Site icon Vistara News

Winter Session: ಇಂದು ಸಂಸತ್‌ ಸರ್ವಪಕ್ಷ ನಾಯಕರ ಸಭೆ, ಅಜೆಂಡಾದಲ್ಲಿ ಏನಿದೆ?

parliament winter session

ಹೊಸದಿಲ್ಲಿ: ಇಂದು ಲೋಕಸಭೆ (Lok Sabha) ಮತ್ತು ರಾಜ್ಯಸಭೆಯ (Rajya Sabha) ರಾಜಕೀಯ ಪಕ್ಷಗಳ ನಾಯಕರ ಸಭೆಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Prahlad Joshi) ಅವರು ನಡೆಸಲಿದ್ದಾರೆ. ಡಿಸೆಂಬರ್ 22ರವರೆಗೆ ನಡೆಯಲಿರುವ ಸಂಸತ್ತಿನ ಚಳಿಗಾಲದ ಕಲಾಪದ (Parliament Winter Session) ಕುರಿತು ಚರ್ಚಿಸಲು ಸಭೆ ಕರೆಯಲಾಗಿದೆ.

ಡಿಸೆಂಬರ್‌ 22ರವರೆಗೆ ಲೋಕಸಭೆ- ರಾಜ್ಯಸಭೆಯ 15 ದಿನದ ಕಲಾಪಗಳು ನಡೆಯಲಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath singh), ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಂತಹ ಹಿರಿಯ ಬಿಜೆಪಿ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಚಳಿಗಾಲದ ಅಧಿವೇಶನದ (parliament winter session) ಶಾಸಕಾಂಗ ಕಾರ್ಯಸೂಚಿಯನ್ನು ರೂಪಿಸಲು ಮತ್ತು ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಭೆಯು ಉದ್ದೇಶಿಸಿದೆ.

ಪ್ರಸ್ತುತ ಸಂಸತ್ತಿನಲ್ಲಿ 37 ವಿಧೇಯಕಗಳು ಬಾಕಿ ಉಳಿದಿವೆ. ಅವುಗಳಲ್ಲಿ 12ನ್ನು ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿಮಾಡಲಾಗಿದೆ. ಏಳು ವಿಧೇಯಕಗಳನ್ನು ಪರಿಚಯ, ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ನಿಗದಿಪಡಿಸಲಾಗಿದೆ. ಅವುಗಳಲ್ಲಿ ವಸಾಹತುಶಾಹಿ ಯುಗದ ಕ್ರಿಮಿನಲ್ ಕಾನೂನುಗಳನ್ನು ಬದಲಿಸುವ ಮೂರು ವಿಧೇಯಕಗಳಿವೆ- ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಸಾಕ್ಷಿ ಕಾಯಿದೆ.

ಸಂಸತ್ತಿನಲ್ಲಿ ಬಾಕಿ ಉಳಿದಿರುವ ಮತ್ತೊಂದು ಪ್ರಮುಖ ವಿಧೇಯಕವೆಂದರೆ ಮುಖ್ಯ ಚುನಾವಣಾ ಆಯುಕ್ತರ ಮತ್ತು ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದ್ದು. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರ್ಕಾರವು ಅದರ ಅಂಗೀಕಾರಕ್ಕೆ ಒತ್ತಾಯಿಸಿರಲ್ಲ. ಮಸೂದೆಯು CEC ಮತ್ತು ECಗಳ ಸ್ಥಾನಮಾನವನ್ನು ಕ್ಯಾಬಿನೆಟ್ ಕಾರ್ಯದರ್ಶಿಯ ಸ್ಥಾನಮಾನಕ್ಕೆ ತರಲು ಪ್ರಯತ್ನಿಸುತ್ತದೆ. ಪ್ರಸ್ತುತ, ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಮಾನವನ್ನು ಅನುಭವಿಸುತ್ತಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ವಿರುದ್ಧದ ʼಪ್ರಶ್ನೆಗೆ ಲಂಚʼ ಆರೋಪದ ಕುರಿತು ನೈತಿಕ ಸಮಿತಿಯ ವರದಿಯನ್ನು ಚಳಿಗಾಲದ ಅಧಿವೇಶನದ ಮೊದಲ ದಿನ ಲೋಕಸಭೆಯಲ್ಲಿ ಮಂಡಿಸಲಾಗುವುದು. ಲೋಕಸಭೆಯ ಸೆಕ್ರೆಟರಿಯೇಟ್‌ನಿಂದ ಪ್ರಸಾರವಾದ ಅಜೆಂಡಾ ಪೇಪರ್‌ಗಳ ಪ್ರಕಾರ, ನೀತಿಶಾಸ್ತ್ರ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್ ಸೋಂಕರ್ ಅವರು 6:4 ಬಹುಮತದೊಂದಿಗೆ ಸಮಿತಿಯ ಮೊದಲ ವರದಿಯನ್ನು ಸದನದ ಮೇಜಿನ ಮೇಲೆ ಇಡಲಿದ್ದಾರೆ.

ವರದಿಯನ್ನು ಬೆಂಬಲಿಸುವ ಸದಸ್ಯರಲ್ಲಿ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಸೇರಿದ್ದಾರೆ. ಅವರು ಈಗ ಬಿಜೆಪಿಯಲ್ಲಿದ್ದಾರೆ. ಕರಡು ವರದಿಯ ಪ್ರಕಾರ “ಮಹುವಾ ಮೊಯಿತ್ರಾ ಅವರು ಕಠಿಣ ಶಿಕ್ಷೆಗೆ ಅರ್ಹವಾದ ಗಂಭೀರ ಕೃತ್ಯ ಎಸಗಿದ್ದಾರೆ.”

“ಆದ್ದರಿಂದ ಸಮಿತಿಯು, ಸಂಸದೆ ಮಹುವಾ ಮೊಯಿತ್ರಾ ಅವರನ್ನು ಹದಿನೇಳನೇ ಲೋಕಸಭೆಯ ಸದಸ್ಯತ್ವದಿಂದ ಹೊರಹಾಕಬಹುದು ಎಂದು ಶಿಫಾರಸು ಮಾಡುತ್ತದೆ. ಮಹುವಾ ಮೊಯಿತ್ರಾ ಅವರ ಅತ್ಯಂತ ಆಕ್ಷೇಪಾರ್ಹ, ಅನೈತಿಕ, ಹೇಯ ಮತ್ತು ಕ್ರಿಮಿನಲ್ ನಡವಳಿಕೆಯ ದೃಷ್ಟಿಯಿಂದ, ಸಮಿತಿಯು ತೀವ್ರವಾದ, ಕಾನೂನಾತ್ಮಕ, ಕಾಲಮಿತಿಯ ಸಾಂಸ್ಥಿಕ ವಿಚಾರಣೆಯನ್ನು ಸರ್ಕಾರದಿಂದ ಬಯಸುತ್ತದೆ” ಎಂದು ವರದಿ ಹೇಳಿದೆ. ಸಮಿತಿಯು ಶಿಫಾರಸು ಮಾಡಿದ ಉಚ್ಚಾಟನೆ ಜಾರಿಗೆ ಬರುವ ಮೊದಲು ಸದನವು ವರದಿಯನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ: Winter Session: ಡಿಸೆಂಬರ್ 4ರಿಂದ 22ರವರೆಗೆ ಚಳಿಗಾಲದ ಸಂಸತ್ ಅಧಿವೇಶನ

Exit mobile version