ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ(Parliament Sessions)ದ ಮೂರನೇ ದಿನವಾದ ಇಂದು ಹಲವು ಮಹತ್ವದ ಘಟನೆಗಳಿಗೆ ಸಾಕ್ಷಿಯಾಯಿತು. ಇಂದು ಸ್ಪೀಕರ್ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಓಂ ಬಿರ್ಲಾ(Om Birla) ಅವರು ಎರಡನೇ ಬಾರಿ ಲೋಕಸಭೆಯ ಸ್ಪೀಕರ್ ಆಗಿ ಚುನಾಯಿತರಾಗಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಪರಸ್ಪರ ಹಸ್ತಾಲಾಘವ(Shake Hand) ಮಾಡಿದ ಅಪರೂಪದ ಕ್ಷಣಗಳಿಗೆ ಇಡೀ ಸದನವೇ ಸಾಕ್ಷಿ ಆಯಿತು.
ಓಂ ಬಿರ್ಲಾ ಅವರು ಸ್ಪೀಕರ್ ಆಗಿ ಚುನಾಯಿತರಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಪಕ್ಷ ನಾಯಕರ ರಾಹುಲ್ ಗಾಂಧಿ ತಮ್ಮ ತಮ್ಮ ಸ್ಥಾನಗಳಿಂದ ಎದ್ದು ಬಂದು ಓಂ ಬಿರ್ಲಾ ಅವರನ್ನು ಸ್ವಾಗತಿಸಿದರು. ಈ ವೇಳೆ ಪರಸ್ಪರ ಶೇಕ್ ಹ್ಯಾಂಡ್ ಮಾಡಿಕೊಂಡರು. ಬಳಿಕ ಓಂ ಬಿರ್ಲಾ ಅವರನ್ನು ಅವರ ಸೀಟ್‌ವರೆಗೆ ಕರೆದೊಯ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
PM Modi, LOP Rahul Gandhi both accompanying newly elected speaker OM Birla ji to the chair…
— Mr Sinha (@MrSinha_) June 26, 2024
Finally a positive scene from our parliament….I hope it lasts.. pic.twitter.com/dojKCm9mi8
18ನೇ ಲೋಕಸಭೆಯ ಸ್ಪೀಕರ್ ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಎನ್‌ಡಿಎಯಿಂದ ಕಣಕ್ಕಿಳಿದ ಬಿಜೆಪಿ ಸಂಸದ ಓಂ ಬಿರ್ಲಾ (Om Birla) ಅವರು ಸ್ಪೀಕರ್ ಆಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ (Lok Sabha Speaker). ಸಾಮಾನ್ಯವಾಗಿ ಅವಿರೋಧವಾಗಿ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಆಡಳಿತ ರೂಢ ಎನ್‌ಡಿಎ ಮತ್ತು ಪ್ರತಿಪಕ್ಷಗಳ ಇಂಡಿ ಬಣದ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಹಲವು ದಶಕಗಳ ಬಳಿಕ ಚುನಾವಣೆ ನಡೆಸಲಾಯಿತು. ಇಂಡಿ ಬಣದಿಂದ ಕಾಂಗ್ರೆಸ್ ಸಂಸದ ಕೊಂಡಿಕುನಾಲ್ ಸುರೇಶ್ (Kondikunal Suresh) ಕಣಕ್ಕಿಳಿದಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಈ ಐತಿಹಾಸಿಕ ಚುನಾವಣೆಯಲ್ಲಿ ಇದೀಗ ಓಂ ಬಿರ್ಲಾ ಗೆಲುವಿನ ನಗೆ ಬೀರಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ಸುಮಾರಿಗೆ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಓಂ ಬಿರ್ಲಾ ಅವರು ಬಹುಮತಗಳನ್ನು ಪಡೆದುಕೊಂಡರು. ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆ ಮಾಡುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ಮಂಡಿಸಿದರು. ಬಳಿಕ ಹಲವು ನಾಯಕರು ಅನುಮೋದಿಸಿದರು. ಧ್ವನಿ ಮತದ ಮೂಲಕ ಸದಸ್ಯರು ಮತ ಚಲಾಯಿಸಿದರು. ಈ ಮೂಲಕ ಓಂ ಬಿರ್ಲಾ ಅವರು ಬಲರಾಮ್ ಜಖರ್ (1980-89) ನಂತರ ಎರಡು ಪೂರ್ಣ ಅವಧಿಗೆ ಆಯ್ಕೆಯಾದ ಎರಡನೇ ಸ್ಪೀಕರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಲೋಕಸಭೆಯ ಎರಡನೇ ಸ್ಪೀಕರ್ ಎಂ.ಎ.ಅಯ್ಯಂಗಾರ್ ಮತ್ತು ಗುರ್ದಿಯಾಲ್ ಸಿಂಗ್ ಧಿಲ್ಲಾನ್ ಈ ಹಿಂದೆ ಎರಡು ಬಾರಿ ಈ ಹುದ್ದೆಯನ್ನು ಆಯ್ಕೆಯಾಗಿದ್ದರೂ ಅವರ ಎರಡನೇ ಅವಧಿ ಒಂದೂವರೆ ವರ್ಷಕ್ಕಿಂತ ಹೆಚ್ಚು ಕಾಲ ಉಳಿದಿರಲಿಲ್ಲ. ಹಂಗಾಮಿ ಸ್ಪೀಕರ್ ಭಾರ್ತೃಹರಿ ಮಹತಾಬ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು