Site icon Vistara News

Pema Khandu: ಅರುಣಾಚಲ ಪ್ರದೇಶದ ಸಿಎಂ ಆಗಿ ಪೇಮಾ ಖಂಡು ಪ್ರಮಾಣ ವಚನ ಸ್ವೀಕಾರ

Pema Khandu

Pema Khandu

ಇಟಾನಗರ: ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಬಿಜೆಪಿಯ ಪೇಮಾ ಖಂಡು (Pema Khandu) ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರು ಸಿಎಂ ಹುದ್ದೆಗೆ ಏರುತ್ತಿರುವುದು ಇದು ಮೂರನೇ ಬಾರಿ ಎನ್ನುವುದು ವಿಶೇಷ. ಇವರ ಜತೆಗೆ ಉಪಮುಖ್ಯಮಂತ್ರಿಯಾಗಿ ಚೌವ್ನ ಮೇಯ್ನ್‌ (Chowna Mein) ಪದಗ್ರಹಣ ಮಾಡಿದರು.

ಇವರಲ್ಲದೆ 10 ಕ್ಯಾಬಿನೆಟ್‌ ಸಚಿವರಿಗೆ ಅರುಣಾಚಲ ಪ್ರದೇಶದ ರಾಜ್ಯಪಾಲ ಕೆ.ಟಿ.ಪರ್ನಾಯಕ್ ಪ್ರಮಾಣ ವಚನ ಬೋಧಿಸಿದರು. ಇಟಾನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ನಿಂಗ್‌, ಜೆ.ಪಿ.ನಡ್ಡಾ, ಕಿರಣ್‌ ರಿಜಿಜು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಮತ್ತಿತರರು ಪಾಲ್ಗೊಂಡಿದ್ದಾರೆ.

ಬಿಯುರಾಮ್ ವಾಘೆ, ನ್ಯಾಟೊ ಡುಕಾಮ್, ಗ್ಯಾನ್ರಿಯಲ್ ಡೆನ್ವಾಂಗ್ ವಾಂಗ್ಸು, ವಾಂಕಿ ಲೋವಾಂಗ್, ಪಸಾಂಗ್ ದೋರ್ಜಿ ಸೋನಾ, ಮಾಮಾ ನಾತುಂಗ್, ದಸಾಂಗ್ಲು ಪುಲ್, ಬಾಲೊ ರಾಜಾ, ಕೆಂಟೊ ಜಿನಿ ಮತ್ತು ಓಜಿಂಗ್ ತಾಸಿಂಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು. ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ಕಲಿಖೋ ಪುಲ್ ಅವರ ಪತ್ನಿ ದಸಾಂಗ್ಲು ಪುಲ್ ಅವರು ದಶಕಗಳ ನಂತರ ಆಯ್ಕೆಯಾದ ಏಕೈಕ ಸಚಿವೆ ಎನಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯೊಂದಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 60 ಸೀಟುಗಳ ಪೈಕಿ ಬಿಜೆಪಿ 46 ಕಡೆ ಜಯ ಗಳಿಸಿ ಬಹುಮತ ಪಡೆದು ಸರ್ಕಾರ ರಚಿಸಿದೆ. ವಿಶೇಷ ಎಂದರೆ 10 ಕ್ಷೇತ್ರಗಳಲ್ಲಿ ಬಿಜೆಪಿ ಅವಿರೋಧವಾಗಿ ಆಯ್ಕೆಯಾಗಿದೆ. ಮುಕ್ತೋ ಕ್ಷೇತ್ರದಲ್ಲಿ ಪೇಮಾ ಖಂಡು, ಬೊಮ್ಡಿಲದಲ್ಲಿ ಡೊಂಗ್ರು ಸಿಯೊಂಗ್ಜು, ಚೌಕಂನಲ್ಲಿ ಚೌನಾ ಮೇ ಹಯುಲಿಯಾಂಗ್‌ನಲ್ಲಿ ದಸಾಂಗ್ಲು ಪುಲ್, ಇಟಾನಗರದಲ್ಲಿ ಟೆಚಿ ಕಾಸೊ, ರೋಯಿಂಗ್‌ದಲ್ಲಿ ಮುಚ್ಚು ಮಿಥಿ, ಸಾಗಲೀ ಕ್ಷೇತ್ರದಲ್ಲಿ ರತು ಟೆಚಿ, ತಾಲಿ ಕ್ಷೇತ್ರದಲ್ಲಿ ಜಿಕ್ಕೆ ಟಾಕೊ, ತಾಲಿಹಾದಲ್ಲಿ ನ್ಯಾತೋ ದುಕಮ್ ಜಿರೋ, ಹಾಪೋಲಿ ಕ್ಷೇತ್ರದಲ್ಲಿ ಹಗೆ ಅಪ್ಪಾ ಅವಿರೋಧವಾಗಿ ಆಯ್ಕೆಯಾದ ಶಾಸಕರು.

44 ವರ್ಷದ ಪೇಮಾ ಖಂಡು ಮೊದಲು ಕಾಂಗ್ರೆಸ್‌ನಲ್ಲಿದ್ದರು. ಬಳಿಕ ಕೇಸರಿ ಪಾಳಯದತ್ತ ಮುಖ ಮಾಡಿದರು. 2016ರಲ್ಲಿ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅದೇ ವರ್ಷದ ಕೊನೆಯಲ್ಲಿ ಖಂಡು ನೇತೃತ್ವದ 43 ಶಾಸಕರು ಕಾಂಗ್ರೆಸ್‌ನಿಂದ ಬಿಜೆಪಿ ಮಿತ್ರ ಪಕ್ಷವಾದ ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (PPA)ಕ್ಕೆ ಪಕ್ಷಾಂತರಗೊಂಡರು. ಇದರ ನಂತರ 33 ಪಿಪಿಎ ಶಾಸಕರು ಬಿಜೆಪಿಗೆ ಸೇರಿದ ಬಳಿಕ ಪೇಮಾ ಖಂಡು ಮುಖ್ಯಮಂತ್ರಿಯಾಗಿ ವಿಧಾನಸಭೆಯಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಿದರು. 2019ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಚುಕ್ಕಾಣಿ ಹಿಡಿಯಿತು. ಆಗಲೂ ಮುಖ್ಯಮಂತ್ರಿಯಾಗಿ ಪೇಮಾ ಖಂಡು ಆಯ್ಕೆಯಾಗಿದರು.

ಇದನ್ನೂ ಓದಿ: Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ, ಸಿಕ್ಕಿಂನಲ್ಲಿ SKMಗೆ ಪ್ರಚಂಡ ಗೆಲುವು

ಚುನಾವಣೆಯಲ್ಲಿ ಬಹುಮತ ಪಡೆದ ಬಳಿಕ ಜೂನ್‌ 3ರಂದು ಪೇಮಾ ಖಂಡು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮತದಾರರಿಗೆ ಧನ್ಯವಾದ ಅರ್ಪಿಸಿದ್ದರು. ʼʼಮತ ಚಲಾಯಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ರಾಜ್ಯದ ಅಭಿವೃದ್ಧಿ ಮತ್ತು ಜನರ ಉನ್ನತಿಗಾಗಿ ಹಗಲಿರುಳು ಶ್ರಮಿಸುತ್ತೇನೆʼʼ ಎಂದು ಅವರು ಭರವಸೆ ನೀಡಿದ್ದರು.

Exit mobile version