Site icon Vistara News

Parliament Session: ಸಾಮೂಹಿಕ ಅಮಾನತು ವಿರುದ್ಧ ವಿಪಕ್ಷ ಸಂಸದರ ಪ್ರತಿಭಟನೆ, ಮೆರವಣಿಗೆ

mp's protest

ಹೊಸದಿಲ್ಲಿ: ಲೋಕಸಭೆ (Lok Sabha) ಮತ್ತು ರಾಜ್ಯಸಭೆಗಳ (Rajya Sabha) ಅಧಿವೇಶನದಿಂದ (Parliament Session) ಸಂಸದರನ್ನು ಸಾಮೂಹಿಕವಾಗಿ ಅಮಾನತು (Mass Suspension from parliament) ಮಾಡಿರುವ ಕ್ರಮವನ್ನು ವಿರೋಧಿಸಿ ವಿಪಕ್ಷಗಳ ಸಂಸದರು (Opposition members) ಇಂದು ಬೆಳಗ್ಗೆ ಪ್ರತಿಭಟನೆ (MPs Protest) ಹಾಗೂ ಮೆರವಣಿಗೆ (MPs March) ನಡೆಸಿದರು.

ಹೊಸದಿಲ್ಲಿಯ ಹಳೆ ಸಂಸತ್‌ ಕಟ್ಟಡದಿಂದ ಮಧ್ಯ ದಿಲ್ಲಿಯ ವಿಜಯ್‌ ಚೌಕ್‌ವರೆಗೆ ಸುಮಾರು ಒಂದು ಕಿಲೋಮೀಟರ್‌ ದೂರ “ಪ್ರಜಾಪ್ರಭುತ್ವ ಉಳಿಸಿ” ಎಂಬ ಬ್ಯಾನರ್‌ ಹಿಡಿದು ಸಂಸದರು ಪ್ರತಿಭಟನಾ ಮೆರವಣಿಗೆ ನಡೆಸಿದರು. “ಪ್ರತಿಪಕ್ಷದ ಸಂಸದರನ್ನು ಅಮಾನತುಗೊಳಿಸಲಾಗಿದೆ! ಇದು ಪ್ರಜಾಪ್ರಭುತ್ವದ ಅಂತ್ಯವೇ?” “ಸಂಸತ್ತು ಪಂಜರದಲ್ಲಿದೆ, ಪ್ರಜಾಪ್ರಭುತ್ವವನ್ನು ಹೊರಹಾಕಲಾಗಿದೆ!” ಎಂದು ಬರೆಯಲಾದ ಫಲಕಗಳನ್ನು ಪ್ರದರ್ಶಿಸಿದರು.

ಕಳೆದ ವಾರ ಸಂಸತ್ತಿನಲ್ಲಿ ಭದ್ರತೆ ಉಲ್ಲಂಘನೆಗೆ ಸರ್ಕಾರ ಉತ್ತರ ನೀಡಬೇಕು ಎಂದು ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿ ತೋರಿದ ಅಶಿಸ್ತಿನ ನಡವಳಿಕೆಗಾಗಿ 140ಕ್ಕೂ ಹೆಚ್ಚು ಸಂಸದರನ್ನು ಸ್ಪೀಕರ್‌ ಹಾಗೂ ರಾಜ್ಯಸಭೆ ಅಧ್ಯಕ್ಷರು ಹೊರಹಾಕಿದ್ದರು. ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ 22ನೇ ಕರಾಳ ನೆನಪಿನ ದಿನದಂದು ಭದ್ರತೆ ಉಲ್ಲಂಘನೆಯಾಗಿತ್ತು. ಈ ಕುರಿತು ಇದುವರೆಗೆ 7 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಈ ಕುರಿತು ಔಪಚಾರಿಕ ಹೇಳಿಕೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಲಾಗಿದೆ. ಈ ಪ್ರಕರಣವನ್ನು ಉಲ್ಲೇಖಿಸಿ ಇಬ್ಬರೂ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ, ಆದರೆ ಸಂಸತ್ತಿನಲ್ಲಿ ಹೇಳಿಕೆ ನೀಡಿಲ್ಲ.

ಇಂದು ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದರು. “ಬಿಜೆಪಿಗೆ ಹೆಚ್ಚಿನ ಪ್ರತಿಪಕ್ಷ ಸದಸ್ಯರನ್ನು ಹೊರಹಾಕಿದ ನಂತರ ನಿನ್ನೆ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತಂದಿದೆ. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ” ಎಂದು ಆರೋಪಿಸಿದರು. “ಸಂಸತ್ತಿನ ಭದ್ರತೆ ಉಲ್ಲಂಘನೆಯ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡುವಂತೆ ನಾವು ಲೋಕಸಭೆ ಸ್ಪೀಕರ್, ರಾಜ್ಯಸಭಾ ಅಧ್ಯಕ್ಷರಿಗೆ ಪದೇ ಪದೆ ವಿನಂತಿಸಿದ್ದೇವೆ. ಪ್ರಧಾನಿ ಮೋದಿ, ಗೃಹ ಸಚಿವರು ಭದ್ರತಾ ಲೋಪದ ಬಗ್ಗೆ ಸದನದಲ್ಲಿ ಮಾತನಾಡಬೇಕಿತ್ತು. ಪ್ರಧಾನಿ ಬೇರೆಡೆ ಮಾತನಾಡಿದ್ದಾರೆ. ಆದರೆ ಲೋಕಸಭೆ, ರಾಜ್ಯಸಭೆಗೆ ಹಾಜರಾಗಲಿಲ್ಲ” ಎಂದು ಖರ್ಗೆ ಹೇಳಿದರು.

ತನಿಖೆ ನಡೆಯುತ್ತಿದೆ ಎಂದು ಹೇಳಿರುವುದನ್ನು ಹೊರತುಪಡಿಸಿ, ಉಲ್ಲಂಘನೆಯ ಬಗ್ಗೆ ಚರ್ಚಿಸಲು ಸರ್ಕಾರ ನಿರಾಕರಿಸಿದೆ. ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಸಂಪೂರ್ಣ ವರದಿಯು ವಿರೋಧ ಪಕ್ಷದ ಸಂಸದರಿಗೆ ಲಭ್ಯವಿರುತ್ತದೆ ಎಂದು ಹೇಳಿದ್ದಾರೆ. ಆದರೆ ವಿಪಕ್ಷಗಳು ಮೋದಿ ಅಥವಾ ಶಾ ಹೇಳಿಕೆಗೆ ಪಟ್ಟು ಹಿಡಿದಿವೆ.

ನಿನ್ನೆ ನಡೆದ ಸಂಸದರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಟಿಎಂಸಿ ಸಂಸದ ಕಲ್ಯಾಣ್‌ ಬ್ಯಾನರ್ಜಿ, ರಾಜ್ಯಸಭೆ ಅಧ್ಯಕ್ಷ ಜಗದೀಪ್‌ ಧನ್‌ಕರ್‌ ಅವರ ಮಿಮಿಕ್ರಿ ಮಾಡಿದ್ದರು. ಇದನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರೆಕಾರ್ಡ್‌ ಮಾಡಿಕೊಂಡಿದ್ದರು. ಇದು ʼನಾಚಿಕೆಗೇಡಿನ ವರ್ತನೆʼ ಎಂದು ಉಪ ರಾಷ್ಟ್ರಪತಿ ಸೇರಿದಂತೆ ಹಲವರು ಛೀಮಾರಿ ಹಾಕಿದ್ದರು.

ಇದನ್ನೂ ಓದಿ: Congress Protest: ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ; ಸಂಸದರ ಅಮಾನತು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

Exit mobile version