Site icon Vistara News

New Parliament Building: ಸಂಸತ್‌ ಭವನದ ಉದ್ಘಾಟನೆ; ರಾಷ್ಟ್ರಪತಿಗೆ ಆಹ್ವಾನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Petition in Supreme Court seeks invite for President to new Parliament building event

Petition in Supreme Court seeks invite for President to new Parliament building event

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಅವರ ಜಯಂತಿ ದಿನವಾದ ಮೇ 28ರಂದು ನೂತನ ಸಂಸತ್‌ ಭವನದ (New Parliament Building) ಉದ್ಘಾಟನೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಇದರ ಬೆನ್ನಲ್ಲೇ, ಉದ್ಘಾಟನೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಸುಮಾರು 20 ಪಕ್ಷಗಳು ಉದ್ಘಾಟನೆ ಕಾರ್ಯಕ್ರಮವನ್ನೇ ಬಹಿಷ್ಕರಿಸಿವೆ. ಇದರ ಬೆನ್ನಲ್ಲೇ, ರಾಷ್ಟ್ರಪತಿ ಅವರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಅಡ್ವೊಕೇಟ್ ಸಿ.ಆರ್‌. ಜಯಾ ಸುಕಿನ್‌ ಅವರು ಸುಪ್ರೀಂ ಕೋರ್ಟ್‌ಗೆ ಗುರುವಾರ ಅರ್ಜಿ ಸಲ್ಲಿಸಿದ್ದು, ಶುಕ್ರವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. “ಸಂವಿಧಾನದ 79ನೇ ವಿಧಿ ಪ್ರಕಾರ, ಸಂಸತ್ತಿನಲ್ಲಿ ಎರಡು ಸದನಗಳು ಇರಬೇಕು ಹಾಗೂ ಒಬ್ಬ ರಾಷ್ಟ್ರಪತಿ ಇರಬೇಕು ಎಂಬ ನಿಯಮವಿದೆ. ಆದರೆ, ಲೋಕಸಭೆ ಸಚಿವಾಲಯ ಹಾಗೂ ಕೇಂದ್ರ ಸರ್ಕಾರವು 79ನೇ ವಿಧಿಯನ್ನು ಉಲ್ಲಂಘಿಸಿವೆ” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ನೂತನ ಸಂಸತ್‌ ಭವನದ ಉದ್ಘಾಟನೆಯನ್ನು ಬಹಿಷ್ಕರಿಸಲು 20 ಪ್ರತಿಪಕ್ಷಗಳು ನಿರ್ಧರಿಸಿದ್ದರೆ, 17 ಪಕ್ಷಗಳು ಬೆಂಬಲಿಸಿವೆ. ಸಂಸತ್‌ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವುದರಿಂದಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೇಪಥ್ಯಕ್ಕೆ ಸರಿಸಿದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ 20 ಪ್ರತಿಪಕ್ಷಗಳ ಒಕ್ಕೂಟವು ಆರೋಪಿಸಿವೆ.

ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ಕಾಂಗ್ರೆಸ್ ನೇತೃತ್ವದ 19 ವಿರೋಧ ಪಕ್ಷಗಳ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬುಧವಾರ ಖಂಡಿಸಿದೆ. “ಈ ಕೃತ್ಯ ಕೇವಲ ಅಗೌರವವಲ್ಲ; ಇದು ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರವಾದ ಅವಮಾನವಾಗಿದೆʼʼ ಎಂದು ಎನ್‌ಡಿಎ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಇದನ್ನೂ ಓದಿ: ವಿಸ್ತಾರ Explainer: New Parliament Building: ಹೇಗಿದೆ ಹೊಸ ಸಂಸತ್‌ ಭವನ? ಇಲ್ಲಿದೆ ನೋಡಿ ವಿಡಿಯೊ

ಕಂಗೊಳಿಸಲಿದೆ ರಾಜದಂಡ

ಹೊಸದಾಗಿ ನಿರ್ಮಾಣವಾದ ಸಂಸತ್​ ಭವನದಲ್ಲಿ ತಮಿಳುನಾಡಿನ ’ರಾಜದಂಡ’ (ಸೆಂಗೋಲ್​)ವನ್ನು ಕೂಡ ಇಡಲಾಗುತ್ತದೆ. ʼ‘ಸೆಂಗೋಲ್ ಅಂದರೆ ರಾಜದಂಡ ಎಂಬುದು ಭಾರತದ ಸ್ವಾತಂತ್ರ್ಯದ ಪ್ರತೀಕವಾಗಿದೆ. ಬ್ರಿಟಿಷರು ಭಾರತಕ್ಕೆ ಆಡಳಿತ/ಅಧಿಕಾರವನ್ನು ಹಸ್ತಾಂತರ ಮಾಡಿ ಹೋದ ನಂತರ ತಮಿಳುನಾಡಿನ ಜನರು, ಅಂದಿನ ಪ್ರಧಾನಿ ಜವಾಹರ್​ಲಾಲ್​ ನೆಹರೂ ಅವರಿಗೆ ಈ ರಾಜದಂಡ ನೀಡಿದ್ದರು. ಭಾರತದಲ್ಲಿ ಆಡಳಿತ ನಡೆಸುವ ಅಧಿಕಾರ ಭಾರತಕ್ಕೇ ಸಿಕ್ಕಿದ್ದರಿಂದ 1947ರ ಆಗಸ್ಟ್​ 14ರಂದು ಬೆಳಗ್ಗೆ 10.45ಕ್ಕೆ ಈ ಸೆಂಗೋಲ್​​ನ್ನು ನೆಹರೂ ಅವರಿಗೆ ನೀಡಲಾಗಿತ್ತು. ಇದು ಸಂಪೂರ್ಣವಾಗಿ ಚಿನ್ನದ್ದು ʼ’ ಎಂದು ಗೃಹ ಸಚಿವ ಅಮಿತ್ ಶಾ ವಿವರಿಸಿದ್ದಾರೆ.

Exit mobile version