Site icon Vistara News

PM Modi Birthday | ಗುಜರಾತ್‌ನಿಂದ ದಿಲ್ಲಿಯ ತನಕ, ಪ್ರಧಾನ ಸೇವಕರ ಜೈತ್ರಯಾತ್ರೆ, ಅಮೋಘ ಚರಿತ್ರೆ

PM Narendra Modi

PM Narendra Modi says Deepfake a big concern, asked ChatGPT to give deepfake warning in content

ಭಾರತದ ರಾಜಕೀಯ ಮತ್ತು ಸರ್ಕಾರಗಳ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರವರ್ಧಮಾನ ಮಹತ್ವಪೂರ್ಣ. ಇದನ್ನು ಮೋದಿ ಪೂರ್ವ ಯುಗ ಮತ್ತು ನಂತರದ ಯುಗ ಎಂದು (PM Modi Birthday) ವರ್ಗೀಕರಿಸಬಹುದು.

ನರೇಂದ್ರ ಮೋದಿಯವರು 2001ರಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾದರು. ಬಳಿಕ ಹಿಂತಿರುಗಿ ನೋಡಿದ್ದೇ ಇಲ್ಲ. ರಾಜ್ಯದಲ್ಲಿ ಸುದೀರ್ಘಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು. ಭೂಕಂಪ, ರಾಜಕೀಯ ವಿಪ್ಲವಗಳು, ಕೋಮುಗಲಭೆಗಳಿಂದ ತತ್ತರಿಸಿದ್ದ ಗುಜರಾತ್‌ನಲ್ಲಿ ಅಭಿವೃದ್ಧಿಯ ಹೊಸ ಶಕೆಯನ್ನು ಆರಂಭಿಸಿದರು. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳು ದೇಶದ ಗಮನ ಸೆಳೆಯಿತು. ಅಲ್ಲಿ ಗಳಿಸಿದ ಅದ್ವಿತೀಯ ಯಶಸ್ಸು ಅವರಿಗೆ ರಾಷ್ಟ್ರ ರಾಜಕಾರಣದಲ್ಲಿ ಬೆಳಗಲು ಹಾದಿಯನ್ನು ಸುಗಮಗೊಳಿಸಿತು. 2014ರಲ್ಲಿ ಪ್ರಧಾನಿಯಾದರು. 2019ರಲ್ಲಿ ಹಿಂದಿಗಿಂತಲೂ ಹೆಚ್ಚಿನ ಬಹುಮತವನ್ನು ಗಳಿಸಿ ಮತ್ತೊಮ್ಮೆ ಪ್ರಧಾನಿಯಾದರು. ಎರಡನೇ ಅವಧಿಯಲ್ಲೂ ಅಷ್ಟೇ, ಮೋದಿಯವರ ಜನಪ್ರಿಯತೆಯನ್ನು ಗಮನಿಸಿದರೆ, 2024ರಲ್ಲಿ ಹ್ಯಾಟ್ರಿಕ್‌ ಸಾಧಿಸಿದರೆ ಆಶ್ಚರ್ಯವಿಲ್ಲ. ಒಂದು ವೇಳೆ ಮೂರನೇ ಸಲ ಆಯ್ಕೆಯಾದರೆ, ನೆಹರೂ ನಂತರ ಸುದೀರ್ಘ ಕಾಲ ದೇಶದ ಪ್ರಧಾನಿಯಾದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ನೆಹರೂ 16 ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಪ್ರಧಾನಿ ನರೇಂದ್ರ ಮೋದಿ, ಜನರಿಂದಲೇ ಸತತವಾಗಿ ಚುನಾಯಿತರಾದ ಜನ ನಾಯಕ. ವಿಧಾನ ಪರಿಷತ್ತು ಅಥವಾ ರಾಜ್ಯಸಭೆಯ ಹಿಂಬಾಗಿಲಿನ ಮೂಲಕ ಅಧಿಕಾರ ರಾಜಕಾರಣದ ಪಡಸಾಲೆಗೆ ಬಂದವರಲ್ಲ. ಕಳೆದ 21 ವರ್ಷಗಳಿಂದ ಅವರು ಸರ್ಕಾರಗಳ ಮುಖ್ಯಸ್ಥರಾಗಿ, ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೆ ಜನಸೇವೆಯೇ ಜನಾರ್ಧನನ ಸೇವೆ ಎಂದು ಶ್ರಮಿಸುತ್ತಿದ್ದಾರೆ. ಈ ಜೈತ್ರಯಾತ್ರೆ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ, ಆಡಳಿತಾತ್ಮಕ ವಲಯಗಳಲ್ಲಿ ಹೊಸ ಮನ್ವಂತರವನ್ನು ಸೃಷ್ಟಿಸಿದೆ.

