Site icon Vistara News

Paytm Payment Service : ಪೇಟಿಎಂ ಬ್ಯಾಂಕಿಂಗ್ ವಿಭಾಗದ ಸಿಇಒ ದಿಢೀರ್ ರಾಜೀನಾಮೆ

Paytm payment service

ಬೆಂಗಳೂರು: ಪೇಟಿಎಂ ತನ್ನ ಬ್ಯಾಂಕಿಂಗ್ ಘಟಕವಾಗಿರುವ ಪೇಟಿಎಂ ಪೇಮೆಂಟ್ಸ್ (Paytm Payment Service) ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಸುರಿಂದರ್ ಚಾವ್ಲಾ ವೈಯಕ್ತಿಕ ಕಾರಣಗಳನ್ನು ನೀಡಿ ದಿಢೀರ್​ ರಾಜೀನಾಮೆ ನೀಡಿದ್ದಾರೆ ಎಂದು ಪೇಟಿಎಂ ಮಂಗಳವಾರ ತಿಳಿಸಿದೆ. ರಾಜೀನಾಮೆ ಜೂನ್ 26 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿದೆ. ಆದರೆ ಚಾವ್ಲಾ ಅವರ ಉತ್ತರಾಧಿಕಾರಿ ಯಾರು ಎಂಬ ಮಾಹಿತಿ ಪ್ರಕಟಿಸಿಲ್ಲ.

ಡಿಜಿಟಲ್ ಪಾವತಿ ಸಂಸ್ಥೆಯಾಗಿರುವ ಪೇಟಿಎಂನ ಬ್ಯಾಂಕಿಂಗ್ ಘಟಕದ ಮೇಲೆ ರಿಸರ್ವ್ ಬ್ಯಾಂಕ್ ಆಫ್​ ಇಂಡಿಯಾ ನಿರ್ಬಂಧ ಹೇರಿತ್ತು. ಆ ಬಳಿಕ ನಡೆದ ಮಂಡಳಿಯ ಪರಿಶೀಲನೆಯ ಭಾಗವಾಗಿ ವಿಜಯ್ ಶೇಖರ್ ಶರ್ಮಾ ಅವರು ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು. ಆ ಬಳಿಕ ಇದೀಗ ಚಾವ್ಲಾ ನಿರ್ಗಮಿಸಿದ್ದಾರೆ.

ವಹಿವಾಟು ಪಾರದರ್ಶಕತೆಯ ಸಮಸ್ಯೆ ಮತ್ತು ಮೇಲ್ವಿಚಾರಣೆ ಕಾಳಜಿಗಳಿಂದಾಗಿ ಮಾರ್ಚ್ 15 ರೊಳಗೆ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಸೂಚನ ನೀಡಿತ್ತು. ಆ ಬಳಿಕದಿಂದ ಆ ಸಂಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ.

ಒಪ್ಪಂದ ಕಡಿತ

ಒನ್ 97 ಕಮ್ಯುನಿಕೇಷನ್ಸ್ ಕಂಪನಿಡಿ ಕಾರ್ಯಾಚರಿಸುವ ಪೇಟಿಎಂ ಮತ್ತು ಅದರ ಬ್ಯಾಂಕಿಂಗ್ ಘಟಕವು ತನ್ನ ತೊಂದರೆಗೀಡಾದ ಬ್ಯಾಂಕಿಂಗ್ ಘಟಕದೊಂದಿಗಿನ ಸಂಬಂಧ ಕಡಿತಗೊಳಿಸುವ ಪೇಟಿಎಂನ ಪ್ರಯತ್ನಗಳ ಭಾಗವಾಗಿ ವಿವಿಧ ಅಂತ್​ -ಕಂಪನಿ ಒಪ್ಪಂದಗಳನ್ನು ಅಂತ್ಯಗೊಳಿಸುತ್ತಿದೆ. ಆದಾಗ್ಯೂ, ಅದಕ್ಕೆ ಪರಿಹಾರವಾಗಿ ಭಾರತದ ಪಾವತಿ ಪ್ರಾಧಿಕಾರವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಪರವಾನಗಿ ನೀಡಿದೆ. ಬ್ಯಾಂಕಿಂಗ್ ಘಟಕವು ಕಾರ್ಯಾಚರಣೆ ನಿಲ್ಲಿಸಿದ ನಂತರ ಪಾವತಿಗಳನ್ನು ಸುಲಭಗೊಳಿಸಲು ಅನುವು ಮಾಡಿದೆ.

ಇದನ್ನೂ ಓದಿ: Rajeev Kumar : ಮುಖ್ಯ ಚುನಾವಣಾಧಿಕಾರಿಗೆ ವಿದೇಶಗಳಿಂದ ಬೆದರಿಕೆ; ಅವರಿಗೆ ಈಗ ಝಡ್​ ಪ್ಲಸ್​ ಭದ್ರತೆ

ಆಕ್ಸಿಸ್ ಬ್ಯಾಂಕ್, ಎಚ್​​ಡಿಎಫ್​ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್ ಪೇಟಿಎಂಗೆ ಪಾವತಿ ವ್ಯವಸ್ಥೆ ಒದಗಿಸುವ ಬ್ಯಾಂಕುಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಹೇಳಿದೆ. ಆರ್ಬಿಐ ತನ್ನ ಬ್ಯಾಂಕಿಂಗ್ ಘಟಕದ ವಿರುದ್ಧ ಆದೇಶ ನೀಡಿದ ನಂತರ ಪೇಟಿಎಂ ಷೇರುಗಳು ಸುಮಾರು 50% ನಷ್ಟು ಕುಸಿದಿವೆ. ಅವರು ಮಂಗಳವಾರ 2% ಕಡಿಮೆಯಾಗಿದೆ.

Exit mobile version