Site icon Vistara News

Ayodhya Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠೆ ನಿಷೇಧ ಕೋರಿ ಅಲಹಾಬಾದ್‌ ಹೈಕೋರ್ಟ್‌ಗೆ ಪಿಐಎಲ್

Ram Mandir

ಲಖನೌ: ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ನಡೆಯಲಿರುವ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ (Pran Pratishtha) ಸಮಾರಂಭವನ್ನು ನಿಷೇಧಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್‌ನಲ್ಲಿ (Allahabad High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ.

ಉತ್ತರ ಪ್ರದೇಶದ ಘಾಜಿಯಾಬಾದ್‌ನ ಭೋಲಾ ದಾಸ್ ಎಂಬವರು ಅರ್ಜಿ ಸಲ್ಲಿಸಿದ್ದಾರೆ. ಪ್ರಾಣ ಪ್ರತಿಷ್ಠೆ ಕುರಿತು ಜ್ಯೋತಿರ್ಪೀಠದ ಶಂಕರಾಚಾರ್ಯರ ಆಕ್ಷೇಪಗಳನ್ನು ಉಲ್ಲೇಖಿಸಿ, ಸಮಾರಂಭವನ್ನು ನಿಷೇಧಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

“ಜನವರಿ 22ರಂದು ಅಯೋಧ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿರ್ಮಾಣ ಹಂತದಲ್ಲಿರುವ ದೇವಾಲಯದಲ್ಲಿ ರಾಮ್ ಲಲ್ಲಾನ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ. ಸಮಾರಂಭವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೆರವೇರಿಸಲಿದ್ದಾರೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಜ್ಯೋತಿಪೀಠಗಳ ಶಂಕರಾಚಾರ್ಯರ ಆಕ್ಷೇಪವಿದೆ. ಪುಷ್ಯ ಮಾಸದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದಿಲ್ಲ. ದೇವಾಲಯ ಇನ್ನೂ ಅಪೂರ್ಣವಾಗಿದೆ. ಅಪೂರ್ಣ ದೇವಾಲಯದಲ್ಲಿ ಯಾವುದೇ ದೇವರನ್ನು ಪ್ರತಿಷ್ಠಾಪಿಸಲು ಸಾಧ್ಯವಿಲ್ಲ” ಎಂದು ಮನವಿಯಲ್ಲಿ ತಿಳಿಸಲಾಗಿದೆ.

“ಈ ಪ್ರಾಣ ಪ್ರತಿಷ್ಠೆಯು ಸನಾತನ ಸಂಪ್ರದಾಯಕ್ಕೆ ವಿರುದ್ಧವಾದ ನಡೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನಮತದ ಲಾಭಕ್ಕಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಮಾರಂಭವನ್ನು ಆಯೋಜಿಸುತ್ತಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅಪೂರ್ಣ ದೇವಾಲಯದಲ್ಲಿ ʼಪ್ರಾಣ ಪ್ರತಿಷ್ಠಾ’ ಸಮಾರಂಭವನ್ನು ಆಕ್ಷೇಪಿಸಿರುವ ಜೋಶಿಪೀಠದ ಶಂಕರಾಚಾರ್ಯರು ಜನವರಿ 22ರ ಕಾರ್ಯಕ್ರಮಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ.

ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ಆಹ್ವಾನವನ್ನು ತಿರಸ್ಕರಿಸಿದ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್, “ನಮ್ಮ ಶಂಕರಾಚಾರ್ಯರು ಸಹ ರಾಮ ಮಂದಿರ ಕಾರ್ಯಕ್ರಮಕ್ಕೆ ಹಾಜರಾಗುವುದಿಲ್ಲ. ಇದು ರಾಮಮಂದಿರ ಕಾರ್ಯಕ್ರಮಕ್ಕೆ ನಾವು ಹಾಜರಾಗದಿರಲು ಮುಖ್ಯ ಕಾರಣ. ಸನಾತನ ಧರ್ಮದ ಅಗ್ರಸ್ಥಾನದಲ್ಲಿರುವ ಮತ್ತು ನಮಗೆ ಮಾರ್ಗದರ್ಶನ ನೀಡುವ ನಮ್ಮ ಶಂಕರಾಚಾರ್ಯರು ಈ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾರೆ. ಎಲ್ಲಾ ಶಂಕರಾಚಾರ್ಯರು ಇದನ್ನು ಬಹಿಷ್ಕರಿಸುವುದಾಗಿ ಹೇಳುತ್ತಿದ್ದಾರೆ. ಶಂಕರಾಚಾರ್ಯರು ಹಾಗೆ ಹೇಳುತ್ತಿದ್ದರೆ ಅದಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ” ಎಂದು ಗೆಹ್ಲೋಟ್ ಹೇಳಿದರು.

ಪುರಿಯ ಶಂಕರಾಚಾರ್ಯರಾದ ಸ್ವಾಮಿ ನಿಶ್ಚಲಾನಂದ ಸರಸ್ವತಿ ಮಹಾರಾಜ್ ಅವರು ರಾಮ್ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಶಾಸ್ತ್ರವಿರೋಧವಾದದ್ದು. ಆದ್ದರಿಂದ ತಾವು ಅದರಲ್ಲಿ ಭಾಗವಹಿಸುವುದಿಲ್ಲ ಎಂದಿದ್ದರು. ನಾಲ್ವರು ಶಂಕರಾಚಾರ್ಯರೂ ಇದಕ್ಕೆ ಹಾಜರಾಗುತ್ತಿಲ್ಲ ಎಂದಿದ್ದಾರೆ. “ಶಂಕರಾಚಾರ್ಯರು ತಮ್ಮದೇ ಆದ ಘನತೆಯನ್ನು ಹೊಂದಿದ್ದಾರೆ. ಇದು ಅಹಂಕಾರವಲ್ಲ. ಪ್ರಧಾನಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪಿಸುವಾಗ ನಾವು ಕೇವಲ ಹೊರಗೆ ಕುಳಿತು ಚಪ್ಪಾಳೆ ತಟ್ಟುತ್ತೇವೆ ಎಂದು ನಿರೀಕ್ಷಿಸುತ್ತೀರಾ?” ಎಂದಿದ್ದಾರೆ ಅವರು.

Exit mobile version