ಪ್ರಧಾನಿ ನರೇಂದ್ರ ಮೋದಿ ಈಗ ಜಗತ್ತಿನ ಪ್ರಮುಖ ನಾಯಕರಲ್ಲೊಬ್ಬರಾಗಿ, ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಇಡೀ ವಿಶ್ವ ಅವರನ್ನು ಬೆರಗಿನಿಂದ ನೋಡುತ್ತಿದೆ. ಕೋವಿಡ್-‌19 ಬಿಕ್ಕಟ್ಟಿನ ಸಂದರ್ಭವಂತೂ 138 ಕೋಟಿ ಜನಸಂಖ್ಯೆಯ ಭಾರತ ತನ್ನ ಸೀಮಿತ ಸಂಪನ್ಮೂಲವನ್ನು ಬಳಸಿಕೊಂಡು ಹೇಗೆ ಬಚಾವಾಗಲಿದೆ ಎಂದು ಜಗತ್ತು ಆತಂಕದಿಂದ ನೋಡುತ್ತಿತ್ತು. ಆದರೆ ಅಭೂತಪೂರ್ವ ಜನ ಬೆಂಬಲದೊಂದಿಗೆ ನರೇಂದ್ರ ಮೋದಿಯವರು ಶತಮಾನಕ್ಕೊಮ್ಮೆ ಸಂಭವಿಸುವ ಮಹಾ ಬಿಕ್ಕಟ್ಟನ್ನು ಜಗತ್ತೇ ಅಚ್ಚರಿಪಡುವಂತೆ ನಿಭಾಯಿಸಿದರು. ಭಾರತದಲ್ಲಿ ನಡೆದ ವಿಶ್ವದ ಅತಿ ದೊಡ್ಡ ಲಸಿಕೆ ವಿತರಣೆ ಕಾರ್ಯಕ್ರಮ, ಕೋವಿಡ್-‌19 ಬಿಕ್ಕಟ್ಟಿನ ಬಳಿಕದ ಪರಿಹಾರ ಕಾರ್ಯಾಚರಣೆಗಳು ಐತಿಹಾಸಿಕ.

ಗುಜರಾತ್‌ ಅಭಿವೃದ್ಧಿಯ ಮಾದರಿಯ ರೂವಾರಿ

ಗುಜರಾತ್‌ನಲ್ಲಿ ಸಾಮಾನ್ಯ ಕುಟುಂಬವೊಂದರಲ್ಲಿ ಜನಿಸಿದ ನರೇಂದ್ರ ಮೋದಿಯವರ ಬಾಲ್ಯ, ಹೋರಾಟದ ಬದುಕು, ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರಾಟ, ಆರೆಸ್ಸೆಸ್‌ ಪ್ರಚಾರಕರಾಗಿ ಸೇವೆ, ಬಳಿಕ ಬಿಜೆಪಿಯ ಕಾರ್ಯಕರ್ತನಾಗಿ, ನಂತರ ಪಕ್ಷದಲ್ಲಿ ಒಂದೊಂದೇ ಮೆಟ್ಟಿಲನ್ನೇರಿದ ಯಶೋಗಾಥೆ ಜನಜನಿತ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದ ಕುಟುಂಬವೊಂದರಲ್ಲಿ, ವಂಶ ಪಾರಂಪರ್ಯ ರಾಜಕಾರಣವಾಗಲಿ, ಧನ ಬಲವಾಗಲಿ ಅವರಿಗೆ ಇರಲಿಲ್ಲ. 2001ಕ್ಕೆ ಮೊದಲು ಶಾಸಕರಾಗಿಯೂ ಅನುಭವ ಇದ್ದಿರಲಿಲ್ಲ. ಆರೆಸ್ಸೆಸ್‌ನಲ್ಲಿ ಪರಿವ್ರಾಜಕರಂತೆ ಸೇವೆ ಸಲ್ಲಿಸುತ್ತಿದ್ದ ಮೋದಿ, ಬಳಿಕ ಬಿಜೆಪಿಗೆ ಬಂದರು.

