Site icon Vistara News

PM Modi UAE Visit: ದುಬೈ ತಲುಪಿದ ಮೋದಿಗೆ ‘ಭಾರತ್‌ ಮಾತಾ ಕೀ ಜೈ’ ಎಂದು ಸ್ವಾಗತ

Narendra Modi In UAE

PM Modi arrives in UAE to attend COP28 Summit, gets rousing welcome from Indian diaspora in Dubai

ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ ಅವರು ದುಬೈನಲ್ಲಿ ನಡೆಯಲಿರುವ 28ನೇ ಕಾನ್ಫರೆನ್ಸ್‌ ಆಫ್‌ ದಿ ಪಾರ್ಟೀಸ್‌ (COP28) ಶೃಂಗಸಭೆಯಲ್ಲಿ (PM Modi UAE Visit) ಭಾಗವಹಿಸಲು ಯುಎಇಗೆ ತೆರಳಿದ್ದು, ದುಬೈನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಮೋದಿ ಅವರು ದುಬೈ ತಲುಪುತ್ತಲೇ ಯುಎಇನಿಂದ ಸಾಂಪ್ರದಾಯಿಕವಾಗಿ ಸ್ವಾಗತ ದೊರೆಯಿತು. ಇದಾದ ಬಳಿಕ ಅನಿವಾಸಿ ಭಾರತೀಯರು ನರೇಂದ್ರ ಮೋದಿ ಅವರನ್ನು ಸಾಂಸ್ಕೃತಿಕವಾಗಿ ಸ್ವಾಗತಿಸಿದರು.

ನರೇಂದ್ರ ಮೋದಿ ಅವರಿಗಾಗಿ ಕಾಯುತ್ತಿದ್ದ ಅನಿವಾಸಿ ಭಾರತೀಯರು, ಅವರು ಆಗಮಿಸುತ್ತಲೇ ‘ಸಾರೇ ಜಹಾಂಸೆ ಅಚ್ಚಾ’ ಹಾಡಿದರು. ಅಲ್ಲದೆ, ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಡ ಕೂಗಿ ಮೋದಿ ಅವರನ್ನು ಸ್ವಾಗತಿಸಿದರು. ಮಹಿಳೆಯರು, ಮಕ್ಕಳು, ಯುವಕರ ಜತೆ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದರು. ಅಲ್ಲದೆ, ಸಾಂಪ್ರದಾಯಿಕ ನೃತ್ಯಕ್ಕೂ ಪ್ರಧಾನಿ ಮನಸೋತರು. ಹರ ಹರ ಮೋದಿ, ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌ ಎಂಬ ಘೋಷಣೆಗಳು ಕೂಡ ಮೊಳಗಿದವು.

ಮೋದಿ ಕಂಡು ಪುಳಕಿತರಾದ ಭಾರತೀಯರು

ನರೇಂದ್ರ ಮೋದಿ ಅವರನ್ನು ಕಂಡು ಅನಿವಾಸಿ ಭಾರತೀಯರು ಪುಳಕಿತರಾದರು. “ನಾನು ದುಬೈನಲ್ಲಿ 20 ವರ್ಷಗಳಿಂದ ನೆಲೆಸಿದ್ದೇನೆ. ನನ್ನ ಸಂಬಂಧಿಕರೇ ಇಲ್ಲಿಗೆ ಬರುತ್ತಿದ್ದಾರೆ ಎಂದು ಭಾಸವಾಗಿದೆ. ನಮಗೆ ಅಷ್ಟು ಸಂತೋಷವಾಗಿದೆ” ಎಂದು ಮಹಿಳೆಯೊಬ್ಬರು ತಿಳಿಸಿದ್ದಾರೆ. ಇನ್ನೂ ಕೆಲವರು ತ್ರಿವರ್ಣ ಧ್ವಜಗಳನ್ನು ಬೀಸುವ ಮೂಲಕ ಮೋದಿ ಅವರನ್ನು ಸ್ವಾಗತಿಸಿದರು.

ಇದನ್ನೂ ಓದಿ: PM Modi US Visit: ಮೋದಿ ಅಮೆರಿಕ ಭೇಟಿಯಿಂದ ರಕ್ಷಣಾ ಕ್ಷೇತ್ರಕ್ಕೆ ಬಲ; ಸ್ಟ್ರೈಕರ್‌, M777 ಗನ್‌ ನೀಡಲು ಬೈಡೆನ್‌ ಆಫರ್

ಕಾನ್ಫರೆನ್ಸ್‌ ಆಫ್‌ ದಿ ಪಾರ್ಟೀಸ್‌ (COP28) ಶೃಂಗಸಭೆಯಲ್ಲಿ ಪ್ರಮುಖವಾಗಿ ಹವಾಮಾನ ಬದಲಾವಣೆ ಕುರಿತು ಚರ್ಚಿಸಲಾಗುತ್ತದೆ. ಅದರಲ್ಲೂ, ಹವಾಮಾನ ಬದಲಾವಣೆಯ ಕ್ರಿಯಾಯೋಜನೆ ರೂಪಿಸಲು ಇದು ಪ್ರಮುಖವಾಗಿದೆ ಎಂದು ತಿಳಿದುಬಂದಿದೆ. ಅಭುದಾಬಿಯ ಶೇಖ್‌ ಮೊಹಮ್ಮದ್‌ ಬಿನ್‌ ಅಲ್‌ ನಹ್ಯಾನ್‌ ಅವರ ಆಹ್ವಾನದ ಮೇರೆಗೆ ಮೋದಿ ಅವರು ಅಬುಧಾಬಿಗೆ ತೆರಳಿದ್ದಾರೆ. ಸುಮಾರು 200 ದೇಶಗಳ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಪ್ರಧಾನಿಯು ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version