Site icon Vistara News

Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ ಆಯ್ಕೆ; ಇಂದು ಪ್ರಮಾಣ ವಚನ ಸ್ವೀಕಾರ

Pawan Kalyan

Pawan Kalyan

ವಿಜಯವಾಡ: ಇತ್ತೀಚೆಗೆ ನಡೆದ ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ (Telugu Desam Party), ಬಿಜೆಪಿ ಮತ್ತು ಪವನ್‌ ಕಲ್ಯಾಣ್‌ ನೇತೃತ್ವದ ಜನಸೇನಾ ಪಾರ್ಟಿ (Jana Sena Party)ಯ ಎನ್‌ಡಿಎ (NDA) ಒಕ್ಕೂಟ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಇಂದು (ಜೂನ್‌ 12) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ ವೇಳೆ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ (Pawan Kalyan) ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ʼʼಚಂದ್ರಬಾಬು ನಾಯ್ಡು ನೇತೃತ್ವದ 25 ಸದಸ್ಯರ ಆಂಧ್ರಪ್ರದೇಶದ ಸಚಿವ ಸಂಪುಟ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದೆ. ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ಎನ್‌ಡಿಎ ನೇತೃತ್ವದ ಸರ್ಕಾರದಲ್ಲಿ ಏಕೈಕ ಉಪ ಮುಖ್ಯಮಂತ್ರಿಯಾಗಲಿದ್ದಾರೆʼʼ ಎಂದು ಮೂಲಗಳು ತಿಳಿಸಿವೆ.

ಬುಧವಾರ ಬಿಡುಗಡೆಯಾದ 24 ಸಚಿವರ ಪಟ್ಟಿಯಲ್ಲಿ ಜನಸೇನಾ ಪಾರ್ಟಿಯ ಮೂವರು ಮತ್ತು ಬಿಜೆಪಿಯ ಒಬ್ಬರು ಸೇರಿದ್ದಾರೆ. ಉಳಿದವರು ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಸೇರಿದವರು. ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದ ಬಳಿಯ ಕೇಸರಪಲ್ಲಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರಿಗೆ ಸಚಿವರ ಪಟ್ಟಿಯನ್ನು ಕಳುಹಿಸಿದ್ದಾರೆ. ಚಂದ್ರಬಾಬು ನಾಯ್ಡು ಅವರ ಪುತ್ರ ಮತ್ತು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್, ಟಿಡಿಪಿಯ ಆಂಧ್ರಪ್ರದೇಶ ಘಟಕದ ಅಧ್ಯಕ್ಷ ಕೆ.ಅಚ್ಚಣ್ಣ ನಾಯ್ಡು ಮತ್ತು ಜನಸೇನಾ ಪಾರ್ಟಿಯ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂಡ್ಲಾ ಮನೋಹರ್ ಅವರು ಸಂಪುಟದಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಧಾನಿ ಮೋದಿ ಭಾಗಿ

ಬೆಳಿಗ್ಗೆ 11:27ಕ್ಕೆ ರಾಜ್ಯಪಾಲರು ಚಂದ್ರಬಾಬು ನಾಯ್ಡು ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಎನ್‌ಡಿಎ ಮಿತ್ರಪಕ್ಷಗಳ ನಾಯಕರು ಮತ್ತು ಈ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಮಂಗಳವಾರ ತಡರಾತ್ರಿ ಅಮರಾವತಿಯ ತಮ್ಮ ನಿವಾಸದಲ್ಲಿ ಅಮಿತ್ ಶಾ ಮತ್ತು ಜೆ.ಪಿ.ನಡ್ಡಾ ಅವರೊಂದಿಗೆ ಸಭೆ ನಡೆಸಿದ ನಂತರ ಚಂದ್ರಬಾಬು ನಾಯ್ಡು ತಮ್ಮ ಸಚಿವರ ತಂಡವನ್ನು ಅಂತಿಮಗೊಳಿಸಿದ್ದರು. ಸತ್ಯ ಕುಮಾರ್ ಯಾದವ್ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿಯ ಏಕೈಕ ಶಾಸಕ. ಜನಸೇನಾ ಪಾರ್ಟಿಯಿಂದ ಪವನ್ ಕಲ್ಯಾಣ್, ನಾದೆಂಡ್ಲಾ ಮನೋಹರ್ ಮತ್ತು ಕಂದುಲಾ ದುರ್ಗೇಶ್ ಮೂವರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಈ ಸಚಿವ ಸಂಪುಟದಲ್ಲಿ 17 ಹೊಸ ಮುಖಗಳಿವೆ. ಸಂಪುಟದಲ್ಲಿ ಮೂವರು ಮಹಿಳೆಯರಿದ್ದಾರೆ.

ಇದನ್ನೂ ಓದಿ: Chandrababu Naidu: ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ; ಚಂದ್ರಬಾಬು ನಾಯ್ಡು ಘೋಷಣೆ

ಆಂಧ್ರ ಪ್ರದೇಶ ವಿಧಾನ ಸಭೆಯ 175 ಸೀಟುಗಳ ಪೈಕಿ ಎನ್‌ಡಿಎ 164 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಈ ಪೈಕಿ ಟಿಡಿಪಿ 135, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 8 ಕಡೆ ಗೆದ್ದಿದೆ.

Exit mobile version