ಕಳೆದ 21 ವರ್ಷಗಳಲ್ಲಿ ನರೇಂದ್ರ ಮೋದಿಯವರು 5 ಸಲ ಚುನಾವಣೆಗಳನ್ನು ಎದುರಿಸಿದ್ದಾರೆ. ಗುಜರಾತ್‌ನಲ್ಲಿ 2002, ೨೦೦೭ ಮತ್ತು 2012ರಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚುನಾವಣೆಗಳನ್ನು ಗೆದ್ದರು. ಬಳಿಕ 2014 ಮತ್ತು 2019ರ ಲೋಕಸಭೆ ಚುನಾವಣೆಯನ್ನು ಗೆದ್ದುಕೊಂಡರು. ಪ್ರಧಾನಿಯಾಗಿ ಮೋದಿ ಆಯ್ಕೆಯಾಗುವುದಕ್ಕೆ ಮುನ್ನ ಮೂರು ದಶಕಗಳ ಕಾಲ ಒಂದೇ ಪಕ್ಷ ಬಹುಮತ ಗಳಿಸಿ ಸರ್ಕಾರ ನಡೆಸಿದ್ದಿರಲಿಲ್ಲ. ಸುದೀರ್ಘ ಮೈತ್ರಿಕೂಟ ಸರ್ಕಾರಗಳ ಹಗ್ಗ ಜಗ್ಗಾಟಗಳ ಜಂಜಾಟವನ್ನು ರಾಷ್ಟ್ರ ಕಂಡಿತ್ತು. ಜನತೆಗೆ ರಾಜಕಾರಣ ಎಂದರೆ ರೋಸಿ ಹೋಗುವಷ್ಟು ನಿರಾಸೆಯಾಗಿತ್ತು. 90ರ ದಶಕದಲ್ಲಂತೂ ಪ್ರತಿ ವರ್ಷ ಲೋಕಸಭೆ ಚುನಾವಣೆ ನಡೆಯುತ್ತಿದೆಯೇನೊ ಎಂಬಷ್ಟರ ಮಟ್ಟಿಗೆ ಅಸ್ಥಿರತೆ ಇತ್ತು.

ಮೋದಿಯವರು ಎಂದೂ ತಮ್ಮನ್ನು ಹಿಂದುಳಿದ ಜಾತಿ, ವರ್ಗದಿಂದ ಬಂದವನೆಂದು ಹೇಳಿಕೊಂಡವರಲ್ಲ. ಅಂಥ ಯಾವುದೇ ಅನುಕಂಪವನ್ನು ಗಿಟ್ಟಿಸಿಕೊಂಡು ರಾಜಕೀಯ ಮಾಡುವ ಜಾಯಮಾನ ಅವರದ್ದಾಗಿರಲಿಲ್ಲ. ಬದಲಿಗೆ ಉತ್ತಮ ಆಡಳಿತ ನೀಡುವ ಮೂಲಕ, ಅನೇಕ ಅಭಿವೃದ್ಧಿಯ ಯೋಜನೆಗಳ ಮೂಲಕ ಸಮಾಜದ ಎಲ್ಲ ವರ್ಗ, ಮತ ಪಂಥ ಮತ್ತು ಭೌಗೋಳಿಕ ಗಡಿಗಳನ್ನು ಮೀರಿ ಜನಪ್ರಿಯರಾದರು.

