ನವದೆಹಲಿ: ಕರ್ನಾಟಕದಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿ ಇನ್ನೇನು ತಣ್ಣಗಾಗಿರುವ ಹಲಾಲ್ (Halal) ವಿಚಾರ ಮತ್ತೊಮ್ಮೆ ಜೀವ ಪಡೆಯುವ ಮುನೂಚನೆ ಲಭಿಸಿದ್ದು, ದೇಶಾದ್ಯಂತ ಹಲಾಲ್ ಉತ್ಪನ್ನಗಳನ್ನು ನಿಷೇಧಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.
ಇಸ್ಲಾಂ ಸಂಪ್ರದಾಯಕ್ಕೆ ಅನುಗುಣವಾಗಿ ಪ್ರಾಣಿಗಳ ಮಾಂಸವನ್ನು ಕತ್ತಿರುಸುವುದನ್ನು ಹಲಾಲ್ ಎನ್ನಲಾಗುತ್ತದೆ. ಮುಸ್ಲಿಮರು ಹಲಾಲ್ ಆಹಾರವನ್ನೇ ಸೇವಿಸಬೇಕು ಎಂದು ತಿಳಿಸಲಾಗಿದೆ. ಯಾವ ಹೋಟೆಲ್ ಹಾಗೂ ಆಹಾರ ಪದಾರ್ಥಗಳು ಹಲಾಲ್ ಸಂಪ್ರದಾಯಕ್ಕೆ ಅನುಗುಣವಾಗಿವೆ ಎನ್ನುವುದನ್ನು ಸೂಚಿಸಲು ಇತ್ತೀಚಿನ ವರ್ಷಗಳಲ್ಲಿ ಹಲಾಲ್ ಸರ್ಟಿಫಿಕೇಷನ್ ನೀಡಲಾಗುತ್ತಿತ್ತು.
ಬರಬರುತ್ತ ಈ ಪ್ರಮಾಣಪತ್ರ ನೀಡುವಿಕೆ ಆಹಾರ ಕ್ಷೇತ್ರವನ್ನು ಮೀರಿ ವೈದ್ಯಕೀಯ, ವಸ್ತ್ರ ಕ್ಷೇತ್ರಗಳಿಗೂ ಕಾಲಿಟ್ಟಿತ್ತು. ಈ ವಿಚಾರವನ್ನು ಅನೇಕ ಹಿಂದುಪರ ಸಂಘಟನೆಗಳು ವಿರೋಧಿಸಿದವು. ಕರ್ನಾಟಕದಲ್ಲಿ ಹಲಾಲ್ ಕಟ್‌ಗೆ ವಿರುದ್ಧವಾಗಿ ಝಟ್ಕಾ ಕಟ್ ಮಾಂಸ ಮಾರಾಟ ಮಾಡುವ ಅಭಿಯಾನ ನಡೆಯಿತು. ಝಟ್ಕಾ ಕಟ್ ಉದ್ಯಮವನ್ನು ಕೆಲವರು ಆರಂಭಿಸಿದರು. ಕರ್ನಾಟಕದಲ್ಲಿ ಕೆಲ ದಿನಗಳಿಂದ ಈ ವಿವಾದ ತಣ್ಣಗಾಗಿದೆ.
ಇದೀಗ ಸುಪ್ರೀಂಕೋರ್ಟ್‌ನಲ್ಲಿ ವಕೀಲ ವಿಭರ್ ಆನಂದ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಸಲ್ಲಿಸಿದ್ದಾರೆ. ಹಲಾಲ್ ಮಾಂಸವನ್ನು ದೇಶದ 85% ಜನರ ಮೇಲೆ ಹೇರಲಾಗುತ್ತಿದ್ದು, ಅವರೆಲ್ಲರ ಪರವಾಗಿ ತಾವು ಈ ಅರ್ಜಿ ಸಲ್ಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
“ಕೇವಲ 15% ಇರುವ ಮುಸ್ಲಿಂ ಅಲ್ಪಸಂಖ್ಯಾತರಿಗಾಗಿ ಎಲ್ಲರೂ ಹಲಾಲ್ ಆಹಾರವನ್ನು ಸೇವಿಸಬೇಕೆಂದು ಬಯಸಲಾಗುತ್ತಿದೆ. 85% ಜನರ ಮೇಲೆ ಇದು ಹೇರಿಕೆಯಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಅರ್ಜಿದಾರರ ಪ್ರಕಾರ ಇದು ಸಂವಿಧಾನದತ್ತವಾದ ಕಲಂ 14 ಹಾಗೂ 21ರ ಸ್ಪಷ್ಟ ಉಲ್ಲಂಘನೆಯಾಗಿದೆ.
