ಹೊಸದಿಲ್ಲಿ: ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿರುವ ಲೋಕಸಭೆಯಲ್ಲಿ (Parliament Session) ಅಮಾನತು ಪರ್ವ ಮುಂದುವರಿದಿದ್ದು, ಮತ್ತೆ 49 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸೋಮವಾರ ಉಭಯ ಸದನಗಳಿಂದ 78 ಪ್ರತಿಪಕ್ಷ ಸಂಸದರನ್ನು (ಲೋಕಸಭೆಯಿಂದ 33 ಮತ್ತು ರಾಜ್ಯಸಭೆಯಿಂದ 45) ಅಮಾನತುಗೊಳಿಸಲಾಗಿತ್ತು.
ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ನೀಡುವಂತೆ ಒತ್ತಾಯಿಸಿ ಸದನದೊಳಗೆ ಸಂಸದರು ಪ್ಲೇಕಾರ್ಡ್‌ಗಳನ್ನು ತಂದರು ಮತ್ತು ಘೋಷಣೆಗಳನ್ನು ಕೂಗಿದರು. ಈ ಅಶಿಸ್ತಿನ ವರ್ತನೆ ಮತ್ತು ಕಲಾಪಕ್ಕೆ ಅಡ್ಡಿಪಡಿಸಿದ ಸಂಸದರನ್ನು ಅಮಾನತುಗೊಳಿಸಲಾಯಿತು. ಈ ಅಮಾನತುಗಳನ್ನು ವಿರೋಧಿಸಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಂಸತ್ತಿನ ಚಳಿಗಾಲದ ಅಧಿವೇಶನದ ಉಳಿದ ಅವಧಿಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಿವೆ.
ಸಂಸತ್ತಿನ ಭದ್ರತಾ ಉಲ್ಲಂಘನೆಯ ವಿಷಯದಲ್ಲಿ ಪ್ರತಿಪಕ್ಷದ ಸದಸ್ಯರು ಸದನದಲ್ಲಿ ಗದ್ದಲವನ್ನು ಮುಂದುವರೆಸಿದ ಪರಿಣಾಮ ರಾಜ್ಯಸಭೆಯನ್ನು ಮಂಗಳವಾರದ ಊಟಕ್ಕೂ ಮೊದಲೆ ಎರಡು ಬಾರಿ ಮುಂದೂಡಲಾಯಿತು. ಸ್ಪೀಕರ್, ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ವರ್ತನೆಯನ್ನು ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಮಿಮಿಕ್ರಿ ಮಾಡಿದರು. ಇದನ್ನು ರಾಹುಲ್ ಗಾಂಧಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಇದನ್ನು ಪ್ರಸ್ತಾಪಿಸಿದ ಸಭಾಪತಿ, ಇದು ನಾಚಿಕೆಗೇಡಿನ ಸಂಗತಿಯಾಗಿದೆ, ಯಾವುದಕ್ಕೂ ಮಿತಿ ಇರಬೇಕು ಎಂದು ಟೀಕಿಸಿದರು.
ಮಧ್ಯಾಹ್ನ ಸದನ ಸಭೆ ಸೇರಿದ ಕೂಡಲೇ ಸಭಾಪತಿ ಜಗದೀಪ್ ಧನ್‌ಕರ್ ಅವರು ಹಿರಿಯ ಕಾಂಗ್ರೆಸ್ ಸದಸ್ಯ ದಿಗ್ವಿಜಯ ಸಿಂಗ್ ಅವರನ್ನು ಅವ್ಯವಸ್ಥೆ ಉಂಟುಮಾಡಿದ್ದಕ್ಕಾಗಿ ಎಚ್ಚರಿಸಿ ಕುಳಿತುಕೊಳ್ಳುವಂತೆ ಸೂಚಿಸಿದರು. “ನಾನು ಸ್ವಲ್ಪ ಸಮಯದ ಹಿಂದೆ ಟಿವಿ ಚಾನೆಲ್‌ನಲ್ಲಿ ನೋಡಿದೆ. ಅಧಃಪತನಕ್ಕೆ ಮಿತಿಯೇ ಇಲ್ಲದಂತಾಗಿದೆ. ನಿಮ್ಮ ಪಕ್ಷದ ಹಿರಿಯ ನಾಯಕರೊಬ್ಬರು ಮತ್ತೊಬ್ಬ ಸಂಸದರ ಅಸಂಸದೀಯ ವರ್ತನೆಯನ್ನು ವಿಡಿಯೋ ಮಾಡುವುದನ್ನು ನಾನು ನೋಡಿದ್ದೇನೆ. ಅವರು ನಿಮಗಿಂತ ದೊಡ್ಡ ನಾಯಕ ಕೂಡ” ಎಂದು ಛೇಡಿಸಿದರು. “ಪ್ರಜ್ಞಾವಂತಿಕೆ ಮಾತ್ರ ಮೇಲುಗೈ ಸಾಧಿಸಬೇಕು. ಕನಿಷ್ಠ ಕೆಲವು ಸ್ಥಳಗಳನ್ನಾದರೂ ಬಿಟ್ಟುಬಿಡಿ” ಎಂದು ಹೇಳಿದರು.
“ಸಭಾಪತಿಯ ಮಿಮಿಕ್ರಿ ಮಾಡುವುದು ಎಷ್ಟು ಹಾಸ್ಯಾಸ್ಪದ, ಎಷ್ಟೊಂದು ನಾಚಿಕೆಗೇಡಿನ ಸಂಗತಿ. ಇದು ಸ್ವೀಕಾರಾರ್ಹವಲ್ಲ. ಜೊತೆಗೆ ನಿಮ್ಮ ಪಕ್ಷದ ಹಿರಿಯ ನಾಯಕರು ಮತ್ತೊಂದು ಪಕ್ಷದ ಇನ್ನೊಬ್ಬ ಸದಸ್ಯರ ವರ್ತನೆಯನ್ನು ವೀಡಿಯೊಗ್ರಾಫ್ ಮಾಡುವುದು, ಇದು ನಾಚಿಕೆಗೇಡುʼʼ ಎಂದರು. ಸಭಾಪತಿ ಧನ್‌ಕರ್ ಅವರನ್ನು ಅಪಹಾಸ್ಯ ಮತ್ತು ಅನುಕರಣೆ ಮಾಡಿದ್ದನ್ನು ಹಾಗೂ ಅದನ್ನು ರಾಹುಲ್ ಚಿತ್ರೀಕರಣ ಮಾಡಿಕೊಂಡಿದ್ದನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.
ಇದನ್ನೂ ಓದಿ: Parliament Session: ಅಮಿತ್ ಶಾ ಹೇಳಿಕೆಗೆ ಆಗ್ರಹಿಸುತ್ತಿದ್ದ 90 ಸಂಸದರು ಅಮಾನತು!