ಮುಂಬಯಿ: ಪತ್ರ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಅವರ ಮನೆಗೆ ಭಾನುವಾರ ಮುಂಜಾನೆಯೇ ಇ.ಡಿ. ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿ ಅವರು ಎರಡು ಬಾರಿ ಸಮನ್ಸ್ ನೀಡಿದಾಗಲೂ ಹಾಜರಾಗದೆ ಇದ್ದ ಕಾರಣಕ್ಕೆ ಈಗ ಅಧಿಕಾರಿಗಳೇ ಮನೆಗೆ ಬಂದಿದ್ದಾರೆ.
ಶಿವಸೇನೆಯಲ್ಲಿ ಉದ್ಧವ್ ಠಾಕ್ರೆ ಬಣದೊಂದಿಗೆ ಗುರುತಿಸಿಕೊಂಡಿರುವ ಸಂಜಯ್ ರಾವತ್ ಅವರಿಗೆ ಹಿಂದೆ ಶಿವಸೇನೆಯ ಬಂಡಾಯ ಉತ್ತುಂಗದಲ್ಲಿದ್ದಾಗಲೇ ಸಮನ್ಸ್ ಬಂದಿತ್ತು. ಆಗ ಅವರು ಹೋಗುವುದಿಲ್ಲ ಏನು ಮಾಡುತ್ತಾರೆ ಎಂದು ಸವಾಲು ಹಾಕಿದ್ದರು. ಬಳಿಕ ಇ.ಡಿ. ಕಚೇರಿಗೆ ಹೋಗಿ ವಿಚಾರಣೆ ಎದುರಿಸಿದ್ದರು. ಈ ಬಳಿಕ ಮತ್ತೆ ಸಮನ್ಸ್ ನೀಡಿದ್ದನ್ನು ಪಾಲಿಸಿಲ್ಲ ಎಂದು ಹೇಳಲಾಗಿದೆ.
ಈ ಭೂಹಗರಣದಲ್ಲಿ ಸಂಜಯ್ ರಾವತ್ ಶಾಮೀಲಾತಿ ಏನು ಎನ್ನುವುದರ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಸಂಜಯ್ ರಾವತ್ ಅವರು ಜುಲೈ 1ರಂದು ಇ.ಡಿ ಕಚೇರಿಗೆ ಹಾಜರಾಗಿದ್ದರು. ಅಂದು ಸಣ್ಣ ಮಟ್ಟದ ವಿಚಾರಣೆ ಎದುರಿಸಿದ್ದ ಅವರು ಯಾವಾಗ ಕರೆದರೂ ಬರುತ್ತೇನೆ ಎಂದಿದ್ದರು. ಈ ನಡುವೆ, ಜುಲೈ ೨೦ರಂದು ಹಾಜರಾಗುವಂತೆ ಇ.ಡಿ ಸೂಚನೆ ನೀಡಿತ್ತು. ಆಗ ಸಂಸತ್ ಅಧಿವೇಶನದ ನೆಪ ಹೇಳಿದ್ದರು. ಆಗ ಇ.ಡಿ. ಜುಲೈ ೨೭ಕ್ಕೆ ಬನ್ನಿ ಎಂದು ಹೇಳಿತ್ತು. ಆಗಲೂ ಅಧಿವೇಶನದ ಕಾರಣವನ್ನೇ ನೀಡಿದರು ಸಂಜಯ್ ರಾವತ್. ʻನಾನು ದಿಲ್ಲಿಯಲ್ಲಿದ್ದೇನೆ. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಿದ್ದೇನೆʼ ಎಂದು ಮರು ಸಂದೇಶ ನೀಡಿದ್ದಾರೆ.
ಇದಾದ ಬೆನ್ನಿಗೇ ಈಗ ಇ.ಡಿ. ಅಧಿಕಾರಿಗಳು ನೇರವಾಗಿ ಅವರ ಮನೆಗೇ ಲಗ್ಗೆ ಇಟ್ಟಿದ್ದಾರೆ. ಮತ್ತು ದಾಖಲೆ ಪತ್ರಗಳ ಪರಿಶೀಲನೆ ಆರಂಭಗೊಂಡಿದೆ.
ಏನಿದು ಪತ್ರಾ ಚಾಲ್ ಭೂ ಹಗರಣ?
ಪತ್ರಾ ಚಾಲ್ ಭೂಹಗರಣ ಎನ್ನುವುದು ೧೦೩೪ ಕೋಟಿ ರೂ. ಹಗರಣ ಎಂದು ಹೇಳಲಾಗಿದೆ. ಇದರಲ್ಲಿ ಪ್ರಧಾನವಾಗಿರುವುದು ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್. ಈ ಹಗರಣ ಹಿಂದೆಯೇ ಬೆಳಕಿಗೆ ಬಂದು ಸಂಜಯ್ ರಾವತ್ ಅವರ ಆಪ್ತರಾದ ಪ್ರವೀಣ್ ರಾವತ್ ಅವರಿಗೆ ಸೇರಿದ ೯ ಕೋಟಿ ರೂ. ಮೌಲ್ಯದ ಆಸ್ತಿ ಮತ್ತು ವರ್ಷಾ ರಾವತ್ ಅವರಿಗೆ ಸೇರಿದ ೨ ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಭೂಮಿಗೆ ಸಂಬಂಧಿಸಿದ ದಾಖಲೆ ಇತ್ಯರ್ಥಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಇದಕ್ಕೆ ಭಾರಿ ಪ್ರಮಾಣದ ಲಂಚ ಪಡೆಯಲಾಗಿದೆ ಎನ್ನುವುದು ಪ್ರಧಾನ ಆರೋಪ. ಪ್ರವೀಣ್ ರಾವತ್ ಅವರು ಸುಮಾರು ೫೫ ಕೋಟಿ ರೂಪಾಯಿಯನ್ನು ವರ್ಷಾ ಅವರ ಖಾತೆಗೆ ಹಸ್ತಾಂತರಿಸಿದ್ದನ್ನು ಇ.ಡಿ ಗಮನಿಸಿದೆ. ಇದರ ಜತೆಗೆ ಸಂಜಯ್ ರಾವತ್ ಮತ್ತು ಅವರ ಆಪ್ತರಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಿಮಾನ ಯಾನ ಟಿಕೆಟ್‌ಗಳನ್ನು ಕೂಡಾ ಬುಕ್ ಮಾಡಲಾಗಿತ್ತು.
ಹಿಂದಿನ ಸುದ್ದಿ |ಮಹಾ ಬಿಕ್ಕಟ್ಟಿನ ನಡುವೆಯೇ ಉದ್ಧವ್ ಠಾಕ್ರೆ ಬಣದ ಟ್ರಬಲ್ ಶೂಟರ್ ಸಂಜಯ್ ರಾವತ್‌ಗೆ ಇ.ಡಿ ಸಮನ್ಸ್