Site icon Vistara News

Mohan Bhagwat: ಪಾಕ್ ಜನಕ್ಕೆ ನೆಮ್ಮದಿ ಇಲ್ಲ, ದೇಶ ವಿಭಜನೆ ಪ್ರಮಾದ ಎಂಬ ಭಾವನೆ ಇದೆ: ಮೋಹನ್‌ ಭಾಗವತ್‌

Mohan Bhagwat

Destructive forces attack on cultural Marxists: RSS Chief Mohan Bhagwat

ಭೋಪಾಲ್‌: ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಆ ರಾಷ್ಟ್ರದ ಜನರು ಸಂತೋಷದಿಂದ ಇಲ್ಲ. ಅವರಿಗೆ ಈಗಲೂ ಭಾರತದಿಂದ ವಿಭಜನೆ ಆಗಿದ್ದು ಪ್ರಮಾದ ಎಂಬ ಭಾವನೆಯೇ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಭಾರತದ ಸಂಸ್ಕೃತಿ, ಬೇರೆಯವರ ಮೇಲೆ ದಾಳಿ ಮಾಡದಿರುವುದು, ಸ್ವಯಂ ರಕ್ಷಣೆ, ಸರ್ಜಿಕಲ್‌ ಸ್ಟ್ರೈಕ್‌ ಸೇರಿ ಹಲವು ವಿಷಯಗಳನ್ನು ಭಾಗವತ್‌ ಪ್ರಸ್ತಾಪಿಸಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಯುವ ಕ್ರಾಂತಿಕಾರಿ ಹೇಮು ಕಲಾನಿ ಜಯಂತಿ ಹಿನ್ನೆಲೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವತ್‌ ಮಾತನಾಡಿದರು. “1947ರಲ್ಲಿ ನಡೆದ ವಿಭಜನೆಗೂ ಮೊದಲು ಸಂಪೂರ್ಣ ಭಾರತ ಆಗಿತ್ತು. ಆದರೆ, ಭಾರತದಿಂದ ವಿಭಜನೆಗೊಂಡವರು ಈಗಲೂ ನೆಮ್ಮದಿಯಿಂದ ಇದ್ದಾರೆಯೇ? ಅವರಿಗೆ ಸಂತೋಷ ಎಂಬುದಿದೆಯೇ? ಈಗಲೂ ಅವರಿಗೆ ವಿಭಜನೆಯ ನೋವಿದೆ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ದೇಶದ ಹಲವೆಡೆಯಿಂದ ಆಗಮಿಸಿದ ಸಿಂಧಿಗಳು ಭಾಗವಹಿಸಿದ್ದರು.

ಆಕ್ರಮಣಕಾರಿ ಮನಸ್ಥಿತಿ ನಮ್ಮದಲ್ಲ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಬಂಧವು ಕೆಲ ವರ್ಷಗಳಿಂದ ಮತ್ತಷ್ಟು ಬಿಗಡಾಯಿಸಿರುವ ಕುರಿತು ಮಾತನಾಡಿದ ಅವರು, “ಭಾರತವು ಪಾಕಿಸ್ತಾನದ ಮೇಲೆ ದಾಳಿ ಮಾಡಬೇಕು ಎಂದು ಬಯಸುತ್ತಿಲ್ಲ. ಭಾರತವು ಇನ್ನೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಯನ್ನೇ ಹೊಂದಿಲ್ಲ. ನಮ್ಮ ಇತಿಹಾಸದಲ್ಲಿ ಎಲ್ಲಿಯೂ ನಾವು ದಾಳಿ ಮಾಡಿದ ನಿದರ್ಶನಗಳು ಇಲ್ಲ. ನಾವು ಯಾವಾಗಲೂ ನಮ್ಮ ರಕ್ಷಣೆಗೆ ಆದ್ಯತೆ ನೀಡಿದ್ದೇವೆಯೇ ಹೊರತು, ಆಕ್ರಮಣಕಾರಿ ನೀತಿ ನಮ್ಮದಾಗಿರಲಿಲ್ಲ” ಎಂದು ತಿಳಿಸಿದರು.

