ನವದೆಹಲಿ: ಜನರ ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಆಯುರ್ವೇದ ಸಂಸ್ಥೆ (Patanjali Ayurved Ads) ಮುಖ್ಯಸ್ಥ ಬಾಬಾ ರಾಮದೇವ್ (Baba Ramdev) ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ (Acharya Balkrishna) ಅವರ ವಿರುದ್ಧದ ನ್ಯಾಯಾಂಗ ನಿಂದನೆ(contempt case) ಪ್ರಕರಣವನ್ನು ಸುಪ್ರೀಂಕೋರ್ಟ್(Supreme Court) ರದ್ದುಗೊಳಿಸಿದೆ.
ಆಧುನಿಕ ಔಷಧದ ವಿರುದ್ಧ ರಾಮ್‌ದೇವ್ ಮತ್ತು ಪತಂಜಲಿಯವರ ಅವಹೇಳನಕಾರಿ ಹೇಳಿಕೆಗಳ ವಿರುದ್ಧ 2022 ರಲ್ಲಿ ಸುಪ್ರೀಂ ಕೋರ್ಟ್‌ಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ, ಜನರ ದಾರಿ ತಪ್ಪಿಸುವ ಜಾಹೀರಾತುಗಳನ್ನು ಹಿಂಪಡೆಯುವಂತೆ ಆದೇಶ ನೀಡಿತ್ತು. ಕೊರ್ಟ್ ಆದೇಶದಂತೆ ಪತಂಜಲಿ ತನ್ನ ಎಲ್ಲಾ ಜಾಹೀರಾತನ್ನು ವಾಪಸ್ ಪಡೆದಿದೆ. ಹೀಗಾಗಿ ಅವರ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣವನ್ನು ರದ್ದುಗೊಳಿಸಲಾಗಿದೆ.
Supreme Court closes contempt case against Yog Guru Swami Ramdev and Patanjali Ayurved MD Acharya Balakrishna in misleading ads case. pic.twitter.com/LC9UzM3dfQ
— ANI (@ANI) August 13, 2024
ಏನಿದು ಪ್ರಕರಣ?
ಪತಂಜಲಿ ಸಂಸ್ಥೆ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು (IMA) ಅರ್ಜಿ ಸಲ್ಲಿಸಿದೆ. ಪತಂಜಲಿ ಸಂಸ್ಥೆಯು ಕೊರೊನಾ ನಿರೋಧಕ ಲಸಿಕೆ ಹಾಗೂ ಆಧುನಿಕ ಔಷಧ ಪದ್ಧತಿ ಬಗ್ಗೆ ಸುಳ್ಳು ಅಭಿಯಾನ ಆರಂಭಿಸಿದೆ. ಅಷ್ಟೇ ಅಲ್ಲ, ಅಲೋಪಥಿ ಸೇರಿ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಜನರ ದಾರಿ ತಪ್ಪಿಸುವ ರೀತಿ ಪತಂಜಲಿ ಸಂಸ್ಥೆಯು ಜಾಹೀರಾತುಗಳನ್ನು ನೀಡುತ್ತಿದೆ. ಇದು ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮೆಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಐಎಂಎ ಅರ್ಜಿ ಸಲ್ಲಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಿಚಾರಣೆ ನಡೆಸುವಾಗ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್ ಅಮಾನುಲ್ಲಾ ಅವರು ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ರೋಗಗಳ ನಿವಾರಣೆ ಕುರಿತು ಪತಂಜಲಿ ಸಂಸ್ಥೆಯು ಜನರ ದಾರಿತಪ್ಪಿಸುವ ರೀತಿ ಜಾಹೀರಾತು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿ ಸಂಸ್ಥೆ ಸಹ ಸಂಸ್ಥಾಪಕ ಬಾಬಾ ರಾಮದೇವ್ ಹಾಗೂ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಬಾಬಾ ರಾಮದೇವ್ ಆಪ್ತ ಆಚಾರ್ಯ ಬಾಲಕೃಷ್ಣ ಅವರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಹೊರಡಿಸಿತ್ತು. ಇಷ್ಟಾದರೂ, ಬಾಬಾ ರಾಮದೇವ್ ಆಗಲಿ, ಆಚಾರ ಬಾಲಕೃಷ್ಣ ಆಗಲಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದರಿಂದ ಕೆಂಡಾಮಂಡಲವಾದ ಸುಪ್ರೀಂ ಕೋರ್ಟ್, ಏಪ್ರಿಲ್ 2ರಂದು ಇಬ್ಬರೂ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಸೂಚಿಸಿತ್ತು. ಹಾಗೆಯೇ, ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನೇಕೆ ಆರಂಭಿಸಬಾರದು ಎಂದು ಕುಟುಕಿತ್ತು. ಇದಾದ ಬಳಿಕ ಇಬ್ಬರೂ ಸುಪ್ರೀಂ ಕೋರ್ಟ್‌ಗೆ ಬೇಷರತ್ ಕ್ಷಮೆಯಾಚಿಸಿದ್ದರು.
ಇದನ್ನೂ ಓದಿ: Patanjali: ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು, ಬಾಬಾ ರಾಮದೇವ್ ವಿರುದ್ಧ ಬಿತ್ತು ಕೇಸ್