ಹೊಸದಿಲ್ಲಿ: ಹೊಸ ಚುನಾವಣಾ ಆಯುಕ್ತರನ್ನು (Election Commissioners) ಕೇಂದ್ರ ಸರ್ಕಾರ (Central government) ನೇಮಿಸದಂತೆ ತಡೆಯಾಜ್ಞೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ (Supreme court) ಅರ್ಜಿ ಸಲ್ಲಿಸಲಾಗಿದೆ. ಕಳೆದ ವಾರ ತೆರವಾಗಿರುವ ಇಬ್ಬರು ಚುನಾವಣಾ ಆಯುಕ್ತರ ಸ್ಥಾನಕ್ಕೆ ಈ ವಾರ ನೇಮಕ ಆಗಬೇಕಿದೆ. ಮಧ್ಯಪ್ರದೇಶದ ಕಾಂಗ್ರೆಸ್ ನಾಯಕರೊಬ್ಬರು ಇದಕ್ಕೆ ತಡೆಯಾಜ್ಞೆ ಕೋರಿದ್ದಾರೆ.
ಆಯುಕ್ತರಾಗಿದ್ದ ಅರುಣ್ ಗೋಯೆಲ್ (Arun Goel) ಅವರ ಇತ್ತೀಚಿನ ರಾಜೀನಾಮೆ ಮತ್ತು ಕಳೆದ ತಿಂಗಳು ಅನುಪ್ ಚಂದ್ರ ಪಾಂಡೆ (Anup Chandra Pandey) ಅವರ ನಿವೃತ್ತಿಯ ನಂತರ ಎರಡು ಚುನಾವಣಾ ಆಯುಕ್ತರ ಹುದ್ದೆಗಳು ಖಾಲಿಯಾಗಿವೆ. ಈ ವಾರದ ನಂತರ ಲೋಕಸಭೆ ಚುನಾವಣೆಯ (Lok sabha Election 2024) ದಿನಾಂಕಗಳನ್ನು ಘೋಷಿಸುವ ಸಾಧ್ಯತೆಯಿದೆ. ಮೂರು ಸದಸ್ಯರಿರಬೇಕಾದ ಭಾರತೀಯ ಚುನಾವಣಾ ಆಯೋಗದಲ್ಲಿ ಈಗ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ (Chief Election Commissioner Rajiv Kumar) ಅವರು ಮಾತ್ರ ಉಳಿದಿದ್ದಾರೆ.
ಭಾರತದಲ್ಲಿ ಚುನಾವಣಾ ಕಮಿಷನರ್‌ಗಳನ್ನು ಪ್ರಧಾನ ಮಂತ್ರಿ ಅಧ್ಯಕ್ಷತೆಯ ಮೂರು ಸದಸ್ಯರ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿ, ಕೇಂದ್ರ ಸಚಿವರು ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಕೂಡ ಇದ್ದಾರೆ. ಉನ್ನತಾಧಿಕಾರ ಸಮಿತಿಯು ಮಾರ್ಚ್ 15ರೊಳಗೆ ನೇಮಕಾತಿಗಳನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.
2023ರ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲೇಖಿಸಿ, ಚುನಾವಣಾ ಆಯುಕ್ತರನ್ನು ನೇಮಿಸದಂತೆ ಸರ್ಕಾರವನ್ನು ತಡೆಯಲು ಕೋರಿ ಕಾಂಗ್ರೆಸ್ ನಾಯಕಿ ಜಯಾ ಠಾಕೂರ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಅರ್ಜಿಯಲ್ಲಿ ಅವರು, ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ತೀರ್ಪು ನೀಡಿದ ಸಂವಿಧಾನ ಪೀಠದ 2023ರ ಆದೇಶವನ್ನು ಉಲ್ಲೇಖಿಸಿದ್ದಾರೆ.
ಹೊಸ ಕಾನೂನನ್ನು ಅಸಾಂವಿಧಾನಿಕವೆಂದು ಪರಿಗಣಿಸಬೇಕು. 2023ರ ನಿರ್ಧಾರಕ್ಕೆ ಅನುಗುಣವಾಗಿ ಚುನಾವಣಾ ಆಯುಕ್ತರ ನೇಮಕ ಮಾಡಬೇಕು ಎಂದು ಠಾಕೂರ್ ಕೋರಿದ್ದಾರೆ. ನೇಮಕಾತಿ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳ ಸೇರ್ಪಡೆ ಆದರೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಬಹುದು ಎಂದಿದ್ದಾರೆ.
“ಸಂಸತ್ತು ಈ ಬಗ್ಗೆ ಕಾನೂನು ರಚಿಸುವವರೆಗೆ, ಈ ತೀರ್ಪಿನಂತೆ ನಡೆಸಬೇಕು” ಎಂದು 2023ರ ಆದೇಶದಲ್ಲಿ ನ್ಯಾಯಾಲಯ ಹೇಳಿತ್ತು. ಮುಖ್ಯ ಚುನಾವಣಾ ಆಯುಕ್ತ ಮತ್ತು ಇಬ್ಬರು ಚುನಾವಣಾ ಆಯುಕ್ತರನ್ನು ನೇಮಿಸಲು ಹೊಸ ಕಾರ್ಯವಿಧಾನವನ್ನು ಸ್ಥಾಪಿಸಲು ಸರ್ಕಾರ ಡಿಸೆಂಬರ್‌ನಲ್ಲಿ ಹೊಸ ಕಾನೂನನ್ನು ತಂದಿತು. ಹೊಸ ಕಾನೂನಿನ ಪ್ರಕಾರ, ನೇಮಕಾತಿ ಸಮಿತಿಯಲ್ಲಿದ್ದ ಭಾರತದ ಮುಖ್ಯ ನ್ಯಾಯಾಧೀಶರ ಬದಲಿಗೆ ಕೇಂದ್ರದ ಒಬ್ಬ ಸಚಿವರನ್ನು ಸರ್ಕಾರ ತಂದಿತ್ತು.
ಪ್ರತಿಪಕ್ಷಗಳು ಈ ಕಾನೂನನ್ನು ವಿರೋಧಿಸಿವೆ. ಇದು ಉನ್ನತ ಚುನಾವಣಾಧಿಕಾರಿಗಳ ನೇಮಕಾತಿಯಲ್ಲಿ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಇದು ಚುನಾವಣಾ ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ತರುತ್ತದೆ ಎಂದು ಆರೋಪಿಸಿದ್ದವು. ಈ ಹಿಂದೆ ಎಂಎಸ್ ಠಾಕೂರ್ ಎಂಬವರು ಸಲ್ಲಿಸಿದ್ದ ಒಂದು ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಈ ಕಾನೂನನ್ನು ರದ್ದುಪಡಿಸಲು ನಿರಾಕರಿಸಿತ್ತು. ಈ ವಿಷಯದ ಕುರಿತು ಬಾಕಿ ಉಳಿದಿರುವ ಹಲವಾರು ಪ್ರಕರಣಗಳು ಏಪ್ರಿಲ್‌ನಲ್ಲಿ ವಿಚಾರಣೆಗೆ ಬರಲಿವೆ.
ಇದನ್ನೂ ಓದಿ: Electoral Bonds: ನಾಳೆಯೊಳಗೆ ಚುನಾವಣೆ ಬಾಂಡ್ ಮಾಹಿತಿ ನೀಡಿ; ಎಸ್‌ಬಿಐಗೆ ಸುಪ್ರೀಂ ಆದೇಶ