Site icon Vistara News

Pharma Company Blast: ಫಾರ್ಮಾ ಕಂಪನಿಯಲ್ಲಿ ಭಾರೀ ಬ್ಲಾಸ್ಟ್‌- 17ಮಂದಿ ಬಲಿ; ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಭೀತಿ

Pharma Company Blast

ಹೈದರಾಬಾದ್‌: ಆಂಧ್ರಪ್ರದೇಶ(Andra Pradesh)ದ ಅನಕಪಲ್ಲಿಯಲ್ಲಿ ಸಂಭವಿಸಿದ ಸ್ಫೋಟ(Pharma Company Blast)ದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 41 ಮಂದಿ ಗಾಯಗೊಂಡಿದ್ದಾರೆ. ಅಚ್ಯುತಪುರಂ ವಿಶೇಷ ಆರ್ಥಿಕ ವಲಯದಲ್ಲಿ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಗಾಯಗೊಂಡಿರುವ ಅನೇಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಆರ್ಥಿಕ ವಲಯದಲ್ಲಿರುವ ಎಸ್ಸೆಂಟಿಯಾ ಕಂಪನಿ, ಫಾರ್ಮಾ ಕಂಪನಿಯ ಘಟಕದಲ್ಲಿ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಎನ್‌ಟಿಆರ್‌ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಆರಂಭದಲ್ಲಿ ಈ ದುರಂತ ರಿಯಾಕ್ಟರ್‌ ಬ್ಲಾಸ್ಟ್‌ನಿಂದ ಸಂಭವಿಸಿದೆ ಎನ್ನಲಾಗಿತ್ತು. ಆದರೆ ರಿಯಾಕ್ಟರ್‌ ಬ್ಲಾಸ್ಟ್‌ ಆಗಿಲ್ಲ. ಇದು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಸಂಭವಿಸಿದ ದುರ್ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ಈ ಸ್ಥಾವರದಲ್ಲಿ ಸುಮಾರು 380 ಉದ್ಯೋಗಿಗಳು ಎರಡು ಪಾಳಿಗಳಲ್ಲಿ ಕೆಲಸ ಮಾಡುತ್ತಾರೆ. ಊಟದ ವೇಳೆ ಈ ಅವಘಡ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ. ಸ್ಥಳದಿಂದ ಬಂದ ದೃಶ್ಯಗಳು ಹೊಗೆಯಿಂದ ಸುತ್ತುವರಿದ ಮತ್ತು ಸುತ್ತಮುತ್ತಲಿನ ಹಳ್ಳಿಗಳನ್ನು ಆವರಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ನಾಳೆ ಸ್ಥಳಕ್ಕೆ ಭೇಟಿ ನೀಡಲಿದ್ದು, ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಮುಖ್ಯಮಂತ್ರಿಗಳು ತನಿಖೆಗೆ ಆದೇಶಿಸಿದ್ದಾರೆ. ಬೆಂಕಿ ನಂದಿಸಲು ಆರು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗೆ ಕರೆ ನೀಡಲಾಗಿದೆ. ಘಟಕದೊಳಗೆ ಸಿಲುಕಿದ್ದ 13 ಮಂದಿಯನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇಂತಹದ್ದೇ ಒಂದು ಘಟನೆ ಕೆಲವು ತಿಂಗಳ ಹಿಂದೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿತ್ತು. ಪಟಾಕಿ ಕಾರ್ಖಾನೆಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ನಾಲ್ವರು ಮೃತಪಟ್ಟಿದ್ದರು. ಘಟನೆಯಲ್ಲಿ ಸುಮಾರು 15 ಮಂದಿ ಗಾಯಗೊಂಡಿದ್ದರು. ದೊಂಬಿವಿಲಿ ಬಳಿಯ ಎಂಐಡಿಸಿ ಫೇಸ್‌ 2ರಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕರು ಮೇ 23ರ ಮಧ್ಯಾಹ್ನ ಕೆಲಸ ಮಾಡುವಾಗಲೇ ಬಾಯ್ಲರ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದಾದ ಕ್ಷಣಮಾತ್ರದಲ್ಲೇ ಭೀಕರ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಅಮುದನ್‌ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿತ್ತು. ಸ್ಫೋಟ ಸಂಭವಿಸಿದ ಕೆಲವೇ ನಿಮಿಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸಿತ್ತು.

ಇದನ್ನೂ ಓದಿ: Cooker Blast: ಅಡುಗೆ ಮಾಡುವಾಗ ಕುಕ್ಕರ್ ಸ್ಫೋಟವಾಗಿ ಯುವಕ ಸಾವು, ಮತ್ತೊಬ್ಬರ ಸ್ಥಿತಿ ಗಂಭೀರ

Exit mobile version