ಲಖನೌ: 85 ವರ್ಷದ ವೃದ್ಧೆಯ ಮೇಲೆ 35 ವರ್ಷದ ಕಿಡಿಗೇಡಿಯೊಬ್ಬ ಬರ್ಬರವಾಗಿ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಯ ಮೃತಪಟ್ಟಿರುವ ಹೀನಕೃತ್ಯ ಉತ್ತರಪ್ರದೇಶ(Uttarpradesh)ದಲ್ಲಿ ನಡೆದಿದೆ. ಬರೇಲಿಯ ಹಫೀಜ್‌ಗಂಜ್‌ನಲ್ಲಿ ಸೋಮವಾರ 85 ವರ್ಷದ ಮಹಿಳೆಯೊಬ್ಬರು ಅತ್ಯಾಚಾರ(Physical Abuse)ಕ್ಕೊಳಗಾದ ನಂತರ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೃದ್ಧೆಯ ನೆರೆಮನೆಯಲ್ಲಿ ವಾಸಿಸುವ ರಾಕೇಶ್ ಎಂದು ಗುರುತಿಸಲಾದ 35 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತಿ ಮತ್ತು ಮಗ ಮೃತಪಟ್ಟ ನಂತರ ಸಂತ್ರಸ್ತೆ ಒಂಟಿಯಾಗಿ ವಾಸವಾಗಿದ್ದರು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ತಿಳಿಸಿದ್ದಾರೆ. ಮಹಿಳೆಯ ಸಹೋದರ ಮತ್ತು ಅತ್ತಿಗೆ ನೆರೆಹೊರೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರ ಸೊಸೆ ಅವರೊಂದಿಗೆ ವಾಸಿಸುತ್ತಿದ್ದಾರೆ. ಸೊಸೆಯ ಪ್ರಕಾರ, ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂತ್ರಸ್ತೆಯ ಮನೆಗೆ ಹೋದಾಗ, ರಾಕೇಶ್ ತನ್ನ ಅತ್ತೆಯ ಮೇಲೆ ಅತ್ಯಾಚಾರವೆಸಗುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿದ್ದಳು ಎಂದು ಆರ್ಯ ಹೇಳಿದರು.
ಬಳಿಕ ಆಕೆ ಆತನಿಗೆ ಎಚ್ಚರಿಕೆ ನೀಡಿದಾಗ ಆರೋಪಿ ಪರಾರಿಯಾಗಿದ್ದು, ಮನೆಯವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಈ ಭೀಕರ ಕೃತ್ಯದ ಬಳಿಕ ವೃದ್ಧೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮದ್ಯವ್ಯಸನಿಯಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಆರ್ಯ ತಿಳಿಸಿದ್ದಾರೆ. ಮಹಿಳೆಯ ಮರಣೋತ್ತರ ಪರೀಕ್ಷೆ ನಡೆಸುವಂತೆ ಸಮಿತಿಗೆ ಸೂಚಿಸಲಾಗಿದೆ.
ಕಳೆದ ವರ್ಷ ಇಂತಹದ್ದೇ ಘಟನೆ ಹಾಸನದಲ್ಲಿ ನಡೆದಿತ್ತು. 85 ವರ್ಷದ ವೃದ್ಧೆ ಮೇಲೆ 30 ವರ್ಷದ ಯುವಕನೊಬ್ಬ ಅತ್ಯಾಚಾರವೆಸಗಿರುವ ದಾರುಣ ಘಟನೆ ಅರಸೀಕೆರೆ ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ವರದಿಯಾಗಿತ್ತು. ಆರೋಪಿ ಮಿಥುನ್ ಕುಮಾರ್ ಮತ್ತು ಆತನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಮಾಡಾಳು ಗ್ರಾಮದ ಸಂತ್ರಸ್ತೆ, ದಾರಿ ತಪ್ಪಿ ನಡೆಯುತ್ತಿರುವುದನ್ನು ಗಮನಿಸಿದ್ದಾರೆ. ಆಗ ಆಕೆಯನ್ನು ತನ್ನ ಮೊಬೈಕ್ ನಲ್ಲಿ ಮನೆಗೆ ಡ್ರಾಪ್ ಮಾಡುವಂತೆ ಆರೋಪಿ ತಾಯಿ ಆತನಿಗೆ ಹೇಳಿದ್ದಾರೆ.
ಸಂತ್ರಸ್ತೆಯನ್ನು ತನ್ನ ದ್ವಿಚಕ್ರವಾಹನದಲ್ಲಿ ಕೂರಿಸಿಕೊಂಡ ಮಿಥುನ್, ಸಮೀಪದ ಹೊಲಕ್ಕೆ ಕರೆದೊಯ್ದು ಆಕೆಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ. ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿ ಆಕೆಯ ಹಣೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ನಂತರ ಸಂತ್ರಸ್ತೆಯ ಮೇಲೆ ಅತ್ಯಾಚಾರವೆಸಗಿದ್ದ. ಮಿಥುನ್ ಕೆಲವು ವರ್ಷಗಳ ಹಿಂದೆ ವಯಸ್ಸಾದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದಾಗ ಸಿಕ್ಕಿಬಿದ್ದಿದ್ದ ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ. ಆದರೆ ಗ್ರಾಮಸ್ಥರು ಎಚ್ಚರಿಕೆ ನೀಡಿ ಸಮಸ್ಯೆ ಬಗೆಹರಿಸಿದ್ದರು. ಆತ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಶಂಕಿಸಿದ್ದಾರೆ. ಮಿಥುನ್ ಯಾವುದೇ ಹಿಂಜರಿಕೆಯಿಲ್ಲದೆ ಘಟನೆಯನ್ನು ವಿವರಿಸಿದ್ದಾನೆ ಮತ್ತು ಅವನು “ಮಗುವಿನಂತೆ ವರ್ತಿಸುತ್ತಾನೆ” ಎಂದು ಪೊಲೀಸರು ತಿಳಿಸಿದ್ದಾರೆ.