Site icon Vistara News

Chai GPT: ಚಾಟ್‌ಜಿಪಿಟಿ ಕೇಳಿದ್ದೀರಿ, ಚಾಯ್‌ ಜಿಪಿಟಿ ಕೇಳಿದ್ದೀರಾ? ಹೌದು, ಇಲ್ಲಿ ಎಐ ಸಿಗಲ್ಲ, ಚಾಯ್‌ ಸಿಗತ್ತೆ!

Chai GPT

Chai GPT

ನವದೆಹಲಿ: ನಾವೀಗ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಬದುಕುತ್ತಿದ್ದೇವೆ. ಮಾನವ ಸಂಘಜೀವಿ ಎನ್ನುತ್ತಾರೆ. ಆದರೆ, ಸಂಘಜೀವಿ ಅಲ್ಲದವರೂ (ಇಂಟ್ರೋವರ್ಟ್‌ಗಳು) ಜಾಲತಾಣಗಳಲ್ಲಿ ಇದ್ದಾರೆ. ಹಾಗಾಗಿ, ಜಾಲತಾಣಗಳು ಎಲ್ಲರ ಬದುಕನ್ನೂ ಆವರಿಸಿವೆ. ಅದರಲ್ಲೂ, ಇತ್ತೀಚೆಗೆ ಬಂದ ಜಾಟ್‌ಜಿಪಿಟಿ ಎಂಬ ಕೃತಕ ಬುದ್ಧಿಮತ್ತೆ ಆಧಾರಿತ (AI) ಚಾಟ್‌ಬಾಟ್‌ ಜಗತ್ತಿನಾದ್ಯಂತ ಆವರಿಸಿದೆ. ಎಲ್ಲರೂ ಚಾಟ್‌ಜಿಪಿಟಿಯನ್ನು ಬಳಸಿ, ಐಟಿ ಕಂಪನಿಗಳಲ್ಲಿ ಇದರ ಸದುಪಯೋಗಪಡಿಸಿಕೊಳ್ಳುತ್ತಿದ್ದರೆ, ಇಲ್ಲೊಬ್ಬ ಟೀ ಅಂಗಡಿ ಮಾಲೀಕ ಚಾಜ್‌ಜಿಪಿಟಿ ಹೆಸರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ತನ್ನ ಟೀ ಅಂಗಡಿಗೆ ಚಾಯ್‌ಜಿಪಿಟಿ (Chai GPT) ಎಂಬ ಹೆಸರಿಟ್ಟಿದ್ದಾನೆ. ಈತನ ಚಹಾ ಅಂಗಡಿಯ ಫೋಟೊ ಈಗ ವೈರಲ್‌ ಆಗಿದೆ.

ಹೌದು, ವ್ಯಕ್ತಿಯೊಬ್ಬರು ತಮ್ಮ ಅಂಗಡಿಗೆ ಚಾಯ್‌ಜಿಪಿಟಿ ಎಂದು ಹೆಸರಿಟ್ಟಿದ್ದಾರೆ. ಆ ಹೆಸರಿನ ದೊಡ್ಡ ಬೋರ್ಡ್‌ ಒಂದನ್ನು ನೇತುಹಾಕಿದ್ದಾರೆ. ಸ್ವಾತಿ ಎಂಬುವವರು ಟ್ವಿಟರ್‌ನಲ್ಲಿ ಟೀ ಅಂಗಡಿಯ ಫೋಟೊ ಶೇರ್‌ ಮಾಡಿದ್ದು, ಇದು ವೈರಲ್‌ ಆಗಿದೆ. ಜನರು ಟೀ ಅಂಗಡಿ ಮಾಲೀಕನ ಸೃಜನಶೀಲತೆಗೆ ಮಾರುಹೋಗಿದ್ದಾರೆ. ಇನ್ನೂ ಒಂದಷ್ಟು ಜನ, ಈ ಟೀ ಅಂಗಡಿ ಎಲ್ಲಿದೆ ಎಂದು ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ.

ಅಂದಹಾಗೆ, ಟೀ ಅಂಗಡಿ ಮಾಲೀಕನ ಪ್ರಕಾರ, ಜಿಪಿಟಿ ಎಂದರೆ ‘ಜೆನ್ಯೂನ್ಲಿ ಪ್ಯೂರ್‌ ಟೀ’ ಎಂಬುದಾಗಿ. ಈ ಕ್ರಿಯೇಟಿವಿಟಿಗೂ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಾತಿ ಅವರು ಈ ಅಂಗಡಿ ಎಲ್ಲಿದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ನೀಡಿಲ್ಲ. ಆದರೂ, ಜನ ಟೀ ಅಂಗಡಿ ಎಲ್ಲಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಹಾಗೆಯೇ, ತರಹೇವಾರಿಯಾಗಿ ಜನ ಪ್ರತಿಕ್ರಿಯೆ ನೀಡಿದ್ದಾರೆ. “ಇಂತಹ ಕೆಲಸವನ್ನು ಭಾರತದಲ್ಲಿ ಮಾತ್ರ ಸಾಧ್ಯ” ಎಂದು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Viral News : ಮ್ಯಾಕ್‌ಡೊನಾಲ್ಡ್ಸ್‌ನಲ್ಲಿ ಕೂತಿದ್ದ ಬಾಲಕನ ಚಡ್ಡಿಯೊಳಗೇ ಹೋಗಿ ಕಚ್ಚಿದ ಇಲಿ! ಇಲ್ಲಿದೆ ವೈರಲ್‌ ವಿಡಿಯೊ

ಜೀವನದಲ್ಲಿ ಬೇಸರಗೊಂಡಂತಿರುವ ವ್ಯಕ್ತಿಯೊಬ್ಬರು, “ನಾನೂ ಜೀವನದಲ್ಲಿ ಹೀಗೆ ಏನಾದರೂ ಮಾಡಬೇಕು ಎಂದಿರುವೆ. ಆದರೆ, ಯಾವುದೂ ಆಗುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗೆಯೇ, “ಭಾಯ್‌, ಇಲ್ಲಿ ಗೋಲ್‌ಗಪ್ಪಾ ಸೇರಿ ಎಲ್ಲ ಚಾಟ್ಸ್‌ ಸಿಗುತ್ತದೆಯೇ” ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಹೀಗೆ, ಒಬ್ಬೊಬ್ಬರು ಒಂದೊಂದು ರೀತಿ ಪ್ರತಿಕ್ರಿಯಿಸಿದ್ದಾರೆ.

Exit mobile version