ಕೇಶುಭಾಯಿ ಪಟೇಲರ ಉತ್ತರಾಧಿಕಾರಿಯಾಗಿ ಆಯ್ಕೆ

ಗುಜರಾತ್‌ ರಾಜಕಾರಣವನ್ನು ಅವಲೋಕಿಸಿದರೆ, 1995ರಲ್ಲಿ ಬಿಜೆಪಿಯ ಜನಪ್ರಿಯ ಮತ್ತು ಹಿರಿಯ ನಾಯಕ ಕೇಶುಭಾಯ್‌ ಪಟೇಲ್‌ ಮುಖ್ಯಮಂತ್ರಿಯಾಗಿದ್ದರು. 1998-2001ರ ತನಕ ಮತ್ತೊಮ್ಮೆ ಅವರೇ ಸಿಎಂ ಆಗಿದ್ದರು. ಅವರ ಉತ್ತರಾಧಿಕಾರಿಯಾಗಿ ರಾಜ್ಯದ ಮುಖ್ಯಮಂತ್ರಿಯಾದವರೇ ನರೇಂದ್ರ ಮೋದಿ. ಕೇಶುಭಾಯಿ ಪಟೇಲ್‌ ಅವರಿಗೆ ರಾಜಕೀಯ ಅಸ್ಥಿರತೆ, ಶಂಕರ್‌ ಸಿಂಘ್‌ ವಘೇಲರ ಬಂಡಾಯದ ಪರಿಣಾಮ ಒಂದು ಕಡೆ ಸವಾಲುಗಳು ಎದುರಾಗಿತ್ತು. ಮತ್ತೊಂದು ಕಡೆ 2001ರಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪ ರಾಜಕೀಯದ ಚಿತ್ರಣವನ್ನೇ ಬದಲಿಸಿತು. ದುರ್ಬಲ ಆಡಳಿತ ಕೇಶುಭಾಯಿ ಪಟೇಲರ ರಾಜಕೀಯ ಜೀವನವನ್ನೂ ಕ್ಷೀಣಿಸಿತು. ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರು ಗುಜರಾತ್‌ನಲ್ಲಿ ಪಕ್ಷದ ವರ್ಚಸ್ಸು ವೃದ್ಧಿಸಲು ಹೊಸ ನಾಯಕತ್ವದ ಹುಡುಕಾಟ ನಡೆಸಿದರು. ಈ ಅನ್ವೇಷಣೆಯಲ್ಲಿ ಸಿಕ್ಕಿದ ಉತ್ತರ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನರೇಂದ್ರ ಮೋದಿ! ಪ್ರಧಾನಿ ವಾಜಪೇಯಿ ಅವರ ಬುಲಾವ್‌ ಮೇರೆಗೆ ಅವರ ನಿವಾಸಕ್ಕೆ ತೆರಳಿದ ಮೋದಿಯವರಿಗೆ ಅಚ್ಚರಿ ಕಾದಿತ್ತು. ದಿಲ್ಲಿಯಿಂದ ಗುಜರಾತ್‌ಗೆ ತೆರಳಿ ಮುಖ್ಯಮಂತ್ರಿಯಾಗುವಂತೆ ವಾಜಪೇಯಿ ಸೂಚಿಸಿದ್ದರು. ಆದರೆ ಆಗಲೇ ಪಕ್ಷದ ಸಂಘಟನಾ ಕೌಶಲದಲ್ಲಿ ತಮ್ಮ ಛಾಪು ಮೂಡಿಸಿದ್ದ ಮೋದಿಯವರು ಸರ್ಕಾರವನ್ನೂ ನಡೆಸಬಲ್ಲರು ಎಂಬ ನಂಬಿಕೆ ವಾಜಪೇಯಿ ಅವರಲ್ಲಿತ್ತು. ಕೇಶುಭಾಯಿ ಪಟೇಲ್‌ ಅವರನ್ನು ತಮ್ಮ ರಾಜಕೀಯ ಗುರು ಎಂದು ಮೋದಿ ಹೇಳಿಕೊಂಡಿದ್ದಾರೆ. 2002ರ ಬಳಿಕ ಪಟೇಲ್‌ ಬಿಜೆಪಿಯಿಂದ ನಿರ್ಗಮಿಸಿದರು. ತಮ್ಮದೇ ಪಕ್ಷ ಕಟ್ಟಿದರು. ಕೊನೆಗೆ ಮತ್ತೆ ಬಿಜೆಪಿ ಜತೆ ವಿಲೀನಗೊಳಿಸಿದರು. 2020ರಲ್ಲಿ ಕೇಶುಭಾಯಿ ಪಟೇಲ್‌ ನಿಧನರಾದರು.

ಗುಜರಾತ್‌ ಭೂಕಂಪದ ನಿರ್ವಹಣೆ

ಗುಜರಾತ್‌ನಲ್ಲಿ 2001ರ ಜನವರಿ 26ರ ಗಣರಾಜ್ಯೋತ್ಸವದಂದು ಸಂಭವಿಸಿದ ಭೀಕರ ಭೂಕಂಪದಲ್ಲಿ 13 ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು. ಲಕ್ಷಾಂತರ ಮಂದಿ ಗಾಯಗೊಂಡಿದ್ದರು. ಗುಜರಾತ್‌ನ ಕಛ್‌ ಜಿಲ್ಲೆಯಲ್ಲಿ ಸಂಭವಿಸಿದ ಭೂಕಂಪದ ಬಳಿಕ ಪರಿಹಾರ, ಪುನರ್ವಸತಿ ಕಾರ್ಯಾಚರಣೆಯ ಜವಾಬ್ದಾರಿ ನರೇಂದ್ರ ಮೋದಿಯವರಿಗಿತ್ತು. ನಂತರದ ವರ್ಷಗಳಲ್ಲಿ ಕಛ್‌ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಯಿತು.

