Site icon Vistara News

Politics of Renaming : ಅಟಲ್​ಬಿಹಾರಿ ವಾಜಪೇಯಿ ಪಾರ್ಕ್​ನ ಹೆಸರು ಬದಲಾಯಿಸಿದ ಲಾಲೂ ಪುತ್ರ!

Patna's Atal Bihari Vajpayee Park

ಪಟಾನ: ಬಿಹಾರದ ಪಟಾನದ ಕಂಕರ್ಬಾಗ್ ಪ್ರದೇಶದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನವನ್ನು ತೆಂಗಿನಕಾಯಿ ಪಾರ್ಕ್ ಎಂದು ಮರುನಾಮಕರಣ ಮಾಡಲಾಗಿದೆ. ಬಿಹಾರದ ಉಪಮುಖ್ಯಮಂತ್ರಿ ತೇಜ್​ಪ್ರತಾಪ್​ ಯಾದವ್​​ ಸೋಮವಾರ ಮರುನಾಮಕರಣ ಕಾರ್ಯಕ್ರಮ ಆಯೋಜಿಸಿದ್ದರು. ಈ ಮೂಲಕ ಅವರು ಬಿಜೆಪಿಯ ವಿರುದ್ಧ ಹೆಸರು ಬದಲಾವಣೆಯ ರಾಜಕೀಯ ತಂತ್ರ ಬಳಸಿದ್ದಾರೆ. ಬಿಹಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ತೇಜ್ ಪ್ರತಾಪ್ ಯಾದವ್ ಅವರು ಉದ್ಯಾನವನದ ಹೆಸರನ್ನು ಮರುನಾಮಕರಣ ಮಾಡುವುದಾಗಿ ಈ ಹಿಂದೆ ಘೋಷಿಸಿದ್ದರು.

ಈ ಉದ್ಯಾನವನವನ್ನು ಮೂಲತಃ ಕೋಕೊನಟ್​ ಪಾರ್ಕ್ ಎಂದು ಕರೆಯಲಾಗುತ್ತಿತ್ತು. ಅದಕ್ಕೆ 2018 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡಲಾಗಿತ್ತು ಎಂದು ಆಜ್ ತಕ್ ವರದಿ ತಿಳಿಸಿದೆ. ಉದ್ಯಾನದ ಹೆಸರನ್ನು ಈಗ ಅದರ ಮೂಲ ಹೆಸರಿಗೆ ಪುನಃಸ್ಥಾಪಿಸಲಾಗುತ್ತಿದೆ ಎಂಬುದಾಗಿ ತೇಜಸ್ವಿ ಯಾದವ್​ ಅವರು ಹೇಳಿದ್ದಾರೆ.

ಉದ್ಯಾನವನಕ್ಕೆ ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ತೆಗೆದು ಕೋಕೋನಟ್​ ಪಾರ್ಕ್ ಎಂದು ಮರುನಾಮಕರಣ ಮಾಡಿರುವುದಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೆಂಡಾಮಂಡಲವಾಗಿದೆ. ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನದ ಹೆಸರನ್ನು ಬದಲಾಯಿಸುವುದು ಅಪರಾಧಕ್ಕಿಂತ ಕಡಿಮೆಯಿಲ್ಲ ಎಂದು ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್​ ಆರೋಪಿಸಿದ್ದಾರೆ. ವಾಜಪೇಯಿ ಅವರ ಪ್ರತಿಮೆ ಇರುವ ಉದ್ಯಾನವನಕ್ಕೆ ಮರುನಾಮಕರಣ ಮಾಡಿರುವುದು ಅತ್ಯಂತ ನಿರಾಶಾದಾಯಕ ಎಂದು ಅವರು ಹೇಳಿದ್ದಾರೆ. ತೇಜಸ್ವಿ, ಜನರು ನಿಮ್ಮನ್ನು ಪ್ರಶ್ನಿಸುತ್ತಾರೆ, ನಿತೀಶ್ ಜಿ ಅವರನ್ನು ತಡೆಯುತ್ತಾರೆ ಎಂದು ರಾಯ್​ ಹೇಳಿದ್ದಾರೆ.

ಏತನ್ಮಧ್ಯೆ, ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಕೂಡ ಉದ್ಯಾನದ ಮರುನಾಮಕರಣವನ್ನು ಖಂಡಿಸಿದ್ದಾರೆ. ಈ ಉದ್ಯಾನವನಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿಡಲಾಗಿದೆ. ಆದರೆ ನಿತೀಶ್ ಕುಮಾರ್ ಸರ್ಕಾರದಲ್ಲಿ ಅದನ್ನೂ ಮರುನಾಮಕರಣ ಮಾಡಲಾಗುತ್ತಿರುವುದು ತಪ್ಪು ಎಂದಿದ್ದಾರೆ. ಇದು ನಿತೀಶ್ ಜಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಹೊಂದಿರುವ ಗೌರವವಾಗಿದೆ. ಮುಖ್ಯಮಂತ್ರಿಗಳ ಮಾತುಗಳು ಮತ್ತು ಕಾರ್ಯಗಳು ಪರಸ್ಪರ ಹೊಂದಿಕೆಯಾಗುವುದಿಲ್ಲ ಎಂದು ಚೌಧರಿ ಆರೋಪಿಸಿದ್ದಾರೆ.

ಪ್ರತಿಕಾರ ರಾಜಕೀಯ

ಕೇಂದ್ರ ಸರ್ಕಾರ ಇತ್ತೀಚೆಗೆ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯದ ಹೆಸರನ್ನು ಪ್ರಧಾನ ಮಂತ್ರಿ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಎಂದು ಬದಲಾಯಿಸಿದೆ. ಇದು ವಿರೋಧ ಪಕ್ಷಗಳಿಂದ, ವಿಶೇಷವಾಗಿ ಕಾಂಗ್ರೆಸ್​​ನಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರವು ಭಾರತದ ಸುವರ್ಣ ಇತಿಹಾಸವನ್ನು ದಮನಿಸುತ್ತಿದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಮತ್ತೊಂದೆಡೆ, ಈ ಸ್ಥಳವು ಭಾರತದ ಎಲ್ಲಾ ಪ್ರಧಾನ ಮಂತ್ರಿಗಳು ಮಾಡಿದ ಕೃತಿಗಳನ್ನು ಪ್ರದರ್ಶಿಸುತ್ತದೆ ಎಂದು ಬಿಜೆಪಿ ತಿರುಗೇಟು ನೀಡಿದೆ.

Exit mobile version