Site icon Vistara News

Phone-Tapping Case: ಫೋನ್ ಕದ್ದಾಲಿಕೆ ಪ್ರಕರಣ; ಮುಖ್ಯ ಆರೋಪಿ ಗುಪ್ತಚರ ದಳದ ಮಾಜಿ ಮುಖ್ಯಸ್ಥ ನಾಪತ್ತೆ

Phone-Tapping Case

Phone-Tapping Case

ಹೈದರಾಬಾದ್‌: ಲೋಕಸಭೆ ಚುನಾವಣೆಗೆ (Lok Sabha Election 2024) ದಿನ ಗಣನೆ ಆರಂಭವಾಗಿದೆ. ಈ ಮಧ್ಯೆ ತೆಲಂಗಾಣದಲ್ಲಿ ನಡೆದಿತ್ತು ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ (Phone-Tapping Case) ತೆಲಂಗಾಣ ಗುಪ್ತಚರ ದಳದ ಮಾಜಿ ಮುಖ್ಯಸ್ಥ ಟಿ.ಪ್ರಭಾಕರ್ ರಾವ್ (T Prabhakhar Rao) ಅವರನ್ನು ಆರೋಪಿ ನಂ.1 ಎಂದು ಹೆಸರಿಸಲಾಗಿದೆ. ಪ್ರಭಾಕರ್‌ ರಾವ್‌ ಸದ್ಯ ಅಮೆರಿಕದಲ್ಲಿದ್ದಾರೆ ಎಂದು ಅಂದಾಜಿಸಲಾಗಿದ್ದು, ಅವರ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಏನಿದು ಪ್ರಕರಣ?

ರಾಜ್ಯದಲ್ಲಿ ಈ ಹಿಂದೆ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಸರ್ಕಾರ ಇದ್ದಾಗ ಪ್ರತಿಪಕ್ಷ ನಾಯಕರ ಫೋನ್‌ಗಳನ್ನು ಪ್ರಭಾಕರ್‌ ರಾವ್‌ ಅವರ ಆದೇಶದ ಮೇರೆಗೆ ಕದ್ದಾಲಿಸಲಾಗಿತ್ತು. ಈ ಮೂಲಕ ದತ್ತಾಂಶಗಳನ್ನು ಸಂಗ್ರಹಿಸಲಾಗಿತ್ತು ಎನ್ನುವ ಆರೋಪವಿದೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್‌ನಲ್ಲಿರುವ ಪ್ರಭಾಕರ್‌ ರಾವ್ ಅವರ ಮನೆ, ʼಐ ನ್ಯೂಸ್ʼ ಎಂಬ ತೆಲುಗು ಟಿವಿ ವಾಹಿನಿಯನ್ನು ನಡೆಸುತ್ತಿರುವ ಶ್ರವಣ್ ರಾವ್ ಅವರ ನಿವಾಸ ಸೇರಿದಂತೆ ಸುಮಾರು ಹನ್ನೆರಡು ಸ್ಥಳಗಳನ್ನು ಹುಡುಕಾಟ ನಡೆಸಲಾಗಿದೆ.

ಇತರ ಆರೋಪಿಗಳು

ಇದೀಗ ಶ್ರವಣ್‌ ರಾವ್‌ ಕೂಡ ದೇಶ ತೊರೆದಿದ್ದಾರೆ ಎನ್ನಲಾಗುತ್ತಿದೆ. ಇವರು ಇಸ್ರೇಲ್‌ನಿಂದ ಫೋನ್ ಟ್ಯಾಪಿಂಗ್ ಉಪಕರಣಗಳನ್ನು ತರಿಸಿ ಸ್ಥಳೀಯ ಶಾಲೆಯ ಆವರಣದಲ್ಲಿ ಸರ್ವರ್‌ಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಸಿಟಿ ಟಾಸ್ಕ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮತ್ತೋರ್ವ ಪೋಲೀಸ್ ಅಧಿಕಾರಿ ರಾಧಾ ಕಿಶನ್ ರಾವ್ ಅವರನ್ನೂ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಸಲಾಗಿದೆ. ಅವರ ವಿರುದ್ಧವೂ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಮಾತ್ರವಲ್ಲ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ತೆಲಂಗಾಣ ಪೊಲೀಸ್ ಅಧಿಕಾರಿಗಳ ವಿರುದ್ಧವೂ ತನಿಖೆ ನಡೆಸಲಾಗುತ್ತಿದೆ.