ಗೋಧ್ರಾ ಹಿಂಸಾಚಾರ

ಗುಜರಾತ್‌ ಸಿಎಂ ಆಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ಆರಂಭಿಕ ವರ್ಷಗಳು ಕಲ್ಲು ಮುಳ್ಳಿನ ದುರ್ಗಮ ಹಾದಿಯಾಗಿತ್ತು. ಭೀಕರ ಭೂಕಂಪನದಿಂದ ರಾಜ್ಯ ತತ್ತರಿಸಿತ್ತು. ಲಕ್ಷಾಂತರ ನಿರಾಶ್ರಿತರ ಪುನರ್ವಸತಿಯ ಬೃಹತ್‌ ಸವಾಲು ಎದುರಿತ್ತು. ದುರದೃಷ್ಟವಶಾತ್‌ ೨೦೦೨ರ ಫೆಬ್ರವರಿ-ಮಾರ್ಚ್‌ ಅವಧಿಯಲ್ಲಿ ಗೋಧ್ರಾದಲ್ಲಿ ನಡೆದ ಘೋರ ನರಮೇಧ, ನಂತರ ಇಡೀ ರಾಜ್ಯವನ್ನು ಪ್ರಕ್ಷುಬ್ಧವಾಗಿಸಿದ ಕೋಮು ಗಲಭೆ, ನರೇಂದ್ರ ಮೋದಿಯವರಿಗೆ ಅಗ್ನಿ ಪರೀಕ್ಷೆಯಾಗಿತ್ತು. ಇದೇ ಸಂದರ್ಭ ಮೋದಿ ವಿರೋಧಿಗಳ ಗ್ಯಾಂಗ್‌ ಅವರ ವಿರುದ್ಧ ನಿರಂತರ ಷಡ್ಯಂತ್ರಗಳನ್ನು ನಡೆಸಿತು. ಮೋದಿಯವರೇ ಈ ಎಲ್ಲ ಗಲಭೆಗಳ ಸೂತ್ರಧಾರ ಎಂದು ಬಿಂಬಿಸಿತು. ಇಪ್ಪತ್ತು ವರ್ಷಗಳ ಕಾಲ ಈ ಗ್ಯಾಂಗ್‌ ಮೋದಿ ವಿರುದ್ಧ ಮಸಲತ್ತು ನಡೆಸಿದರೂ, ಅಂತಿಮವಾಗಿ ಸುಪ್ರೀಂಕೋರ್ಟ್‌, ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿತು. ಗೋಧ್ರಾ ಗಲಭೆಯಲ್ಲಿ ಮೋದಿಯವರದ್ದು ಯಾವುದೇ ತಪ್ಪಿಲ್ಲ ಎಂದ ಸುಪ್ರೀಂಕೋರ್ಟ್‌, ಮೋದಿ ವಿರುದ್ಧ ನಡೆದ 16 ವರ್ಷಗಳ ಷಡ್ಯಂತ್ರದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಹಾಗೂ ತಪ್ಪಿತಸ್ಥರನ್ನು ಕಟಕಟೆಗೆ ತಂದು ನಿಲ್ಲಿಸಬೇಕು ಎಂದೂ ಆದೇಶಿಸಿತು. ಹೀಗಾಗಿ ಇದು ಐತಿಹಾಸಿಕ ಮಹತ್ವದ ತೀರ್ಪುಗಳಲ್ಲೊಂದು.

ವಿಶೇಷ ತನಿಖಾ ದಳ (ಎಸ್‌ಐಟಿ) 2012ರಲ್ಲೇ ಗಲಭೆಯಲ್ಲಿ ಮೋದಿಯವರ ಪಾತ್ರ ಇಲ್ಲ ಎಂದು ವರದಿ ನೀಡಿದ್ದರೂ, ಮೋದಿ ವಿರೋಧಿಗಳ ಸಂಚು ಮುಂದುವರಿದಿತ್ತು. ಈ ನಡುವೆ ಕಾಂಗ್ರೆಸ್‌, ಬಿಸ್ಪಿ, ಎಸ್ಪಿ ಸೇರಿದಂತೆ ಬಹುತೇಕ ಪ್ರತಿಪಕ್ಷಗಳ ನಾಯಕರು ರಾಜಕೀಯ ಲಾಭಕ್ಕಾಗಿ ಮೋದಿಯವರನ್ನು ಮನಬಂದಂತೆ ನಿಂದಿಸಿದರು. ಅವಾಚ್ಯ ಶಬ್ದಗಳಿಂದ ತೆಗಳಿದರು. ಸೋನಿಯಾ ಗಾಂಧಿಯವರಂತೂ ಮೌತ್‌ ಕಾ ಸೌದಾಗರ್‌ (ಸಾವಿನ ವ್ಯಾಪಾರಿ) ಎಂದು ಜರಿದಿದ್ದರು. ಆದರೆ ಸುಪ್ರೀಂಕೋರ್ಟ್‌ ಮೋದಿಯವರಿಗೆ ಕ್ಲೀನ್‌ ಚಿಟ್‌ ನೀಡಿದ ಬಳಿಕ ಈ ಎಲ್ಲ ಪ್ರತಿಪಕ್ಷಗಳು ಮೌನಕ್ಕೆ ಜಾರಿದವು.

