆ. ಛನ್ನಿ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್‌ ಕೂಡ ಇದೆ ಎಂದು ಹೇಳಿದ್ದಾರೆ.

ಕೊನೆಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಛನ್ನಿ, ಧೈರ್ಯ ಇದ್ದರೆ ಬಾ ಎಂದು ಪಂಥಾಹ್ವಾನ ನೀಡಿದರು. ಆಗ ಬಿಟ್ಟೂ ಆವೇಶದಲ್ಲಿ ಸದನ ಬಾವಿಗೆ ಇಳಿದರು. ಆವರನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ತಡೆದರು.

ಇದನ್ನೂ ಓದಿ: CM Siddaramaiah: ರೈತರು, ರಾಜ್ಯಕ್ಕೆ ಕೇಂದ್ರ ಪಂಗನಾಮ; ತಿಂಡಿ ತಿನ್ನುತ್ತಲೇ ಬಜೆಟ್‌ ಬಗ್ಗೆ ಸಿದ್ದರಾಮಯ್ಯ ಆಕ್ರೋಶ

Exit mobile version