Site icon Vistara News

INDIA Alliance: ಸಂವಿಧಾನ, ಸಂಸತ್ತು ಕುರಿತು ಮೋದಿಗೆ ಯಾಕಿಷ್ಟು ದ್ವೇಷ? ಪ್ರಧಾನಿ ‘ಇಂಡಿಯಾ’ ಟೀಕೆಗೆ ತಿರುಗೇಟು

Rahul Gandhi and Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪ್ರತಿಪಕ್ಷಗಳ ಕೂಟ ಇಂಡಿಯಾ(INDIA)ವನ್ನು ಟೀಕಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿ (East India Company), ಇಂಡಿಯನ್ ಮುಜಾಹಿದ್ದಿನ್ (Indian Mujahedeen) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಲ್ಲೂ (Popular Front of India) ಇಂಡಿಯಾ ಇದೆ ಎಂದು ಕಿಡಿ ಕಾರಿದ್ದರು. ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರು, ಪ್ರಧಾನಿಗಳೇ ನೀವೇ ಪ್ರತಿಪಕ್ಷಗಳಾದ ನಮ್ಮನ್ನು ಏನುಬೇಕಾದರೂ ಕರೆಯಿರಿ. ಆದರೆ ನಾವೇ ಭಾರತ ಮತ್ತು ಮಣಿಪುರದಲ್ಲಿ (Manipur Violence) ಭಾರತ ಎಂಬ ಪರಿಕಲ್ಪನೆಯನ್ನು ಮರು ನಿರ್ಮಾಣ ಮಾಡುತ್ತೇವೆ ಎಂದು ಹೇಳಿದ್ದಾರೆ(INDIA Alliance).

ಪ್ರತಿಪಕ್ಷಗಳು ತಮ್ಮ ಕೂಟಕ್ಕೆ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲುಸಿವ್ ಅಲೈಯನ್ಸ್ ಎಂದು ನಾಮಕರಣ ಮಾಡಿವೆ. ಈ ಹೆಸರಿನ ಹೃಸ್ವರೂಪವೇ ಇಂಡಿಯಾ (INDIA). ಈ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಪಕ್ಷಗಳ ಕೂಟವು ಯಾವೇದ ದಿಕ್ಕು ದೆಸೆ ಇಲ್ಲದ ಕೂಟವಾಗಿದೆ. ಇಂಥ ಪ್ರತಿಕ್ಷಗಳ ಕೂಟವನ್ನು ಭಾರತ ಎಂದೂ ಕಂಡಿಲ್ಲ. ಈಸ್ಟ್ ಇಂಡಿಯಾ ಕಂಪನಿ, ಇಂಡಿಯನ್ ಮುಜಾಹಿದ್ದೀನ್‌ಗಳಲ್ಲೂ ಇಂಡಿಯಾ ಇದೆ. ಹಾಗಾಗಿ, ದೇಶದ ಹೆಸರನ್ನು ಇಟ್ಟುಕೊಂಡ ಜನರನ್ನು ತಪ್ಪುದಾರಿಗೆ ಎಳೆಯಬಾರದು ಎಂದು ಹೇಳಿದ್ದರು.

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿಯವರು ಮಾತನಾಡಿ, ಪ್ರತಿಪಕ್ಷಗಳ ನಡವಳಿಕೆಯು ಬಹುಕಾಲ ವಿರೋಧ ಪಕ್ಷದಲ್ಲಿ ಉಳಿಯಲು ನಿರ್ಧರಿಸಿದಂತಿದೆ ಎಂದು ಹೇಳಿದ್ದರೆಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ದೇಶವನ್ನು ಒಡೆಯುವ ಗುರಿ ಹೊಂದಿದ್ದ ಈಸ್ಟ್ ಇಂಡಿಯಾ ಕಂಪನಿ ಮತ್ತು ಇಂಡಿಯನ್ ಮುಜಾಹಿದ್ದೀನ್‌ನಲ್ಲೂ ಇಂಡಿಯಾ ಹೆಸರುಗಳಿವೆ. ಆದರೆ, ಇಂಥ ಗಿಮಿಕ್‌ಗಳಿಂದ ಜನರು ದಾರಿ ತಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆಂದು ಬಿಜೆಪಿಯ ನಾಯಕ ರಮೇಶ್ ಭಿದುರಿ ಹೇಳಿದ್ದಾರೆ.

ಮೋದಿ ಅವರ ಟೀಕೆಗೆ ಪ್ರತಿಪಕ್ಷಗಳ ನಾಯಕರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಕ್ರಿಯಿಸಿ, ಮಣಿಪುರ ಹಿಂಸಾಚಾರದ ಕುರಿತು ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಿ ಎಂದರೆ ಪ್ರಧಾನಿ ನರೇಂದ್ರ ಮೋದಿ ಅವರು ಈಸ್ಟ್ ಇಂಡಿಯಾ ಕಂಪನಿಯ ಬಗ್ಗೆ ಮಾತನಾಡುತ್ತಿದ್ದಾರೆ. ಇಂಡಿಯಾ ಕೂಟವು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಮಗ್ರ ಹೇಳಿಕೆಯನ್ನು ಬಯಸುತ್ತದೆ ಎಂದು ಖರ್ಗೆ ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: PM Narendra Modi: ʼಇಂಡಿಯನ್‌ ಮುಜಾಹಿದೀನ್‌ʼ ʼಪಿಎಫ್‌ಐʼನಲ್ಲೂ ʼಇಂಡಿಯಾʼ ಇದೆ! ಪ್ರತಿಪಕ್ಷಗಳ ಬೆಂಡೆತ್ತಿದ ಪಿಎಂ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದ್ದಾರೆ. ಅವರಿಗೆ ಅಮೆರಿಕದ ಸಂಸತ್‌ನಲ್ಲಿ ಮಾತನಾಡಲು ಸಮಯವಿದೆ. ಆದರೆ, ನಮ್ಮ ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಮಾತನಾಡಲು ಸಮಯವಿಲ್ಲ. ಮೋದಿ ಅವರು ಯಾಕೆ ಅಷ್ಟು ಭಾರತೀಯ ಸಂವಿಧಾನ ಮತ್ತು ಸಂಸತ್ತನ್ನು ದ್ವೇಷಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ್ ಅವರು ಪ್ರಶ್ನಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version