ನವದೆಹಲಿ: ಲೋಕಸಭಾ ಚುನಾವಣೆ ನಡೆದು ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರದ ಮೊದಲ ಅಧಿವೇಶನ (Parliament Session)ದ ಕೊನೆಯ ದಿನವಾದ ಇಂದು (ಜುಲೈ 3) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜ್ಯಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯದ ಕುರಿತು ಮಾತನಾಡಲಿದ್ದಾರೆ. ಮಂಗಳವಾರ ಅವರು ಲೋಕಸಭೆಯಲ್ಲಿ ಮಾತನಾಡಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರಿಸಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಅಂಗೀಕರಿಸಿದ ನಂತರ ಹೊಸದಾಗಿ ರಚನೆಯಾದ 18ನೇ ಲೋಕಸಭೆಯ ಮೊದಲ ಅಧಿವೇಶನವನ್ನು ಸ್ಪೀಕರ್ ಓಂ ಬಿರ್ಲಾ ಮಂಗಳವಾರ ಅನಿರ್ದಿಷ್ಟಾವಧಿಗೆ ಮುಂದೂಡಿದರು. ಜೂನ್ 24ರಂದು ಪ್ರಾರಂಭವಾದ ಅಧಿವೇಶನವು ಮೊದಲ ಎರಡು ದಿನಗಳಲ್ಲಿ 539 ಲೋಕಸಭಾ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ಮೋದಿ ಅವರ ಭಾಷಣದ ವೇಳೆ ರಾಜ್ಯಸಭೆಯಲ್ಲಿ ಆಡಳಿತರೂಢ ಪಕ್ಷದ ಸದಸ್ಯರು ಮತ್ತು ಪ್ರತಿಪಕ್ಷಗಳ ವಾಗ್ವಾದ ನಡೆಯುವ ಸಾಧ್ಯತೆ ಇದೆ.
ಲೋಕಸಭೆಯಲ್ಲಿ ಮೋದಿ ಹೇಳಿದ್ದೇನು?
ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮವಾರ ನೀಟ್ ವಿವಾದ, ಅಗ್ನಿಪಥ್ ಯೋಜನೆ, ಮಣಿಪುರ ಸಂಘರ್ಷ ಮುಂತಾದ ವಿಚಾರಗಳ ಕುರಿತು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯ್ದರು. “ನಾನು ಕಾಂಗ್ರೆಸ್‌ನವರಿಗೆ ಜಾಣತನ ಕೊಡಲಿ ಎಂಬುದಾಗಿ ದೇವರಲ್ಲಿ ಪ್ರಾರ್ಥಿಸುತ್ತೇನೆ. ಬಾಲಬುದ್ಧಿಯ ನಾಯಕನಿಗೂ ಬುದ್ಧಿ ಕೊಡಲಿ. ರಾಷ್ಟ್ರಪತಿಯವರ ಭಾಷಣಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಹಾಗೆಯೇ, ಇಷ್ಟು ಹೊತ್ತು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿಯೂ ಧನ್ಯವಾದ ತಿಳಿಸುತ್ತೇನೆ. ಯಾರು ಎಷ್ಟೇ ಗಲಾಟೆ ಮಾಡಿದರೂ ನನ್ನ ಧ್ವನಿಯನ್ನು, ಸತ್ಯದ ಧ್ವನಿಯನ್ನು ಅಡಗಿಸಲು ಆಗುವುದಿಲ್ಲ. ನಾನು ಇದುವರೆಗೆ ಸತ್ಯದ ಅನುಭವವನ್ನು ಅನುಭವಿಸಿದ್ದೇನೆ” ಎಂದು ಮೋದಿ ಹೇಳಿದರು.
ಪ್ರತಿಪಕ್ಷಗಳ ಆಗ್ರಹದ ಮಧ್ಯೆಯೇ ನರೇಂದ್ರ ಮೋದಿ ಅವರು ನೀಟ್ ಅಕ್ರಮದ ಕುರಿತು ಮಾತನಾಡಿದರು. “ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಗಂಭೀರ ವಿಷಯವಾಗಿದೆ. ಇದು ನಮಗೂ ಆತಂಕ ತಂದಿದೆ. ಆದರೆ, ದೇಶದ ಯುವಕ-ಯುವತಿಯರಿಗೆ ನಮ್ಮ ಸರ್ಕಾರ ಒಂದು ಭರವಸೆ ನೀಡುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭವಿಷ್ಯಕ್ಕೆ ತೊಂದರೆಯಾಗಲು ನಾವು ಬಿಡುವುದಿಲ್ಲ. ನೀಟ್ ವಿಷಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿದೆ. ಇದಕ್ಕಾಗಿ ಮುಂದಿನ ದಿನಗಳಲ್ಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಹಲವು ಕ್ರಮ ತೆಗೆದುಕೊಳ್ಳಲಾಗಿದೆ. ಹಾಗಾಗಿ, ದೇಶದ ಯುವಕ-ಯುವತಿಯರು ಯೋಚಿಸಬೇಕಾದ ಅವಶ್ಯಕತೆ ಇಲ್ಲ” ಎಂದರು.
ಇದಕ್ಕೂ ಮೊದಲು ನರೇಂದ್ರ ಮೋದಿ ಅವರು ಮಂಗಳವಾರ ನಡೆದ ಸಂಸದೀಯ ಪಕ್ಷದ ಸಭೆಯಲ್ಲಿ ಎನ್‌ಡಿಎ (NDA) ಸಂಸದರಿಗೆ ಜನಪ್ರತಿನಿಧಿಯಾಗಿ ಹೇಗಿರಬೇಕು ಎಂದು ಸಲಹೆ ನೀಡಿದ್ದರು. ಸಂಸದೀಯ ನಿಯಮಗಳು ಮತ್ತು ನಡವಳಿಕೆಯನ್ನು ಅನುಸರಿಸುವಂತೆ ಮತ್ತು ಉತ್ತಮ ಅಭ್ಯಾಸಗಳನ್ನು ಹಿರಿಯ ಸದಸ್ಯರಿಂದ ಕಲಿಯುವಂತೆ ಸೂಚಿಸಿದ್ದರು.
ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕು. ಸಾರ್ವಜನಿಕವಾಗಿ ಮಾತನಾಡುವುದರಲ್ಲಿ ಏಕರೂಪತೆ ಇರಬೇಕು, ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಬೇಕು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಮೋದಿ ಕಿವಿ ಮಾತು ಹೇಳಿದ್ದರು.
ಇದನ್ನೂ ಓದಿ: Narendra Modi: ರಾಹುಲ್ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು