ನವದೆಹಲಿ: ಬಹುಕಾಲದಿಂದ ಅನಾರೋಗ್ಯಪೀಡಿತರಾಗಿದ್ದ ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾದರು(Pervez Musharraf death). ಅವರ ಈ ನಿಧನಕ್ಕೆ ಜಗತ್ತಿನ ಹಲವು ನಾಯಕರು ಸಂತಾಪ ಸೂಚಿಸುತ್ತಿದ್ದಾರೆ. ಆದರೆ, ಭಾರತದಲ್ಲಿ ಈ ವಿಷಯ ರಾಜಕೀಯ ಕಾದಾಟಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕ, ತಿರುವನಂಥಪುರಂ ಸಂಸದ ಶಶಿ ತರೂರ್ ಮಾಡಿರುವ ಟ್ವೀಟ್ ಈಗ ವಿವಾದಕ್ಕೆ ಕಾರಣವಾಗಿದೆ.
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ನಿಧನದ ಸುದ್ದಿ ಗೊತ್ತಾಗುತ್ತಿದ್ದಂತೆ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಅವರು, ಮುಷರಫ್ ಅವರು ಒಂದು ಕಾಲದಲ್ಲಿ ಭಾರತದ ನಿರ್ದಯಿ ಶತ್ರು. ಆದರೆ, 2002 ಮತ್ತು 2007 ರ ನಡುವೆ ಶಾಂತಿ ಸ್ಥಾಪನೆಗಾಗಿ ನಿಜವಾದ ಶಕ್ತಿ ಎನಿಸಿಕೊಂಡರು. ಬುದ್ಧಿವಂತ, ತೊಡಗಿಸಿಕೊಳ್ಳುವ ಮತ್ತು ಕಾರ್ಯತಂತ್ರದ ಚಿಂತನೆಯಲ್ಲಿ ಸ್ಪಷ್ಟ ವ್ಯಕ್ತಿ ಎಂದು ಟ್ವೀಟ್ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದರು.
ತರಾಟೆಗೆ ತೆಗೆದುಕೊಂಡ ಬಿಜೆಪಿ
ಕಾರ್ಗಿಲ್ ಯುದ್ಧಕ್ಕೆ ಕಾರಣವಾದ ಜನರಲ್ ಪರ್ವೇಜ್ ಮುಷರಫ್ ಅವರನ್ನು ಶ್ಲಾಘಿಸಿದ್ದಕ್ಕೆ ಬಿಜೆಪಿ ಕಾಂಗ್ರೆಸ್ ವಿರುದ್ಧ ತಿರುಗೇಟು ನೀಡಿದೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಬಿಜೆಪಿಯ ವಕ್ತಾರ ಶೆಹಜಾದ್ ಪೂನಾವಾಲ ಅವರು, ತಮ್ಮ ಸ್ವಂತ ಸೈನಿಕರ ಪಾರ್ಥಿವ ಶರೀರಗಳನ್ನು ಸ್ವೀಕರಿಸಲು ನಿರಾಕರಿಸಿದ ವ್ಯಕ್ತಿ. ಮುಷರಫ್ ಅವರಿಂದಾಗಿ ಕಾರ್ಗಿಲ್ ಯುದ್ಧ ನಡೆಯಿತು. ಅವರು, ತಾಲಿಬಾನಿಗಳನ್ನು ಸಹೋದರರು ಮತ್ತು ಅಲ್ ಕೈದಾ ಉಗ್ರ ಒಸಾಮಾ ಬಿನ್ ಲಾಡೆನ್ ಅನ್ನು ಹೀರೋ ಎಂದು ಕರೆದಿದ್ದರು. ರಾಹುಲ್ ಗಾಂಧಿ ಅವರನ್ನು ಮುಷರಫ್ ಅವರು ಸಜ್ಜನ ಎಂದು ಕರೆದಿದ್ದರು. ಅದಕ್ಕಾಗಿ ಅವರ ಮೇಲೆ ಕಾಂಗ್ರೆಸ್‌ಗೆ ಪ್ರೀತಿ ಇರಬೇಕು ಎಂದು ಟ್ವೀಟ್ ಮಾಡಿ ಟೀಕಿಸಿದ್ದಾರೆ.
ಇದನ್ನೂ ಓದಿ: Pervez Musharraf Death: ಪರ್ವೇಜ್ ಮುಷರಫ್ ಹುಟ್ಟೂರು ದಿಲ್ಲಿ; ವಿಸ್ಕಿ, ಸಿಗಾರ್ ಪ್ರಿಯ
ದುಬೈನಲ್ಲಿ ನಿಧನ
ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ದುಬೈ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ದೀರ್ಘ ಕಾಲದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದುಬೈ ಆಸ್ಪತ್ರೆ ದಾಖಲಿಸಲಾಗಿತ್ತು. ಅವರ ಪಾರ್ಥಿವ ಶರೀರವನ್ನು ದುಬೈನಿಂದ ಪಾಕಿಸ್ತಾನಕ್ಕೆ ತರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಪಾಕಿಸ್ತಾನದಿಂದ ಹೊರಗಿದ್ದ ಅವರನ್ನು ವಾಪಸ್ ಸ್ವದೇಶಕ್ಕೆ ಕರೆ ತರುವ ಪ್ರಯತ್ನವು ಕಳೆದ ಒಂದು ವರ್ಷದಿಂದ ನಡೆದಿತ್ತು. ಅಮಿಲೋಯ್ಡೋಸಿಸ್ (Amyloidosis) ಎಂಬ ಕಾಯಿಲೆಯಿಂದ ಪರ್ವೇಜ್ ಅವರು ಬಳಲುತ್ತಿದ್ದರು.