Site icon Vistara News

Petrol price: ನಿತಿನ್ ಗಡ್ಕರಿ ಪೆಟ್ರೋಲ್ ಬೆಲೆ ಲೀಟರ್‌ಗೆ 15 ರೂ.ಗೆ ಇಳಿಸ್ತಾರಂತೆ!

Nitin Gadkari

ಹೊಸದಿಲ್ಲಿ: ಪೆಟ್ರೋಲ್‌ ಬೆಲೆಯನ್ನು (Petrol price) ಲೀಟರ್‌ಗೆ 15 ರೂಪಾಯಿಗೆ ಇಳಿಸುವುದು ಹೇಗೆ ಎಂಬ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ (Nitin Gadkari) ಅವರು ಟಿಪ್ಸ್‌ ನೀಡಿದ್ದಾರೆ.

ರೈತರು ಉತ್ಪಾದಿಸುವ ಇಥೆನಾಲ್‌ನಿಂದ ಚಲಾಯಿಸಲಾಗುವ ವಾಹನಗಳ ಮೂಲಕ ಪೆಟ್ರೋಲ್‌ ಬೆಲೆ ಇಳಿಯಲಿದೆ ಎಂದವರು ಹೇಳಿದ್ದಾರೆ. ʼʼನಮ್ಮ ರೈತರು ಅನ್ನದಾತರು ಮಾತ್ರವಲ್ಲ, ಶಕ್ತಿದಾತರೂ ಆಗಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ರೈತರು ಇಥೆನಾಲ್‌ ದೊಡ್ಡ ಪ್ರಮಾಣದಲ್ಲಿ ಬೆಳೆಯುವುದು ಸಾಧ್ಯವಾದಾಗ ಪೆಟ್ರೋಲ್‌ ಬೇಕಿರುವುದಿಲ್ಲ. ನಮ್ಮ ಬಳಕೆಯ ಶೇ.60ರಷ್ಟು ಇಥೆನಾಲ್‌ನಿಂದ ಮತ್ತು ಶೇ.40ರಷ್ಟು ವಿದ್ಯುತ್‌ನಿಂದ ಬಂದರೆ, ಪೆಟ್ರೋಲ್‌ನ ಬೆಲೆ ಖಂಡಿತವಾಗಿಯೂ ಲೀಟರ್‌ಗೆ 15 ರೂ.ಗೆ ಇಳಿಯಲಿದೆ ಎಂದು ಗಡ್ಕರಿ ಹೇಳಿದ್ದಾರೆ.

ಅಂಥ ಸಂದರ್ಭದಲ್ಲಿ ಪರಿಸರ ಮಾಲಿನ್ಯವೂ ತಗ್ಗಲಿದೆ ಮಾತ್ರವಲ್ಲ, ಭಾರತದ ಭಾರಿ ಆಮದು ವೆಚ್ಚವೂ ತಗ್ಗಲಿದೆ. ಇಂದು ಪೆಟ್ರೋಲ್‌ ಆಮದಿನ ಮೌಲ್ಯದ ಪ್ರಮಾಣ 16 ಲಕ್ಷ ಕೋಟಿ ರೂ.ಗಳಷ್ಟಿದೆ. ಈ ಹಣ ರೈತರ ಮನೆಗಳಿಗೆ ತಲುಪಲಿದೆ ಎಂದಿದ್ದಾರೆ ಗಡ್ಕರಿ.

ಆಗಸ್ಟ್‌ನಲ್ಲಿ ಟೊಯೊಟಾ ಕಂಪನಿಯ ಕ್ಯಾಮ್ರಿ ಕಾರು ಮಾರುಕಟ್ಟೆಗೆ ಆಗಮಿಸಲಿದ್ದು, ಅದು ಸಂಪೂರ್ಣ ಇಥೆನಾಲ್‌ನಿಂದಲೇ ನಡೆಯಲಿದೆ. ಇಥೆನಾಲ್‌ನ ದರ ಲೀಟರ್‌ಗೆ 60 ರೂ. ಜತೆಗೆ ಇದು ಶೇ.40ರಷ್ಟು ವಿದ್ಯುತ್ತನ್ನೂ ಉತ್ಪಾದಿಸಲಿದೆ. ಹೀಗಾಗಿ ಪೆಟ್ರೋಲ್‌ ಬೆಲೆ ಸರಾಸರಿ ರೂ.15ಕ್ಕೆ ಇಳಿಯಲಿದೆ ಎಂದು ಗಡ್ಕರಿ ಹಿಂದೆಯೂ ಒಮ್ಮೆ ಹೇಳಿದ್ದರು.

ಇಥೆನಾಲ್‌, ಬಯೋಮಾಸ್‌ ಎಂದು ಕರೆಯಲ್ಪಡುವ ಹಲವಾರು ಸಸ್ಯಜನ್ಯ ವಸ್ತುಗಳಿಂದ ತಯಾರಿಸಲ್ಪಡುವ ಇಂಧನ. ಇದನ್ನು ಇನ್ನಿತರ ಕೆಲವು ವಿಧದ ರಾಸಾಯನಿಕಗಳೊಂದಿಗೆ ಸೇರಿಸಿ ಪೆಟ್ರೋಲ್‌ಗೆ ಪರ್ಯಾಯವಾಗಿ ಉಪಯೋಗಿಸಬಹುದಾಗಿದೆ.

ಇದನ್ನೂ ಓದಿ: Milage Scooters in India : ಪೆಟ್ರೋಲ್​ ಉಳಿತಾಯ ಮಾಡುವ ಕೆಲವು ಸ್ಕೂಟರ್​​ಗಳು

Exit mobile version