Site icon Vistara News

Bihar Politics | ಎನ್​ಡಿಎ ಒಕ್ಕೂಟವನ್ನು ಜೆಡಿಯು ಬಿಡುತ್ತಿದ್ದಂತೆ, ಟಿಎಂಸಿ ತೊರೆದ ಪವನ್​ ವರ್ಮಾ

Bihar Politics 1

ಪಟನಾ: ಎನ್​ಡಿಎ ಒಕ್ಕೂಟವನ್ನು ಜೆಡಿಯು ತೊರೆದು, ಆರ್​ಜೆಡಿ-ಕಾಂಗ್ರೆಸ್​​ನೊಟ್ಟಿಗೆ ಸೇರುತ್ತಿದ್ದಂತೆ, 2020ರಲ್ಲಿ ಜೆಡಿಯು ಬಿಟ್ಟು, 2021ರಲ್ಲಿ ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಿದ್ದ ಹಿರಿಯ ನಾಯಕ ಪವನ್​ ವರ್ಮಾ ಇದೀಗ ಟಿಎಂಸಿಯನ್ನೂ ಬಿಟ್ಟಿದ್ದಾರೆ. ಇವರೇನೂ ಜೆಡಿಯು ಪಕ್ಷವನ್ನು ಸ್ವ ಇಚ್ಛೆಯಿಂದ ತೊರೆದಿರಲಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಬಿಜೆಪಿ ನಿಲುವನ್ನು ಪವನ್​ ವರ್ಮಾ ಒಪ್ಪಿರಲಿಲ್ಲ. ಮೈತ್ರಿ ಪಕ್ಷದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸಿ, ಮುಜುಗರ ಉಂಟುಮಾಡುತ್ತಿದ್ದ ಕಾರಣ, ಜೆಡಿಯುದಿಂದ ಇವರನ್ನು ವಜಾಗೊಳಿಸಲಾಗಿತ್ತು. ಇದೀಗ ರಾಜೀನಾಮೆ ನೀಡಿದ ಬಳಿಕ ಟ್ವೀಟ್​ ಮಾಡಿದ ಪವನ್​ ವರ್ಮಾ, ‘ಮಮತಾ ಬ್ಯಾನರ್ಜಿಯವರೇ ನನ್ನ ರಾಜೀನಾಮೆಯನ್ನು ಅಂಗೀಕರಿಸಿ. ಅಂದು ಪಕ್ಷಕ್ಕೆ ನನ್ನನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಮುಂದೆಯೂ ನಿಮ್ಮ ಪ್ರೀತಿ, ಆದರ ನನಗೆ ಬೇಕು. ನಿಮ್ಮೊಂದಿಗೆ ಸದಾ ಸಂಪರ್ಕದಲ್ಲಿ ಇರಲು ಬಯಸುತ್ತೇನೆ. ನಿಮಗೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.

ತೃಣಮೂಲ ಕಾಂಗ್ರೆಸ್​​ನಿಂದ ಹೊರಬಿದ್ದಿರುವ ವರ್ಮಾ, ಸದ್ಯಕ್ಕೆ ಮುಂದಿನ ಯೋಜನೆ ಏನೆಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಮತ್ತೆ ಜೆಡಿಯು ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದೇ ಹೇಳಲಾಗಿದೆ. ಅಂದು ತಾವು ಬಿಜೆಪಿಯನ್ನು ವಿರೋಧಿಸಿದ್ದಕ್ಕೆ ವಜಾ ಮಾಡಿದ್ದನ್ನು ವರ್ಮಾ ಪ್ರಶ್ನಿಸಿದ್ದರು. ಬಿಹಾರ ರಾಜಕೀಯವನ್ನೂ ಹೊರತು ಪಡಿಸಿದ ವಿಚಾರದಲ್ಲೂ ಬಿಜೆಪಿಯನ್ನು ಅಷ್ಟೊಂದು ಯಾಕೆ ಬೆಂಬಲಿಸಬೇಕು? ಎಂದು ಕೇಳಿದ್ದರು. ತೃಣಮೂಲ ಕಾಂಗ್ರೆಸ್​​ ಸೇರಿದ್ದ ಅವರಿಗೆ ಭವ್ಯ ಸ್ವಾಗತ ದೊರೆತಿತ್ತು. ಆ ಪಕ್ಷದ ರಾಷ್ಟ್ರೀಯ ಉಪಧ್ಯಕ್ಷನಾಗಿದ್ದರು.

ಪವನ್​ ವರ್ಮಾ, ಭಾರತೀಯ ವಿದೇಶಾಂಗ ಸೇವೆ ಮಾಜಿ ಅಧಿಕಾರಿ. 2001ರ ಆಗಸ್ಟ್​ 8ರಿಂದ 2004ರ ಜನವರಿ 23ರವರೆಗೆ ಸೈಪ್ರಸ್​ ದೇಶದಲ್ಲಿ ಭಾರತದ ಹೈಕಮಿಷನರ್​ ಆಗಿದ್ದರು. 2009ರಿಂದ 2013ರವರೆಗೆ ಭೂತಾನ್​​ನಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಅವರು ಜೆಡಿಯು ಸೇರಿ, ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಇದನ್ನೂ ಓದಿ: Bihar Politics | ಸಿಎಂ ನಿತೀಶ್​ ಕುಮಾರ್​ ಬಹುಮತ ಸಾಬೀತು ಆಗಸ್ಟ್​ 24ಕ್ಕೆ; ಯಾಕಿಷ್ಟು ವಿಳಂಬ?

Exit mobile version