“ಪಾಕಿಸ್ತಾನದ ಜನರಿಗೆ ಈಗ ಅರ್ಥವಾಗುತ್ತಿದೆ. ಭಾರತದಿಂದ ಇಬ್ಭಾಗವಾಗಿರುವುದಕ್ಕೆ ಈಗ ಅವರಿಗೆ ಬೇಸರವಾಗಿರುತ್ತದೆ. ಭಾರತದಿಂದ ವಿಭಜನೆ ಆಗಿರುವುದು ತಪ್ಪು ಎಂಬುದು ಈಗ ಅವರಿಗೆ ಮನವರಿಕೆ ಆಗಿದೆ. ಹಾಗಾಗಿ ಪಾಕಿಸ್ತಾನದ ಜನ ಸಂತೋಷದಿಂದ ಇಲ್ಲ” ಎಂದರು. ಸರ್ಜಿಕಲ್‌ ಸ್ಟ್ರೈಕ್‌ ಕುರಿತು ಕೂಡ ಪ್ರಸ್ತಾಪಿಸಿದ ಅವರು, “ಭಾರತವು ಯಾವಾಗೂ ಸ್ವಯಂ ರಕ್ಷಣೆಗೆ ಆದ್ಯತೆ ನೀಡಿದೆ. ಹಾಗಂತ, ನಮ್ಮ ಮೇಲೆ ದಾಳಿ ನಡೆಸಿದರೆ ಸುಮ್ಮನಿರುವುದಿಲ್ಲ. ಇದಕ್ಕೆ ಸರ್ಜಿಕಲ್‌ ದಾಳಿಯೇ ಸಾಕ್ಷಿಯಾಗಿದೆ. ಮುಂದೆಯೂ ದೇಶದ ರಕ್ಷಣೆಗಾಗಿ ಇಂತಹ ದಾಳಿಗಳು ಮುಂದುವರಿಯುತ್ತವೆ” ಎಂದರು.

ಇತ್ತೀಚೆಗೆ ಮೋಹನ್‌ ಭಾಗವತ್‌ ಅವರು ಬ್ರಿಟಿಷ್‌ ಶಿಕ್ಷಣ ಪದ್ಧತಿ ಕುರಿತು ಮಾತನಾಡಿದ್ದರು. “ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ಶುರುವಾಗುವುದಕ್ಕೂ ಮೊದಲಿನ ಕಾಲದಲ್ಲಿ ಇಲ್ಲಿನ ಶೇ.70ರಷ್ಟು ಜನರು ಸುಶಿಕ್ಷಿತ (ವಿದ್ಯಾವಂತ)ರಾಗಿದ್ದರು. ಅದೇ ಸಮಯದಲ್ಲಿ ಇಂಗ್ಲೆಂಡ್​​ನಲ್ಲಿ ಶೇ.17ರಷ್ಟು ಜನರು ಮಾತ್ರ ವಿದ್ಯಾವಂತರಾಗಿದ್ದರು. ಆಗ ಭಾರತದಲ್ಲಿ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿದ್ದೇ ಬ್ರಿಟಿಷರು” ಎಂದು ತಿಳಿಸಿದ್ದರು.

“ಬ್ರಿಟಿಷರು ಇಲ್ಲಿಗೆ ಬರುವುದಕ್ಕೂ ಮೊದಲು ನಮ್ಮ ದೇಶದಲ್ಲಿ ಶೇ.70ರಷ್ಟು ಮಂದಿ ಸುಶಿಕ್ಷಿತರು ಇದ್ದರು. ಇಂಗ್ಲೆಂಡ್​​ನಲ್ಲಿ ಶಿಕ್ಷಣ ಪಡೆಯುವಿಕೆ ಪ್ರಮಾಣ ಶೇ.17ರಷ್ಟು ಇತ್ತು. ಇಲ್ಲಿಗೆ ಬಂದ ಬ್ರಿಟಿಷರು ನಮ್ಮಲ್ಲಿದ್ದ ಶಿಕ್ಷಣ ವ್ಯವಸ್ಥೆಯನ್ನು ತಮ್ಮ ದೇಶದಲ್ಲಿ ಅನುಷ್ಠಾನಕ್ಕೆ ತಂದರು. ಹಾಗೇ, ಅವರ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಜಾರಿಗೊಳಿಸಿದರು. ಅದೇ ಕಾರಣಕ್ಕೆ ಭಾರತದ ಶಿಕ್ಷಣ ವ್ಯವಸ್ಥೆ ಹಾಳಾಯಿತು. ನಮ್ಮಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗಿ, ಅವರ ದೇಶದಲ್ಲಿ ಸುಶಿಕ್ಷಿತರ ಪ್ರಮಾಣ ಜಾಸ್ತಿಯಾಯಿತು” ಎಂದಿದ್ದರು.

Exit mobile version