Site icon Vistara News

Death in Flight : ಮಾರ್ಗ ಮಧ್ಯೆ ಪ್ರಯಾಣಿಕ ನಿಧನ; ದಿಲ್ಲಿಯಿಂದ ದೋಹಾಕ್ಕೆ ಹೊರಟಿದ್ದ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

Indigo airlines

#image_title

ನವ ದೆಹಲಿ: ದಿಲ್ಲಿಯಿಂದ ದೋಹಾಕ್ಕೆ ಹೋಗುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನವನ್ನು ಕರಾಚಿ ಏರ್‌ಪೋರ್ಟ್‌ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್‌ ಮಾಡಲಾಗಿದೆ. ಆದರೆ, ವಿಮಾನ ನಿಲ್ದಾಣದಲ್ಲಿ ತುರ್ತು ಚಿಕಿತ್ಸೆಯ ವೈದ್ಯರ ತಂಡ ಆಗಮಿಸುವ ಮುನ್ನವೇ ನೈಜೀರಿಯಾ ಮೂಲದ ಈ ಪ್ರಯಾಣಿಕ ಕೊನೆಯುಸಿರೆಳೆದಿದ್ದಾರೆ.

ದಿಲ್ಲಿಯಿಂದ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್‌ ವಿಮಾನ 6ಇ-1736 ವಿಮಾನ ಪ್ರಯಾಣ ಆರಂಭಿಸಿ ಸ್ವಲ್ಪ ಹೊತ್ತು ಆಗುತ್ತಿದ್ದಂತೆಯೇ ನೈಜೀರಿಯಾ ಮೂಲದ ಪ್ರಯಾಣಿಕರೊಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡಿತು. ಆಗ ಕ್ಯಾಪ್ಟನ್‌ ಅವರು ಕೂಡಲೇ ಕರಾಚಿಯ ಏರ್‌ ಟ್ರಾಫಿಕ್‌ ಕಂಟ್ರೋಲನ್ನು ಸಂಪರ್ಕಿಸಿ ವೈದ್ಯಕೀಯ ತುರ್ತು ಚಿಕಿತ್ಸೆಯ ಅವಶ್ಯಕತೆಯನ್ನು ವಿವರಿಸಿದರು. ಕರಾಚಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನದ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಿದರು. ಕೆಲವು ವಿಮಾನಗಳ ಸಂಚಾರದಲ್ಲಿ ಬದಲಾವಣೆ ಮಾಡಿದ್ದಲ್ಲದೆ, ವೈದ್ಯಕೀಯ ತಂಡವನ್ನು ಸಿದ್ಧಪಡಿಸಿದರು.

ಅದರ ನಡುವೆಯೇ ವಿಮಾನ ಕರಾಚಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಇಳಿಯಿತು. ಕೂಡಲೇ ವೈದ್ಯಕೀಯ ತಂಡ ವಿಮಾನದತ್ತ ಧಾವಿಸಿತು. ಆದರೆ, ಅಷ್ಟು ಹೊತ್ತಿಗೆ ನೈಜೀರಿಯಾದ ಪ್ರಜೆ ಉಸಿರು ಚೆಲ್ಲಿದ್ದರು.

ಮೃತರನ್ನು 60 ವರ್ಷದ ಅಬ್ದುಲ್ಲಾ ಎಂದು ಗುರುತಿಸಲಾಗಿದ್ದು, ಕರಾಚಿ ವಿಮಾನ ನಿಲ್ದಾಣದ ವೈದ್ಯಾಧಿಕಾರಿಗಳು ಡೆತ್‌ ಸರ್ಟಿಫಿಕೇಟ್‌ ನೀಡಿದರು.

ಸಾವಿನ ಘಟನೆಯಿಂದ ನಮಗೆ ತುಂಬಾ ನೋವಾಗಿದೆ. ಮೃತರ ಕುಟುಂಬಕ್ಕೆ ನಮ್ಮ ಸಾಂತ್ವನಗಳನ್ನು ಹೇಳಲು ಬಯಸುತ್ತೇವೆ. ಆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬೇರೆ ವಿಮಾನದ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಯಿತು ಎಂದು ಇಂಡಿಗೋ ಏರ್‌ಲೈನ್ಸ್‌ ತಿಳಿಸಿದೆ.

ಇದನ್ನೂ ಓದಿ : Air Asia Flight: ಬೆಂಗಳೂರಿನಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷದಲ್ಲಿ ಏರ್‌ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ

Exit mobile version