Site icon Vistara News

Paytm Shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು; 17 ಸಾವಿರ ಕೋಟಿ ರೂ. ನಷ್ಟ!

Paytm

Paytm Payments Bank fined Rs 5.49 crore for violating money laundering norms

ಮುಂಬೈ: ಮಾರ್ಚ್‌ 1ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (Paytm Payments Bank Ltd) ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank Of India) ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪೇಟಿಎಂ ಷೇರುಗಳ ಮೌಲ್ಯವು ಪಾತಾಳಕ್ಕೆ ಕುಸಿದಿದೆ. ಶುಕ್ರವಾರ ಬೆಳಗ್ಗೆಯೂ (ಫೆಬ್ರವರಿ 2) ಪೇಟಿಎಂ ಷೇರುಗಳ‌ (Paytm Shares) ಮೌಲ್ಯವು ಶೇ.20ರಷ್ಟು ಕುಸಿದಿದ್ದು, ಗುರುವಾರ ಶೇ.20ರಷ್ಟು ಮೌಲ್ಯ ಕುಸಿದಿದ್ದು ಸೇರಿ ಒಟ್ಟು ಶೇ.40ರಷ್ಟು ಕುಸಿದಂತಾಗಿದೆ. ಇದರಿಂದಾಗಿ ಹೂಡಿಕೆದಾರರಿಗೆ ಸುಮಾರು 17,500 ಕೋಟಿ ರೂ. ನಷ್ಟವಾದಂತಾಗಿದೆ.

ಇದರೊಂದಿಗೆ ಪೇಟಿಎಂನ ಒಂದು ಷೇರಿನ ಮೌಲ್ಯ 487 ರೂಪಾಯಿಗೆ ಕುಸಿದಿದೆ. 2022ರ ಮಾರ್ಚ್‌ನಲ್ಲಿ ಪೇಟಿಎಂ ಒಂದು ಷೇರಿನ ಮೌಲ್ಯ 438 ರೂ.ಗೆ ಕುಸಿದಿತ್ತು. ಇದು ಸಾರ್ವಕಾಲಿಕ ಕುಸಿತವಾಗಿದ್ದು, ಮುಂದಿನ ದಿನಗಳಲ್ಲಿ ಮೌಲ್ಯವು ಇನ್ನಷ್ಟು ಕುಸಿಯಲಿದೆ ಎಂದು ಷೇರು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಪೇಟಿಎಂನಲ್ಲಿ ಹೂಡಿಕೆ ಮಾಡಿದ ಷೇರುದಾರರಿಗೆ ಭಾರಿ ನಷ್ಟವಾಗಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.‌ಗಳ ನೋಡೆಲ್ ಖ್ಯಾತೆಗಳನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಬ್ಯಾಂಕಿನಲ್ಲಿನ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ನಿರಂತರ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಹೊರಗಿನ ಆಡಿಟ್‌ಗಳ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆಯೇ, ಈಗ ಆರ್‌ಬಿಐ ಆದೇಶವು ಪೇಟಿಎಂನ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ವಿಭಾಗಕ್ಕೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಯುಪಿಐ ವ್ಯವಹಾರವು ಮುಂದುವರಿಯಲಿದೆ.

ಇದನ್ನೂ ಓದಿ: RBI Order: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ! ಗ್ರಾಹಕರಿಗಾಗುವ ತೊಂದರೆ ಏನು?

ಆರ್​ಬಿಐ ನಿರ್ದೇಶನದಿಂದಾಗಿ ತನ್ನ ವಾರ್ಷಿಕ ಗಳಿಕೆಯ ಮೇಲೆ 300ರಿಂದ 500 ಕೋಟಿ ರೂ.ಗಳವರೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪೇಟಿಎಂ ಗುರುವಾರ ಹೇಳಿದೆ. ಒನ್ 97 ಭಾರತದ ಅತಿದೊಡ್ಡ ಪಾವತಿ ಸಂಸ್ಥೆಗಳಲ್ಲಿ ಒಂದಾಗಿದೆ. ಸಾಫ್ಟ್ ಬ್ಯಾಂಕ್ ಮತ್ತು ಆಂಟ್ ಫೈನಾನ್ಶಿಯಲ್‌ನ ಆರಂಭಿಕ ಹೂಡಿಕೆಗಳೊಂದಿಗೆ ಕಂಪನಿಯ 2022-23ರ ವಾರ್ಷಿಕ ವರದಿಯ ಪ್ರಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಶೇ.49ರಷ್ಟು ಪಾಲು ಹೊಂದಿದೆ. ಸಿಇಒ ವಿಜಯ್ ಶೇಖರ್ ಶರ್ಮಾ ಉಳಿದ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ. ಬ್ಯಾಂಕ್ 2015ರಲ್ಲಿ ಪರವಾನಗಿ ಪಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version