ನವದೆಹಲಿ: ಪ್ರತಿಪಕ್ಷಗಳ ವಿರೋಧದ ನಡುವೆಯೇ ಬಹುಚರ್ಚಿತ ವಕ್ಫ್ ತಿದ್ದುಪಡಿ ಮಸೂದೆಯನ್ನು(Waqf Amendment Bill) ಸಂಸತ್(Parliament Session)ನಲ್ಲಿ ಇಂದು ಮಂಡನೆಯಾಗಿದೆ. ಇದೀಗ ಈ ಮದೂದೆಯ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕೇಂದ್ರ ಸರ್ಕಾರ ಕಳುಹಿಸಿದೆ. ಇಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ(Union Minister of Minority Affairs) ಕಿರಣ್ ರಿಜಿಜು(Kiren Rijiju) ಮಸೂದೆಯನ್ನು ಮಂಡಿಸಿದ್ದಾರೆ.
ವಕ್ಫ್ ಕಾಯ್ದೆ 1995ಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಹಾಗೂ ವಕ್ಫ್ ಕಾಯಿದೆ, 1995 ಅನ್ನು ʼಏಕೀಕೃತ ವಕ್ಫ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯಿದೆ-1995ʼ ಎಂದು ಮರುನಾಮಕರಣ ಮಾಡುವ ಗುರಿಯೊಂದಿಗೆ ಇಂದು ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿದೆ.
ಇನ್ನು ಈ ಮಸೂದೆಗೆ ವಿರೋಧ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ತಕ್ಷಣ ಇದನ್ನು ಹಿಂಪಡೆಯುವಂತೆ ಆಗ್ರಹಿಸಿವೆ. ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಾತನಾಡಿ, ನಾವು ಹಿಂದೂಗಳು. ಆದರೆ ನಮ್ಮ ಧರ್ಮದ ಜೊತೆಗೆ ನಾವು ಇತರ ಧರ್ಮಗಳ ನಂಬಿಕೆಯನ್ನು ಗೌರವಿಸುತ್ತೇವೆ. ಈ ಮಸೂದೆಯು ಮಹಾರಾಷ್ಟ್ರ, ಹರಿಯಾಣ ಚುನಾವಣೆಗಳ ದೃಷ್ಟಿಯಿಂದ ಮಂಡನೆ ಮಾಡಲಾಗಿದೆ.
ಕಳೆದ ಬಾರಿ ಭಾರತದ ಜನತೆ ನಿಮಗೆ ಪಾಠ ಕಲಿಸಿದ್ದು ನಿಮಗೆ ಅರ್ಥವಾಗುತ್ತಿಲ್ಲ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ. ಈ ಮಸೂದೆಯು ಸಂವಿಧಾನದ ಮೇಲಿನ ಮೂಲಭೂತ ದಾಳಿಯಾಗಿದೆ…ಈ ಮಸೂದೆಯ ಮೂಲಕ, ಅವರು ಮುಸ್ಲಿಮೇತರರೂ ವಕ್ಫ್ ಆಡಳಿತ ಮಂಡಳಿಯ ಸದಸ್ಯರಾಗಬೇಕೆಂಬ ನಿಬಂಧನೆಯನ್ನು ಹಾಕುತ್ತಿದ್ದಾರೆ. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದು ಕಿಡಿ ಕಾರಿದ್ದಾರೆ.
ಏನೆಲ್ಲ ತಿದ್ದುಪಡಿ?
ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪಾರದರ್ಶಕ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅದರಲ್ಲೂ, ಯಾವುದಾದರೂ ಒಂದು ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಿಸುವ ಪರಮಾಧಿಕಾರ ತೆಗೆಯಲಿದೆ. ಇನ್ನು, ವಕ್ಫ್ ಆಸ್ತಿಗಳ ಮೇಲೆ ನಿಗಾ ಇರಿಸುವ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಇದುವರೆಗೆ ವಕ್ಫ್ ಮಂಡಳಿಯಲ್ಲಿ ಹೆಣ್ಣುಮಕ್ಕಳ ಸಹಭಾಗಿತ್ವವೇ ಇರಲಿಲ್ಲ. ಹಾಗಾಗಿ, ಪ್ರತಿಯೊಂದು ರಾಜ್ಯಗಳ ವಕ್ಫ್ ಮಂಡಳಿಗಳಲ್ಲಿ ಹೆಣ್ಣುಮಕ್ಕಳಿಗೂ ಸ್ಥಾನ ನೀಡುವುದು. ರಾಜ್ಯಗಳ ಮಂಡಳಿಗಳಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿಗೆ ಸ್ಥಾನ ನೀಡುವುದು. ಕೇಂದ್ರ ಸಮಿತಿಗಳಲ್ಲೂ ಇಬ್ಬರೂ ಹೆಣ್ಣುಮಕ್ಕಳು ಇರಬೇಕು ಎಂಬ ನಿಯಮ ಜಾರಿಗೆ ತರುವುದು. ಮುಸ್ಲಿಮರು ಕೂಡ ವಕ್ಫ್ ಆಸ್ತಿಯನ್ನು ಸೃಷ್ಟಿಸಬಹುದು ಎಂಬ ನಿಯಮ ಜಾರಿಗೊಳಿಸುವುದು ಸೇರಿ ಹಲವು ತಿದ್ದುಪಡಿಗಳಿಗೆ ಪ್ರಸ್ತಾವನೆ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Parliament Session: ವಿನೇಶ್ ಫೋಗಟ್ ಅನರ್ಹತೆಯ ವಿಚಾರ ಚರ್ಚೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ, ಸಭಾತ್ಯಾಗ