ನವದೆಹಲಿ: ವಿಮಾನ ಹಾರಾಟ ನಡೆಸುತ್ತಿದ್ದಾಗಲೇ ಸಹ ಪ್ರಯಾಣಿಕರ ಜತೆ ಜಗಳವಾಡುವುದು, ಕುಡಿದ ಮತ್ತಿನಲ್ಲಿ ಗಗನಸಖಿಯರ ಜತೆ ಅನುಚಿತವಾಗಿ ವರ್ತನೆ ಮಾಡುವುದು, ಶೌಚಾಲಯಕ್ಕೆ ತೆರಳಿ ಸಿಗರೇಟ್ ಸೇದಲು ಯತ್ನಿಸುವುದು, ವಿಮಾನದ ತುರ್ತು ನಿರ್ಗಮನ ದ್ವಾರವನ್ನು ತೆರೆಯುವುದು… ಹೀಗೆ, ಇತ್ತೀಚೆಗೆ ವಿಮಾನಗಳಲ್ಲಿ ಪ್ರಯಾಣಿಕರ ದುರ್ವರ್ತನೆ ಮಿತಿಮೀರಿದೆ. ಇದರ ಬೆನ್ನಲ್ಲೇ, ಇಂಥಾದ್ದೇ ಮತ್ತೊಂದು ಘಟನೆ ನಡೆದಿದೆ. ಏರ್ ಇಂಡಿಯಾ ವಿಮಾನದಲ್ಲಿ (Air India) ಪ್ರಯಾಣಿಕನೊಬ್ಬ ವಿಮಾನದ ಹಿರಿಯ ಅಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾನೆ.
ಜುಲೈ 9ರಂದು ಆಸ್ಟ್ರೇಲಿಯಾದ ಸಿಡ್ನಿಯಿಂದ ನವದೆಹಲಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಸೀಟು ಸರಿಯಾಗಿರದ ಕಾರಣ ಆತನಿಗೆ ಎಕಾನಮಿ ಕ್ಲಾಸ್‌ನಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಎಕಾನಮಿ ಕ್ಲಾಸ್‌ನ ಸೀಟ್‌ನಲ್ಲಿ ಕೂತ ಆತ ಸೀಟಿನ ವಿಚಾರಕ್ಕಾಗಿ ಸಹ-ಪ್ರಯಾಣಿಕರೊಬ್ಬರ ವಿರುದ್ಧ ಸಿಟ್ಟಾಗಿ, ಜೋರು ಧ್ವನಿಯಲ್ಲಿ ಕೂಗಾಡಿದ್ದಾನೆ.
ಕೂಡಲೇ ವಿಮಾನದ ಹಿರಿಯ ಅಧಿಕಾರಿಯೊಬ್ಬರು ಪ್ರಯಾಣಿಕನ ಬಳಿ ಬಂದು, ದಯಮಾಡಿ ಜೋರಾಗಿ ಕೂಗಾಡಬೇಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕುಪಿತಗೊಂಡ ವ್ಯಕ್ತಿಯು, ಅಧಿಕಾರಿಗೆ ಕಪಾಳಮೋಕ್ಷ ಮಾಡಿ, ಆತ ತಲೆ ತಿರುಗಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದಾದ ಬಳಿಕವೂ ಸಹ ಪ್ರಯಾಣಿಕರಿಗೆ ಆತ ಕಿರಿಕಿರಿ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Air India: ವಿಮಾನದಲ್ಲಿ ಸಿಬ್ಬಂದಿಗೆ ಬೈದು ಟಾಯ್ಲೆಟ್ ಬಾಗಿಲು ಮುರಿದ ವ್ಯಕ್ತಿ; ಸಿಗರೇಟ್ ಚಟಕ್ಕಾಗಿ ಅವಾಂತರ
“ಸಿಡ್ನಿಯಿಂದ ಹೊರಟ ವಿಮಾನವು ದೆಹಲಿ ತಲುಪುತ್ತಲೇ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿದೆ. ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಇಂತಹ ಯಾವುದೇ ಅಸಭ್ಯ ವರ್ತನೆಯನ್ನು ಸಹಿಸಿಕೊಳ್ಳುವುದಿಲ್ಲ. ಪ್ರಯಾಣಿಕರಿಗೆ ವ್ಯಕ್ತಿಯು ತೊಂದರೆ ಕೊಟ್ಟಿದ್ದಾನೆ. ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ. ಮೌಖಿಕ ಹಾಗೂ ಲಿಖಿತ ಎಚ್ಚರಿಕೆ ನೀಡಿದರೂ ಹೀಗೆ ಮಾಡಿದ್ದಾನೆ” ಎಂದು ಏರ್ ಇಂಡಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೂ (DGCA) ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.