“ಸಂವಿಧಾನದತ್ತವಾದ ಕಲಂ 14 ಹಾಗೂ 21ನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಸಂವಿಧಾನವನ್ನೇ ಉಲ್ಲಂಘನೆ ಮಾಡಲಾಗುತ್ತಿದೆ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಅರ್ಜಿದಾರರು ಹೇಳುವಂತೆ ಭಾರತದಲ್ಲಿ ಹಲಾಲ್ ಪ್ರಕ್ರಿಯೆ 1974ರಿಂದ ಆರಂಭವಾಯಿತು. ಇಂದು ಇದು ಹಲಾಲ್ ಸ್ನೇಹಿ ಪ್ರವಾಸೋದ್ಯಮ, ವೈದ್ಯಕೀಯ ಪ್ರವಾಸೋದ್ಯಮ, ಗೋದಾಮು ಪ್ರಮಾಣಪತ್ರ, ರೆಸ್ಟೋರೆಂಟ್ ಪ್ರಮಾಣೀಕರಣ ಸೇರಿ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ. ಇನ್ನೂ ಮುಂದುವರಿದು ಸಾರಿಗೆ, ಮಾಧ್ಯಮ, ಬ್ರ್ಯಾಂಡಿಂಗ್ ಹಾಗೂ ಮಾರ್ಕೆಟಿಂಗ್‌ಗೂ ಕಾಲಿಟ್ಟಿದೆ”.
ವಕೀಲ ರವಿಕುಮಾರ್ ತೋಮರ್ ಎಂಬವರ ಮೂಲಕ ಸಲ್ಲಿಕೆಯಾಗಿರುವ ಈ ಅರ್ಜಿಯು, ಪ್ರತಿವಾದಿಗಳಾದ ಜಮೀಯತ್ ಉಲೇಮಾ ಎ ಮಹಾರಾಷ್ಟ್ರ, ಹಲಾಲ್ ಸರ್ಟಿಫಿಕೇಷನ್ ಸರ್ವೀಸಸ್ ಆಫ್ ಇಂಡಿಯಾ ಪ್ರೈವೇಟ್ ಇಂಡಿಯಾ, ಜಮೀಯತ್ ಉಲೇಮಾ ಐ ಹಿಂದ್ ಹಲಾಲ್ ಟ್ರಸ್ಟ್ ಹಾಗೂ ಹಲಾಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗಳಿಂದ ಈಗಾಗಲೆ ವಿತರಣೆ ಮಾಡಲಾಗಿರುವ ಹಲಾಲ್ ಪ್ರಮಾಣಪತ್ರಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಬೇಕು ಎಂದು ಕೋರಿದೆ.
ಇದರ ಜತೆಗೆ, ಕೆಫ್‌ಸಿ, ನೆಸ್ಟ್ಲೆ, ಬ್ರಿಟಾನಿಯಾ ಮುಂತಾದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಂಪನಿಗಳು ತಮ್ಮ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬೇಕು ಎಂದು ಕೋರಿದ್ದಾರೆ. ಮುಸ್ಲಿಮೇತರರೆಲ್ಲರೂ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಖರೀದಿಯನ್ನು ಸ್ಥಗಿತಗೊಳಿಸಬೇಕು ಎಂದು ಕೋರಿಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ: Explainer: ಕಾಂಗ್ರೆಸ್ ಉಳಿಸೋಕೆ ಪ್ರಶಾಂತ್ ಕಿಶೋರ್ ಪ್ಲಾನ್ ಏನು?
ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಉತ್ಪನ್ನಗಳ ಆಯ್ಕೆಯನ್ನು ನಿರ್ಧಾರ ಮಾಡುವಂತಾಗಬೇಕು. ಮುಸ್ಲಿಮೇತರರು ತಮಗೆ ಮೋಸವಾಗಿದೆ ಹಾಗೂ ಒತ್ತಾಯ ಮಾಡಲಾಗುತ್ತಿದೆ ಎಂದು ಭಾವಿಸಿದರೆ ಅವರಿಗೆ ಹಲಾಲ್ ಅಲ್ಲದ ಉತ್ಪನ್ನಗಳ ಖರೀದಿಗೆ ಆಯ್ಕೆ ನೀಡಬೇಕು. ಆದರೆ ಸರಬರಾಜು ವ್ಯವಸ್ಥೆಯ ವೆಚ್ಚವನ್ನು ನಿಭಾಯಿಸಲು ಬಹುತೇಕ ಕಂಪನಿಗಳು ಕೇವಲ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳನ್ನಷ್ಟೆ ನೀಡುತ್ತಿವೆ. ಹಲಾಲ್ ಆಹಾರ ಬೇಡ ಎನ್ನುವವರು ಹಾಗೂ ಝಟ್ಕಾ ಆಹಾರ ಮಾತ್ರ ಸೇವಿಸಬೇಕಿರುವ ಸಂಪ್ರದಾಯದವರಿಗೆ ಯಾವುದೇ ಆಯ್ಕೆಗಳು ಲಭಿಸುತ್ತಿಲ್ಲ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಂತಹ (FSSAI) ಸರ್ಕಾರಿ ಏಜೆನ್ಸಿಗಳು ಇದ್ದರೂ 100 ಕೋಟಿಗೂ ಹೆಚ್ಚು ಭಾರತೀಯರ ಮೇಲೆ ಹಲಾಲ್ ಪ್ರಮಾಣಪತ್ರವನ್ನು ಹೇರಿಕೆ ಮಾಡಲಾಗುತ್ತಿದೆ. ಎಲ್ಲರ ನಂಬಿಕೆಗಳ ಮೇಲೆ ಹೇರಿಕೆ ಮಾಡುವುದನ್ನು ಜಾತ್ಯಾತೀತತೆ ಎನ್ನಲು ಆಗುವುದಿಲ್ಲ ಎಂದಿದ್ದಾರೆ.