ನವದೆಹಲಿ: ಪಟ್ಟಭದ್ರ ಹಿತಾಸಕ್ತಿ ಗುಂಪು ನ್ಯಾಯಾಂಗದ ಮೇಲೆ ಒತ್ತಡ ಹೇರಲು ಮತ್ತು ನ್ಯಾಯಾಲಯಗಳನ್ನು ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ನೂರಾರು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ (DY Chandrachud) ಅವರಿಗೆ ಪತ್ರ ಬರೆದ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಗುರುವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡ ಮೋದಿ ಅವರು, ʼʼಇತರರನ್ನು ಬೆದರಿಸುವುದು ಕಾಂಗ್ರೆಸ್‌ನ ಸಂಸ್ಕೃತಿ. ಐದು ದಶಕಗಳ ಹಿಂದೆ ಕಾಂಗ್ರೆಸ್ ನಾಯಕರು ‘ಬದ್ಧ ನ್ಯಾಯಾಂಗ’ಕ್ಕೆ ಕರೆ ನೀಡಿದ್ದರು. ಅವರು ನಾಚಿಕೆಯಿಲ್ಲದೆ ತಮ್ಮ ಸ್ವಾರ್ಥ ಹಿತಾಸಕ್ತಿಗಳಿಗಾಗಿ ಇತರರಿಂದ ಬದ್ಧತೆಯನ್ನು ಬಯಸುತ್ತಾರೆ. ಆದರೆ ಅವರು ರಾಷ್ಟ್ರದ ಬಗ್ಗೆ ಯಾವುದೇ ಬದ್ಧತೆಯಿಂದ ತೋರುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ʼʼ140 ಕೋಟಿ ಭಾರತೀಯರು ಅವರನ್ನು ತಿರಸ್ಕರಿಸುವುದರಲ್ಲಿ ಆಶ್ಚರ್ಯವೇನಿಲ್ಲʼʼ ಎಂದು ಹೇಳಿದ್ದಾರೆ.
To browbeat and bully others is vintage Congress culture.
— Narendra Modi (@narendramodi) March 28, 2024
5 decades ago itself they had called for a "committed judiciary" – they shamelessly want commitment from others for their selfish interests but desist from any commitment towards the nation.
No wonder 140 crore Indians… https://t.co/dgLjuYONHH
ವಕೀಲರು ಬರೆದ ಪತ್ರದಲ್ಲೇನಿದೆ?
ದೇಶದ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಪತ್ರ ಬರೆದಿದ್ದು, “ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ತರುತ್ತಿರುವ ಬೆಳವಣಿಗೆಗಳ” ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪಟ್ಟಭದ್ರ ಹಿತಾಸಕ್ತ ಗುಂಪು ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ” ಎಂದು ದೂರಿದ್ದಾರೆ.
ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಮಂದಿ ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ನಾಜೂಕಾಗಿ ನಿರ್ವಹಿಸಲು, ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದು; ಆಧಾರರಹಿತ ಆರೋಪಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಮುಂದಿಟ್ಟು ನ್ಯಾಯಾಂಗದ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು” ವಕೀಲರು ಖಂಡಿಸಿದ್ದಾರೆ.
“ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅಲ್ಲಿ ನ್ಯಾಯಾಲಯದ ನಿರ್ಧಾರಗಳನ್ನು ತಮಗೆ ಬೇಕಾದ ಹಾಗೆ ತಿರುಚುವ, ನ್ಯಾಯಾಂಗಕ್ಕೆ ಕಳಂಕ ಉಂಟುಮಾಡುವ ಪ್ರಯತ್ನಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ” ಎಂದು ಪತ್ರದಲ್ಲಿ ದೂರಲಾಗಿದೆ.
“ಒಂದು ಆತಂಕಕಾರಿ ತಂತ್ರವೆಂದರೆ, ನ್ಯಾಯಾಲಯಗಳ ಈಗಿನ ಕಾರ್ಯವೈಖರಿಯನ್ನು ಉದ್ದೇಶಪೂರ್ವಕ ʼಕಲ್ಪಿತ ಸುವರ್ಣಯುಗ’ಕ್ಕೆ ಹೋಲಿಸುವುದು, ಸುಳ್ಳು ನಿರೂಪಣೆಯೊಂದಿಗೆ ನ್ಯಾಯಾಂಗದ ಕಾರ್ಯನಿರ್ವಹಣೆಯ ಕುರಿತು ಅಪಕಲ್ಪನೆ ಮೂಡಿಸುವುದು. ಇಂತಹ ಸುಳ್ಳು ನಿರೂಪಣೆಗಳು ನ್ಯಾಯಾಂಗದ ಫಲಿತಾಂಶಗಳ ಮೇಲೆ ದುಷ್ಪ್ರಭಾವ ಬೀರುವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿವೆ” ಎಂದು ವಕೀಲರು ಆಪಾದಿಸಿದ್ದಾರೆ.
ಇದನ್ನೂ ಓದಿ: CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ
ಈ ಪತ್ರವು “ಬೆಂಚ್ ಫಿಕ್ಸಿಂಗ್” ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ನ್ಯಾಯಾಂಗ ಪೀಠಗಳ ಸಂಯೋಜನೆಯ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಧೀಶರ ಸಮಗ್ರತೆಯ ಮೇಲೆ ಹಾನಿಯೆಸಗಲು ಪ್ರಯತ್ನಗಳನ್ನು ಮಾಡಲಾಗಿದೆ. ಈ ಕ್ರಮಗಳು ನ್ಯಾಯಾಂಗಕ್ಕೆ ಅಗೌರವ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯದ ತತ್ವಗಳಿಗೆ ಹಾನಿಯುಂಟುಮಾಡುತ್ತವೆ” ಎಂದಿದೆ. “ಅವರು ನಮ್ಮ ನ್ಯಾಯಾಲಯಗಳನ್ನು ಕಾನೂನಿನ ಆಡಳಿತವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