ಪೀಠಾಪುರ್: ಆಂಧ್ರಪ್ರದೇಶ(Andra Pradesh) ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಅಭೂತಪೂರ್ವ ಗೆಲುವಿನ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಪವನ್ ಕಲ್ಯಾಣ್(Pawan Kalyan) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿರುವ ಹಿನ್ನೆಲೆ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ವೇತನ ಪಡೆಯಲು ನಿರಾಕರಿಸಿದ್ದಾರೆ.
ನಿನ್ನೆ ಕಾಕಿನಾಡ ಜಿಲ್ಲೆಯ ಗೋಲಾಪೊರ್ಲು ಗ್ರಾಮಕ್ಕೆ ಪವನ್ ಕಲ್ಯಾಣ್ ಭೇಟಿ ನೀಡಿ ಎನ್ ಟಿಆರ್ ಭರೋಸಾ ಪಿಂಚಣಿ ಪತ್ರಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ವೇತನ ಪಡೆಯುವುದಿಲ್ಲ ಎಂದರು. ಇದೇ ವೇಳೆ ಅವರು ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಗನ್ ಅನಗತ್ಯವಾಗಿ ಅರಮನೆ ಕಟ್ಟಿಸಿಕೊಂಡು ರಾಜ್ಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇಲಾಖೆಗಳಲ್ಲಿ ಹಣದ ಕೊರತೆ ಇದ್ದರೂ ಬಂಗಲೆ ಕಟ್ಟಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಇಲಾಖೆಯಲ್ಲಿ ಹಣವಿಲ್ಲ,. ಇದಕ್ಕಾಗಿಯೇ ಕಳೆದ ತಿಂಗಳ ವೇತನಕ್ಕೆ ಸಂಬಂಧಿಸಿದ ಕಡತಕ್ಕೆ ಕೆಲ ದಿನ ಸಹಿ ಹಾಕುವುದನ್ನು ತಡೆದರು. ಸಂಬಳದ ಅಗತ್ಯವಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಹಿಂದಿನ ಸರ್ಕಾರ ಪಂಚಾಯಿತಿ ಹಣ ಎಲ್ಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಟೀಕಿಸಿದರು. ಇಲಾಖೆಯ ಹಣದ ಕೊರತೆಯ ನಡುವೆಯೂ ಅಂದಿನ ಮುಖ್ಯಮಂತ್ರಿ ರುಷಿಕೊಂಡನಲ್ಲಿ ಅರಮನೆ ನಿರ್ಮಿಸಿದ್ದರು ಎಂದು ಆರೋಪಿಸಿದರು. ಪಂಚಾಯತ್ ರಾಜ್ ಇಲಾಖೆಯಲ್ಲಿ ತಮ್ಮ ಕಡೆಯಿಂದ ಯಾವುದೇ ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ಪವನ್ ಕಲ್ಯಾಣ್ ಸಾರ್ವಜನಿಕರಿಗೆ ಭರವಸೆ ನೀಡಿದರು.
ಇದೇ ವೇಳೆ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ತಲುಪಿಸುವುದೇ ನಮ್ಮ ಮೊದಲ ಆದ್ಯತೆ ಎಂದು ಪವನ್ ಕಲ್ಯಾಣ್ ಹೇಳಿದರು. ಗೋದಾವರಿ ನದಿಯ ಸಮೀಪವಿದ್ದರೂ, ಗೋದಾವರಿ ಜಿಲ್ಲೆಗಳ ಅನೇಕ ಪ್ರದೇಶಗಳು ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತಿವೆ ಎಂದು ಪವನ್ ಕಲ್ಯಾಣ್ ಪ್ರಸ್ತಾಪಿಸಿದರು. ಹಿಂದಿನ ಸರ್ಕಾರ ಜಲ ಜೀವನ್ ಮಿಷನ್ ನಿಧಿಯನ್ನು ಬಳಸಿಕೊಂಡಿಲ್ಲ ಎಂದು ಟೀಕಿಸಿದರು. ಮನವಿ ಮೇರೆಗೆ ಹಣ ಮಂಜೂರು ಮಾಡಲು ಕೇಂದ್ರ ಸರ್ಕಾರ ಸಿದ್ಧವಿದ್ದರೂ ಹೊಂದಾಣಿಕೆ ಅನುದಾನ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ಮುಂದಿನ ಐದು ವರ್ಷಗಳಲ್ಲಿ ಪವಾಡಗಳ ಭರವಸೆ ನೀಡುವುದಿಲ್ಲ, ಆದರೆ ಸರ್ಕಾರವು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಭರವಸೆ ನೀಡಿದರು. ಪವನ್ ಕಲ್ಯಾಣ್ ಅವರು ತಮ್ಮ ದೇಶ ಮತ್ತು ಭೂಮಿಗಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು, ಅವರು ರಾಜ್ಯದ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಮರ್ಪಿತರಾಗಿದ್ದಾರೆ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