Site icon Vistara News

Physical Abuse: ಕನ್ಯಾಪೊರೆ ಹರಿದರೆ ಮಾತ್ರ ಅತ್ಯಾಚಾರವಲ್ಲ: ಅಲಹಾಬಾದ್‌ ಹೈ ಕೋರ್ಟ್‌

Allahabad High Court

Allahabad High Court

ಅಲಹಾಬಾದ್‌: ಅತ್ಯಾಚಾರ ಪ್ರಕರಣವೊಂದರಲ್ಲಿ (Physical Abuse) ಆರೋಪಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ (Allahabad High court) ಎತ್ತಿಹಿಡಿದಿದೆ. ಇದರ ತೀರ್ಪು ನೀಡುತ್ತ ನ್ಯಾಯಾಲಯ, “ಸಂತ್ರಸ್ತೆಯ ಮೇಲೆ ಲೈಂಗಿಕ ದಾಳಿ ನಡೆದಾಗ ಆಕೆಯ ಕನ್ಯಾಪೊರೆ ಹರಿಯದೇ ಇದ್ದಿದರೂ (hymen rupture) ಅದು ಅತ್ಯಾಚಾರವೇ ಆಗು‌ತ್ತದೆʼʼ ಎಂದು ಸ್ಪಷ್ಟಪಡಿಸಿದೆ.

ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಿಶೇಷ ಪೋಕ್ಸೊ ನ್ಯಾಯಾಲಯವು 2022ರಲ್ಲಿ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ವಿರುದ್ಧ ಅಪರಾಧಿ ಮೇಲ್ಮನವಿ ಸಲ್ಲಿಸಿದ್ದ. ಕನ್ಯಾಪೊರೆ ಹರಿದಿದೆ ಎಂದು ವೈದ್ಯಕೀಯ ವರದಿಯಲ್ಲಿ ಕಂಡುಬಂದಿಲ್ಲದಿರುವುದರಿಂದ, ಅತ್ಯಾಚಾರ ನಡೆದಿಲ್ಲ ಎಂದು ಆರೋಪಿ ವಾದಿಸಿದ್ದ.

ಮ್ಯಾಜಿಸ್ಟ್ರೇಟ್ ಮತ್ತು ವಿಚಾರಣಾ ನ್ಯಾಯಾಲಯದ ಮುಂದೆ ನೀಡಿದ ಹೇಳಿಕೆಗಳಲ್ಲಿ. ಆರೋಪಿಯು ಸಂತ್ರಸ್ತೆಗೆ ಚೆನ್ನಾಗಿ ಪರಿಚಯವಿದ್ದ ವ್ಯಕ್ತಿ ಎಂದು ಉಚ್ಚ ನ್ಯಾಯಾಲಯ ಗಮನಿಸಿದೆ. “ವೈದ್ಯಕೀಯ ಸಾಕ್ಷ್ಯವು ಸಂತ್ರಸ್ತೆಯು ಲೈಂಗಿಕ ದಾಳಿಗೆ ತುತ್ತಾಗಿರುವುದನ್ನು ದೃಢೀಕರಿಸಿದೆ. ದಾಳಿಯಿಂದ ಸಂತ್ರಸ್ತೆಯ ಕನ್ಯಾಪೊರೆ ಭಾಗಶಃ ಹರಿದಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. ಆದರೆ ಪೂರ್ಣವಾಗಿ ಒಳತೂರದ ಕಾರಣ ಕನ್ಯಾಪೊರೆಯು ಭಾಗಶಃ ಹರಿದಿದೆ” ಎಂದು ನ್ಯಾಯಾಲಯವು ಗಮನಿಸಿದೆ.

“ಕನ್ಯಾಪೊರೆ ಛಿದ್ರವಾಗದೆ ಹೋದರೂ, ಯೋನಿಯೊಳಗೆ ಶಿಶ್ನವನ್ನು ಸ್ವಲ್ಪಮಟ್ಟಿಗೆ ತೂರಿಸಿದರೂ ಅದು ಅತ್ಯಾಚಾರವೇ ಆಗುತ್ತದೆ” ಎಂದು 2006ರಲ್ಲಿ ತಮಿಳುನಾಡು ರಾಜ್ಯದ ಉಚ್ಚ ನ್ಯಾಯಾಲಯ ನೀಡಿದ್ದ ತೀರ್ಪನ್ನು ಅಲಹಾಬಾದ್‌ ಹೈಕೋರ್ಟ್ ಉಲ್ಲೇಖಿಸಿದೆ. ಆದ್ದರಿಂದ, ಐಪಿಸಿಯ ಸೆಕ್ಷನ್ 376 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) 5/6ರ ಅಡಿಯಲ್ಲಿ ಈತ ಅಪರಾಧಿ ಎಂದು ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.

ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಸೈಯದ್ ಅಫ್ತಾಬ್ ಹುಸೇನ್ ರಿಜ್ವಿ ಅವರ ಹೈಕೋರ್ಟ್ ಪೀಠವು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 50,000 ರೂಪಾಯಿ ದಂಡ ವಿಧಿಸಿದೆ. ಈಗಾಗಲೇ ಏಳು ವರ್ಷಗಳ ಜೈಲುವಾಸ ಅನುಭವಿಸಿರುವುದರಿಂದ, ಶಿಕ್ಷೆಯನ್ನು ಹತ್ತು ವರ್ಷಗಳ ಕಠಿಣ ಕಾರಾಗೃಹವಾಸಕ್ಕೆ ಇಳಿಸಿದೆ.

ಇದನ್ನೂ ಓದಿ: Physical Abuse : ವೈನ್‌ ಕೊಟ್ಟು ರೇಪ್‌ ಮಾಡಿದ್ದ ನಿವೃತ್ತ ಐಎಎಸ್‌; ದೌರ್ಜನ್ಯದ ಹಿಂದಿನ ಕಹಾನಿ ಏನು?

Exit mobile version