ಮೂವರ ಬಂಧನ

ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ಈಗಾಗಲೇ ಮೂವರು ಐಪಿಎಸ್‌ ದರ್ಜೆ ಅಧಿಕಾರಿಗಳನ್ನು ಬಂಧಿಸಲಾಗಿದೆ. ಹೆಚ್ಚುವರಿ ಎಸ್‌ಪಿಗಳಾದ ಭುಜಂಗ ರಾವ್, ತಿರುಪತಣ್ಣ ಮತ್ತು ಡಿವೈಎಸ್‌ಪಿ ಪ್ರಣೀತ್ ರಾವ್ ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ಬಂಧಿತರಾಗಿರುವ ಪ್ರಣೀತ್ ರಾವ್ ಅಪರಿಚಿತ ವ್ಯಕ್ತಿಗಳ ಮಾಹಿತಿ ಸಂಗ್ರಹ ಸಂಗ್ರಹಿಸಿದ್ದರು ಮತ್ತು ಅನಧಿಕೃತ ರೀತಿಯಲ್ಲಿ ಅವರ ಚಟುವಟಿಕೆಯ ಮೇಲೆ ಕಣ್ಣಿಟ್ಟಿದ್ದರು ಎನ್ನಲಾಗಿದೆ. ಹಾಗೆಯೇ ಕೆಲವು ಕಂಪ್ಯೂಟರ್ ಸಿಸ್ಟಮ್‌ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಲ್ಲಿ ಸಂಗ್ರಹವಾಗಿರುವ ಡೇಟಾವನ್ನು ನಾಶಪಡಿಸಿದ ಆರೋಪವೂ ಅವರ ಮೇಲಿದೆ. ಪ್ರಭಾಕರ್ ರಾವ್ ಆದೇಶದ ಮೇರೆಗೆ ಸಾಕ್ಷ್ಯವನ್ನು ನಾಶಪಡಿಸಲಾಗಿದೆ ಎನ್ನಲಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಅನ್ನು ಕಾಂಗ್ರೆಸ್ ಸೋಲಿಸಿದ ಒಂದು ದಿನದ ನಂತರ ಈ ಆದೇಶವನ್ನು ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಚಿನ್ ಪೈಲಟ್ ಮೇಲೆ ನಿಗಾ, ಫೋನ್ ಕದ್ದಾಲಿಕೆ! ಸಿಎಂ ವಿಶೇಷ ಅಧಿಕಾರಿ ಹೇಳಿಕೆ

ಯಾರ ಮೇಲೆ ನಿಗಾ?

ನಿಗಾ ಇಡಲಾಗಿರುವ ವ್ಯಕ್ತಿಗಳ ಪಟ್ಟಿಯಲ್ಲಿ ಹಾಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಮತ್ತು ಬಿಆರ್‌ಎಸ್‌ ಪಕ್ಷದ ಸದಸ್ಯರೂ ಸೇರಿದ್ದಾರೆ. ತೆಲುಗು ನಟರು ಮತ್ತು ಉದ್ಯಮಿಗಳ ಮೇಲೆಯೂ ನಿಗಾ ಇರಿಸಲಾಗಿದ್ದು, ಅವರಲ್ಲಿ ಹಲವರನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎನ್ನಲಾಗಿದೆ. ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿರುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ಪ್ರಕರಣದ ಸಂಬಂಧ ಕನಿಷ್ಠ 30 ಪೊಲೀಸ್ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version