ಮೋದಿಯವರು ಗೋಧ್ರಾ ಹಿಂಸಾಚಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಕಳಂಕಮುಕ್ತರಾದ ಬೆನ್ನಲ್ಲೇ, ಅವರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿ, ಷಡ್ಯಂತ್ರ ನಡೆಸಿದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆತಲ್ವಾಡ್‌, ಮಾಜಿ ಹಿರಿಯ ಐಪಿಎಸ್‌ ಅಧಿಕಾರಿ ಶ್ರೀಕುಮಾರ್‌ ಅವರನ್ನು ಬಂಧಿಸಲಾಯಿತು. ಸಾಕ್ಷ್ಯಗಳನ್ನು ತಿರುಚಿರುವುದು, ಫೋರ್ಜರಿ, ಕ್ರಿಮಿನಲ್‌ ಸಂಚು ನಡೆಸಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ. ಮತ್ತೊಬ್ಬ ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ಈಗಾಗಲೇ ಮತ್ತೊಂದು ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ. ಈ ಮೂವರೂ, ಗೋಧ್ರಾ ಹಿಂಸಾಚಾರಕ್ಕೆ ಸಂಬಂಧಿಸಿ ಮೋದಿ ವಿರುದ್ಧ ಕ್ರಿಮಿನಲ್‌ ಸಂಚು ನಡೆಸಿದ ಆರೋಪಿಗಳಾಗಿದ್ದಾರೆ. ತೀಸ್ತಾ ಸೆತಲ್ವಾಡ್‌ ಜಾಮೀನಿನ ಮೇರೆಗೆ ಜೈಲಿನಿಂದ ಬಿಡುಗಡೆ ಆಗಿದ್ದರೂ, ವಿಚಾರಣೆ ಎದುರಿಸಬೇಕಾಗಿದೆ. ಗಮನಿಸಿ, ಮೋದಿ ವಿರುದ್ಧದ ಈ ಸಂಚು ಎಷ್ಟು ಕ್ರೂರವಾಗಿತ್ತು ಎಂದರೆ, ಇಂಥ ಕೇಸ್‌ಗಳಲ್ಲಿ ತಪ್ಪಿತಸ್ಥರಿಗೆ ಮರಣದಂಡನೆಯನ್ನು ಕೋರ್ಟ್‌ ವಿಧಿಸಬಹುದು.

9 ಗಂಟೆಗಳ ಸುದೀರ್ಘ ಎಸ್‌ಐಟಿ ವಿಚಾರಣೆ ಎದುರಿಸಿದ್ದರು ಮೋದಿ

ಗುಜರಾತ್‌ ಸಿಎಂ ಆಗಿದ್ದಾಗ ನರೇಂದ್ರ ಮೋದಿಯವರು ಸುಪ್ರೀಂಕೋರ್ಟ್‌ ನಿಯೋಜಿತ ವಿಶೇಷ ತನಿಖಾ ದಳದ ಎದುರು (ಎಸ್‌ಐಟಿ) ಎರಡು ಹಂತಗಳಲ್ಲಿ ನಿರಂತರ 9 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು. ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದ 63 ಆರೋಪಿಗಳಲ್ಲಿ ಮೋದಿ ಒಬ್ಬರಾಗಿದ್ದರು. ಅಹಮದಾಬಾದ್‌ನ ಗುಲ್ಬರ್ಗ್‌ ಸೊಸೈಟಿ ನರಮೇಧದಲ್ಲಿ ಹತ್ಯೆಗೀಡಾಗಿದ್ದ ಕಾಂಗ್ರೆಸ್‌ ಸಂಸದ ಇಸಾನ್‌ ಜಾಫ್ರಿ ಅವರ ಪತ್ನಿ ಜಕಿಯಾ ಜಾಫ್ರಿ ಈ ಕೇಸ್‌ ದಾಖಲಿಸಿದ್ದರು. ಇದಕ್ಕೆ ತೀಸ್ತಾ ಸೆತಲ್ವಾಡ್‌ ಮತ್ತು ಅವರ ಪಡೆಯ ಬೆಂಬಲ ಇತ್ತು. ಆದರೆ ತಮ್ಮದಲ್ಲದ ತಪ್ಪಿಗೆ ನಾನಾ ಪಡಿಪಾಟಲನ್ನು ಆಗಿನ ಗುಜರಾತ್ ಸಿಎಂ ಮೋದಿ ಎದುರಿಸಬೇಕಾಯಿತು. ಹೀಗಿದ್ದರೂ, ಮೋದಿಯವರು ಧೃತಿಗೆಟ್ಟಿರಲಿಲ್ಲ. ಈ ನೆಲದ ಕಾನೂನನ್ನು ನಾನು ಗೌರವಿಸುತ್ತೇನೆ ಎಂದು ಶಾಂತಚಿತ್ತರಾಗಿ ಪ್ರತಿಕ್ರಿಯಿಸಿದ್ದರು.

