ನವದೆಹಲಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗ ಮದುವೆಗೆ (Same-Sex Marriage) ಕಾನೂನಿನ ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. 1954ರ ವಿಶೇಷ ವಿವಾಹ ಕಾಯ್ದೆಯು, ಯಾರಿಗೆ ತಮ್ಮ ವೈಯಕ್ತಿಕ ಕಾನೂನಿನಡಿ ಮದುವೆಯಾಗಲು ಸಾಧ್ಯವಾಗುವುದಿಲ್ಲವೋ ಅವರ ವಿವಾಹಕ್ಕೆ ಕಾನೂನಿನ ಮಾನ್ಯತೆಯನ್ನು ಒದಗಿಸುತ್ತದೆ. ಈ ಕಾಯ್ದೆಯಡಿ ತಮಗೂ ವಿವಾಹಕ್ಕೆ ಅವಕಾಶ ಕಲ್ಪಿಸಬೇಕೆಂದು ಎಲ್‌ಜಿಬಿಟಿಕ್ಯೂಪ್ಲಸ್ (LGBTQ+) ಸಮುದಾಯವು ಮೊದಲಿನಿಂದಲೂ ಒತ್ತಾಯಿಸುತ್ತಾ ಬಂದಿದೆ.
ಸಲಿಂಗಿಗಳಾದ ಸುಪ್ರಿಯೋ ಚಕ್ರವರ್ತಿ ಮತ್ತು ಅಭಯ್ ಡಾಂಗ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಹಾಗೂ ಜಸ್ಟೀಸ್ ಹಿಮಾ ಕೊಹ್ಲಿ ಅವರಿದ್ದ ಪೀಠವು ವಿಚಾರಣೆ ನಡೆಸುತ್ತಿದೆ. ಸಲಿಂಗ ಮದುವೆಗೆ ಕಾನೂನಿನ ಮಾನ್ಯತೆ ನೀಡದಿರುವುದು ತಾರತಮ್ಯಕ್ಕೆ ಸಮವಾಗಿದೆ. ಇದು ಎಲ್‌ಜಿಬಿಟಿಕ್ಯೂಪ್ಲಸ್ ಸಮುದಾಯದ ಘನತೆಗೆ ಮಾಡಿದ ಅಪಮಾನವಾಗುತ್ತದೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಪಾರ್ಥ ಫಿರೋಜ್ ಮೆಹ್ರೋತ್ರಾ ಹಾಗೂ ಉದಯ್ ರಾಜ್ ಆನಂದ್ ಎಂಬುವವರು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್, ಭಾರತ ಸರ್ಕಾರ ಹಾಗೂ ಅಟಾರ್ನಿ ಜನರಲ್ ಅವರಿಗೆ ಪ್ರತ್ಯೇಕ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಒಂದು ತಿಂಗಳು ಮುಂದೂಡಿದೆ. ಮತ್ತೊಂದೆಡೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಹಾಗೂ ದಿಲ್ಲಿ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಅರ್ಜಿಗಳನ್ನು ತನ್ನಲ್ಲಿಗೆ ವರ್ಗಾವಣೆಗೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಕೂಡ ಈ ವಿಷಯವನ್ನು ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಲಿ ಎಂದು ಹೇಳಿದೆ.
ಹಿರಿಯ ನ್ಯಾಯವಾದಿಗಳಾದ ಮುಕುಲ್ ರೋಹ್ಟಗಿ, ನೀರಜ್ ಕಿಶನ್ ಕೌಲ್, ಮೇನಕಾ ಗುರುಸ್ವಾಮಿ ಮತ್ತು ನ್ಯಾಯವಾದಿ ಅರುಂಧತಿ ಕಾಟ್ಜು ಅವರು ಅರ್ಜಿದಾರರವಾಗಿ ವಾದ ಮಂಡಿಸಿ, ಇದು, 2018ರ ಸಲಿಂಗಕಾಮವನ್ನು ಅಪರಾಧಿಕರಣದಿಂದ ಮುಕ್ತಗೊಳಿಸಿದ ಸಂವಿಧಾನ ಪೀಠದ ತೀರ್ಪಿನ ಮುಂದುವರಿದ ಭಾಗವಾಗಿದೆ ಎಂದು ಹೇಳಿದರು. ನವತೇಜ್ ಜೋಹ್ರ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಸಾಂವಿಧಾನಿಕ ಪೀಠವು ಸಲಿಂಗಕಾಮವು ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.
ಏನಿದು ವಿಶೇಷ ವಿವಾಹ ಕಾಯ್ದೆ?
ಅಂತರ್ಜಾತಿ ಮತ್ತು ಅಂತರ್ಧರ್ಮಿಯ ವಿವಾಹಗಳಿಗೆ ಅವಕಾಶ ಕಲ್ಪಿಸಲು 1954ರ ವಿಶೇಷ ಕಾಯ್ದೆಯು ಸಲಿಂಗ ವಿವಾಹಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಅರ್ಜಿದಾರರು ತಮ್ಮ ವಾದ ಮಂಡಿಸಿದ್ದಾರೆ. ಕಾಯಿದೆಯಲ್ಲಿ ಇಬ್ಬರು ವ್ಯಕ್ತಿಗಳ ಮಧ್ಯೆ ಮದುವೆ ಎಂದು ಹೇಳಲಾಗಿದೆ. ಆದರೆ, ಈ ಇಂತಿಂಥ ವ್ಯಕ್ತಿಗಳೆಂದೂ ಎಲ್ಲೂ ಹೇಳಿಲ್ಲ. ಹಾಗಾಗಿ, ಈ ಕಾಯ್ದೆಯಡಿ ಸಲಿಂಗ ವಿವಾಹಕ್ಕೆ ಕಲ್ಪಿಸಿಕೊಡಬೇಕೆಂದು ಅರ್ಜಿದಾರರ ಪರ ವಕೀಲರು ವಾದಿಸಿದರು.
ಇದನ್ನೂ ಓದಿ | ಸಲಿಂಗಿ ಪುರುಷರ ಅದ್ಧೂರಿ ಮದುವೆ; ಸಂಭ್ರಮದ ಕ್ಷಣದ ಫೋಟೊ, ವಿಡಿಯೊ ವೈರಲ್