ಪ್ಯಾರಿಸ್: ಫ್ರಾನ್ಸ್ ದೇಶಕ್ಕೆ ಭೇಟಿ ನೀಡಿರುವ (PM Modi France Visit) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಅತ್ಯುನ್ನತ ನಾಗರಿಕ ಮತ್ತು ಸೇನಾ ಗೌರವ ಆಗಿರುವ ʼಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ʼ ಅನ್ನು ನೀಡಲಾಗಿದೆ.
ಗುರುವಾರ ಸಂಜೆ ಪ್ಯಾರಿಸ್‌ನ ಎಲಿಸಿ ಪ್ಯಾಲೇಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷರಾದ ಇಮ್ಯಾನುಯೆಲ್ ಮ್ಯಾಕ್ರಾನ್ (Emmanuel Macron) ಆಯೋಜಿಸಿದ್ದ ಖಾಸಗಿ ಔತಣಕೂಟದ ನಂತರ ಅಧ್ಯಕ್ಷರು ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಿದರು. ಈ ವಿಶಿಷ್ಟ ಗೌರವ ಪ್ರದಾನಕ್ಕಾಗಿ ಪ್ರಧಾನಿ ಭಾರತದ ಜನರ ಪರವಾಗಿ ಮ್ಯಾಕ್ರಾನ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ನರೇಂದ್ರ ಮೋದಿಯವರ ಎರಡು ದಿನಗಳ ಫ್ರಾನ್ಸ್ ಭೇಟಿಯ ಮೊದಲ ದಿನದಂದು ಈ ಭೋಜನ ನಡೆಯಿತು. ʼʼಇಂದು ಸಂಜೆ ಎಲಿಸಿ ಅರಮನೆಯಲ್ಲಿ ನನಗೆ ಆತಿಥ್ಯ ನೀಡಿದ್ದಕ್ಕಾಗಿ ನಾನು ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಮತ್ತು ಶ್ರೀಮತಿ ಮ್ಯಾಕ್ರನ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಪ್ರಶಸ್ತಿಯನ್ನು “ಭಾರತ- ಫ್ರಾನ್ಸ್ ಪಾಲುದಾರಿಕೆಯ ಚೈತನ್ಯವನ್ನು ಸಾಕಾರಗೊಳಿಸುವ ಸಂಕೇತ” ಎಂದು ಬಣ್ಣಿಸಿದ್ದಾರೆ.
I thank President @EmmanuelMacron and Mrs. Macron for hosting me at the Élysée Palace this evening. pic.twitter.com/OMhydyleph
— Narendra Modi (@narendramodi) July 13, 2023
ಈ ಗೌರವ ಪಡೆದ ಮೊದಲ ಭಾರತೀಯ ಪ್ರಧಾನಿ ಮೋದಿ. ಹಿಂದೆ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಜರ್ಮನಿಯ ಮಾಜಿ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಮಾಜಿ ಯುಎನ್ ಸೆಕ್ರೆಟರಿ-ಜನರಲ್ ಬೌಟ್ರೋಸ್ ಘಾಲಿ ಸೇರಿದಂತೆ ಕೆಲವು ಪ್ರಮುಖ ನಾಯಕರು ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ಪ್ರಶಸ್ತಿ ಪಡೆದಿದ್ದಾರೆ.
ಜೂನ್‌ನಲ್ಲಿ ಈಜಿಪ್ಟ್ ಮೋದಿಯವರಿಗೆ ʼಆರ್ಡರ್ ಆಫ್ ದಿ ನೈಲ್ʼ ಪ್ರಶಸ್ತಿಯನ್ನು ನೀಡಿತು. ಮೋದಿಯವರು 2021ರಲ್ಲಿ ಭೂತಾನ್‌ನಿಂದ ʼಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋʼ, 2020ರಲ್ಲಿ ಯುಎಸ್‌ನಿಂದ ʼಲೀಜನ್ ಆಫ್ ಮೆರಿಟ್ʼ, 2019ರಲ್ಲಿ ರಷ್ಯಾದಿಂದ ʼಆರ್ಡರ್ ಆಫ್ ಸೇಂಟ್ ಆಂಡ್ರ್ಯೂʼ, 2019ರಲ್ಲಿ ಯುಎಇಯಿಂದ ʼಆರ್ಡರ್ ಆಫ್ ಜಾಯೆದ್ʼ ಮತ್ತು ʼಆರ್ಡರ್ ಆಫ್ ಅಬ್ದುಲಜೀಜ್ ಅಲ್ʼ, 2016ರಲ್ಲಿ ಸೌದಿ ಅರೇಬಿಯಾದಿಂದ ʼಸೌದ್ʼ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: PM Modi France Visit: ಪ್ಯಾರಿಸ್‌ಗೆ ಬಂದಿಳಿದ ಮೋದಿ, ಭವ್ಯ ಸ್ವಾಗತ ನೀಡಿದ ಫ್ರೆಂಚ್ ಪ್ರಧಾನಿ