ನರ್ಮದಾ ಅಣೆಕಟ್ಟೆ ಯೋಜನೆ ಪೂರ್ಣಗೊಳಿಸಿದ ಸಾಹಸ

ಗುಜರಾತ್‌ನ ಅಭಿವೃದ್ಧಿಗೆ ಸಂಬಂಧಿಸಿ ಮೋದಿಯವರ ಯೋಜನೆಗಳು ಹಲವು. ಅವುಗಳ ಪೈಕಿ ನರ್ಮದಾ ಅಣೆಕಟ್ಟೆ ಯೋಜನೆಯನ್ನು ಪೂರ್ಣಗೊಳಿಸಿರುವುದೂ ಒಂದು. ದಕ್ಷಿಣ ಗುಜರಾತ್‌ನಿಂದ ಸೌರಾಷ್ಟ್ರಕ್ಕೆ ನರ್ಮದೆಯ ನೀರನ್ನು ತಂದು ನೀರಾವರಿ ಕಲ್ಪಿಸುವ ಯೋಜನೆಯ ವಿರುದ್ಧ ಮೇಧಾ ಪಾಟ್ಕರ್‌ ಮತ್ತಿತರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು. ಆದರೆ ಸರ್ದಾರ್‌ ಸರೋವರ್‌ ಯೋಜನೆ ಇವತ್ತು 18.45 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ವ್ಯವಸ್ಥೆ ನೀಡಿದೆ. 9,490 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಿದೆ. ಪ್ರವಾಹದಿಂದ ರಕ್ಷಣೆ ಕೊಟ್ಟಿದೆ. ಕೃಷಿ ಉತ್ಪಾದನೆಯ ಹೆಚ್ಚಳಕ್ಕೆ ಪುಷ್ಟಿ ನೀಡಿದೆ. ಮೋದಿಯವರು ಗುಜರಾತ್‌ ಸಿಎಂ ಆಗಿದ್ದ ಅವಧಿಯಲ್ಲಿ ಎಂಟು ವರ್ಷಗಳ ಕಾಲ ರಾಜ್ಯ ಎರಡಂಕಿಯ ಆರ್ಥಿಕ ಬೆಳವಣಿಗೆ ದಾಖಲಿಸಿ ದೇಶದ ಗಮನ ಸೆಳೆದಿತ್ತು. ತ್ವರಿತ ಅಭಿವೃದ್ಧಿಗೆ ಗುಜರಾತ್‌ ಮಾದರಿಯಾಗಿತ್ತು.

ಪ್ರಧಾನ ಸೇವಕನಾಗಿ ಮೋದಿಯವರ ಜೈತ್ರಯಾತ್ರೆ

ಪ್ರಧಾನಿ ನರೇಂದ್ರ ಮೋದಿಯವರ ಅಭೂತಪೂರ್ವ ಯಶಸ್ಸು, ಜನಪ್ರಿಯತೆಗೆ ಅವರೇ ವಿವರಿಸಬೇಕಿಲ್ಲ. 2014 ಮತ್ತು 2019ರ ಲೋಕಸಭೆ ಚುನಾವಣೆಯ ಫಲಿತಾಂಶದ ಅಂಕಿ ಅಂಶಗಳೇ ಸಾಕು.

ಇದನ್ನೂ ಓದಿ: PM Modi Birthday: ಸೇವೆಯಿಂದ ಅಭಿವೃದ್ಧಿವರೆಗೆ; ದೇಶಾದ್ಯಂತ ನಾಳೆ ಮೋದಿ ಜನ್ಮದಿನ ಭರ್ಜರಿ ಆಚರಣೆ

2014ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿಯವರು ಮೂರು ದಶಕಗಳ ಸಮ್ಮಿಶ್ರ ಸರ್ಕಾರಗಳ ಜಂಜಾಟಕ್ಕೆ ತೆರೆ ಎಳೆದರು. 284 ಲೋಕಸಭಾ ಕ್ಷೇತ್ರಗಳಲ್ಲಿ ಗೆದ್ದು ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಇತಿಹಾಸ ಸೃಷ್ಟಿಸಿತು. 31% ಮತಗಳು ಲಭಿಸಿದವು. 2019ರಲ್ಲಿ ಮೋದಿ ಸರ್ಕಾರ್‌ ಮತ್ತಷ್ಟು ಪ್ರಬಲವಾಗಿತ್ತು. 37.3 ಮತಗಳು ಮತ್ತು 303 ಕ್ಷೇತ್ರಗಳಲ್ಲಿ ಗೆಲುವಿನ ಫಲಿತಾಂಶ ಬಂದಿತು. ಇದರೊಂದಿಗೆ ಅತಿ ಹೆಚ್ಚು ಕಾಲ ಪ್ರಧಾನಿ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ರಾಜಕಾರಣಿಯೂ ಆದರು.

