Site icon Vistara News

Paytm Fine: ನಿಷೇಧದ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಶಾಕ್‌, ಬಿತ್ತು 5.49 ಕೋಟಿ ರೂ. ದಂಡ

Paytm

Paytm Payments Bank fined Rs 5.49 crore for violating money laundering norms

ನವದೆಹಲಿ: ಮಾರ್ಚ್‌ 15ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (Paytm Payments Bank Ltd) ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank Of India) ನಿರ್ಬಂಧ ವಿಧಿಸಿದೆ. ಇದರ ಬೆನ್ನಲ್ಲೇ ಪೇಟಿಎಂಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭಾರತದ ಹಣಕಾಸು ಗುಪ್ತಚರ ಘಟಕವು ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ಗೆ 5.49 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದು ಪೇಟಿಎಂಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಕ್ರಮವಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ನಿಯಮಗಳನ್ನು ಪೇಟಿಎಂ ಉಲ್ಲಂಘಿಸಿದೆ. ಹಾಗಾಗಿ, ಕೇಂದ್ರ ಹಣಕಾಸು ಸಚಿವಾಲಯದ ಗುಪ್ತಚರ ವಿಭಾಗವು ಪೇಟಿಎಂಗೆ ದಂಡ ವಿಧಿಸಿದೆ. ಪೇಟಿಎಂನ ಕೆಲ ಘಟಕಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿವೆ. ಅಷ್ಟೇ ಅಲ್ಲ, ಆನ್‌ಲೈನ್‌ ಗ್ಯಾಂಬ್ಲಿಂಗ್‌ಗೂ ಪೇಟಿಎಂ ಉತ್ತೇಜನ ನೀಡುತ್ತಿದೆ. ಅಪರಾಧ ಪ್ರಕ್ರಿಯೆಗಳಿಗೂ ಆಸ್ಪದ ನೀಡುತ್ತಿದೆ. ಹಾಗಾಗಿ, ಕೇಂದ್ರ ಸರ್ಕಾರವು ಪೇಟಿಎಂಗೆ ಭಾರಿ ದಂಡ ವಿಧಿಸಿದೆ ಎಂದು ತಿಳಿದುಬಂದಿದೆ.

ಒಂದೇ ಒಂದು ಪರ್ಮನೆಂಟ್​​ ಅಕೌಂಟ್​ ನಂಬರ್​ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್​​ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್​​ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್​​ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಿದೆ. ಇದಾದ ಬಳಿಕ ವಹಿವಾಟಿಗೆ ನಿರ್ಬಂಧ ಹೇರಿದೆ.

ಇದನ್ನೂ ಓದಿ: Paytm Employee: ಉದ್ಯೋಗ ಕಳೆದುಕೊಳ್ಳುವ ಭೀತಿ; ಪೇಟಿಎಂ ಉದ್ಯೋಗಿ ಆತ್ಮಹತ್ಯೆ

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.‌ಗಳ ನೋಡೆಲ್ ಖ್ಯಾತೆಗಳನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಬ್ಯಾಂಕಿನಲ್ಲಿನ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ನಿರಂತರ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಹೊರಗಿನ ಆಡಿಟ್‌ಗಳ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಪೇಟಿಎಂ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ಮತ್ತು ಮಂಡಳಿಯ ಸದಸ್ಯ ಸ್ಥಾನಕ್ಕೆ ವಿಜಯ್‌ ಶೇಖರ್‌ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version