ಮೋದಿ ಯುಗದಲ್ಲಿ ಬೆಳಗಿದ ತಾವರೆ

ಕಳೆದ 2014ರಿಂದೀಚೆಗೆ ಬಿಜೆಪಿ ಕೇಂದ್ರ ಮತ್ತು ರಾಜ್ಯಗಳ ಮಟ್ಟದಲ್ಲಿನ ಚುನಾವಣೆಗಳಲ್ಲಿ ಸೋತಿದ್ದು ಕಡಿಮೆ, ಗೆಲುವು ಸಾಧಿಸಿದ್ದೇ ಹೆಚ್ಚು. ಬಿಜೆಪಿಯ ಹಿಂದುತ್ವ ಮತ್ತು ಅಭಿವೃದ್ಧಿ ರಾಜಕಾರಣದ ಹಿಂದೆ ನರೇಂದ್ರ ಮೋದಿಯವರ ವರ್ಚಸ್ಸು ಕೆಲಸ ಮಾಡಿದೆ. ಸದಸ್ಯತ್ವದ ದೃಷ್ಟಿಯಿಂದ ಬಿಜೆಪಿ ವಿಶ್ವದ ದೊಡ್ಡ ಪಕ್ಷವೆಂದು ಹೇಳಿಕೊಂಡಿದೆ. ದೇಶದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವೇ ಇಲ್ಲ ಎಂಬ ಮಾತು ಹಿಂದೊಮ್ಮೆ ಇತ್ತು ಎಂದರೆ ಮುಂದಿನ ಪೀಳಿಗೆಗೆ ನಂಬಲೂ ಕಷ್ಟವಾಗಬಹುದು ಎಂಬ ಸ್ಥಿತಿಗೆ ಕಾಂಗ್ರೆಸ್‌ ಈಗ ತಲುಪಿದೆ. ಪ್ರತಿಪಕ್ಷ ಮಾನ್ಯತೆ ಪಡೆಯಲೂ ಪರದಾಡುವ ಸ್ಥಿತಿ. ಬಿಜೆಪಿ ಈ ಪರಿಯಲ್ಲಿ ಕಾಂಗ್ರೆಸ್‌ ರಾಜಕಾರಣಕ್ಕೆ ಪರ್ಯಾಯವಾಗಿ ಬೆಳೆಯಲಿದೆ ಎಂದು ಎಂಟು ವರ್ಷಗಳ ಹಿಂದೆ ಯಾವೊಬ್ಬ ರಾಜಕೀಯ ಪಂಡಿತರೂ ಭವಿಷ್ಯ ನುಡಿದಿರಲಿಲ್ಲ.

ಹೀಗಿದ್ದರೂ, ಮೋದಿಯವರು ಮುಂದಿನ ಹಂತದ ನಾಯಕರನ್ನು ಬೆಳೆಸುತ್ತಿಲ್ಲವೇ ಎಂಬ ಪಿಸುಮಾತು ಇದೆ. ವಾಜಪೇಯಿ ಸುತ್ತಮುತ್ತ ಪ್ರಮೋದ್ ಮಹಾಜನ್‌, ಸ್ವತಃ ನರೇಂದ್ರ ಮೋದಿ, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌, ಅನಂತ ಕುಮಾರ್‌, ವೆಂಕಯ್ಯ ನಾಯ್ಡು ಹೀಗೆ ಘಟಾನುಘಟಿಗಳ ಜನರೇಷನ್‌ ಸೃಷ್ಟಿಯಾಗಿತ್ತು. ಆದರೆ ಮೋದಿಯವರ ಸುತ್ತಮುತ್ತ ಮುಂದಿನ ಹಂತದ ನಾಯಕರು ಕಾಣಿಸುತ್ತಿಲ್ಲವಲ್ಲ ಎಂಬ ಯೋಚನೆ. ಆದರೆ ಪಕ್ಷದ ಕಾರ್ಯಕರ್ತರಲ್ಲಿ ಒಂದು ಅಚಲ ವಿಶ್ವಾಸ ಅಬಾಧಿತವಾಗಿದೆ- ಮೋದಿ ಹೈ ತೊ ಮುಮ್‌ಕಿನ್‌ ಹೈ (ಮೋದಿಯವರಿದ್ದರೆ ಎಲ್ಲವೂ ಸಾಧ್ಯ)

ಇದನ್ನೂ ಓದಿ: PM Modi Birthday: ದಿರಸಿನಿಂದಲೇ ಮೋಡಿ ಮಾಡುತ್ತಾರೆ ಮೋದಿ… ಇಲ್ಲಿವೆ ಅವರ ಸ್ಪೆಷಲ್‌ ಲುಕ್‌ಗಳು

Exit mobile version