ನವದೆಹಲಿ: ಭಾರತದಲ್ಲಿ ಡಿಜಿಟಲ್ ಹಣ ಪಾವತಿಗಾಗಿ ರಚಿಸಿರುವ ಏಕೀಕೃತ ಪಾವತಿ ವ್ಯವಸ್ಥೆ (Unified Payments Interface-UPI) ಈಗ ಜಾಗತಿಕ ಮಟ್ಟದಲ್ಲಿ ಬಳಕೆಯಾಗುತ್ತಿದೆ. ಜಗತ್ತಿನ ಹತ್ತಾರು ದೇಶಗಳು ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇದರ ಬೆನ್ನಲ್ಲೇ ಫ್ರಾನ್ಸ್ ಕೂಡ ಯುಪಿಐ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಫ್ರಾನ್ಸ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (PM Modi France Visit) ಅವರು ಯುಪಿಐ ಅವಳಡಿಕೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಜತೆಗೂಡಿ ಚಾಲನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಫ್ರಾನ್ಸ್ ಯುಪಿಐ ಅಳವಡಿಸಿಕೊಂಡರೆ ಸಿಂಗಾಪುರ ನಂತರ ಭಾರತದ ಪಾವತಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಯುರೋಪ್‌ನ ಎರಡನೇ ರಾಷ್ಟ್ರ ಎನಿಸಲಿದೆ. ಕೆಲ ತಿಂಗಳ ಹಿಂದೆ ಯುಪಿಐ ಹಾಗೂ ಸಿಂಗಾಪುರದ ಪೇನೌ (Pay Now) ಒಪ್ಪಂದ ಮಾಡಿಕೊಂಡಿದ್ದು, ಸಿಂಗಾಪುರದಲ್ಲಿರುವವರು ಭಾರತದಲ್ಲಿರುವವರಿಗೆ, ಭಾರತದಲ್ಲಿರುವವರು ಸಿಂಗಾಪುರದಲ್ಲಿರುವವರಿಗೆ ಹಣ ಕಳುಹಿಸಬಹುದಾಗಿದೆ. ಈಗ ಭಾರತದ ಯುಪಿಐ ಹಾಗೂ ಫ್ರಾನ್ಸ್‌ನ ಲೈರಾ ಜತೆಗೂಡಿ ಪಾವತಿ ವ್ಯವಸ್ಥೆಯ ಅಳವಡಿಕೆ ಕುರಿತು ಚಿಂತನೆ ನಡೆಸಿವೆ. ಹಾಗಾಗಿ, ಮೋದಿ ಹಾಗೂ ಮ್ಯಾಕ್ರನ್ ಅವರು ಈ ಕುರಿತು ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಫ್ರಾನ್ಸ್ ಪ್ರವಾಸ ಆರಂಭಿಸಿದ ಮೋದಿ
#WATCH | PM Narendra Modi departs from Delhi Airport for Paris. pic.twitter.com/7KLi6y5efm
— ANI (@ANI) July 13, 2023
ಇದನ್ನೂ ಓದಿ: RBI Policy : ಶೀಘ್ರದಲ್ಲೇ ನೀವು ಯುಪಿಐ ಮೂಲಕವೂ ಸಾಲ ಪಡೆಯಬಹುದು, ಆರ್‌ಬಿಐ ಹೊಸ ಪ್ರಸ್ತಾಪದಲ್ಲಿ ಏನಿದೆ?
ಈಗ ಯಾವ ದೇಶದಲ್ಲಿದೆ ಯುಪಿಐ?
ಜಗತ್ತಿನ ಹತ್ತಾರು ದೇಶಗಳು ಈಗಾಗಲೇ ಯುಪಿಐ ಅಳವಡಿಸಿಕೊಂಡಿವೆ. ಸಿಂಗಾಪುರ, ಯುಎಇ, ಸೌದಿ ಅರೇಬಿಯಾ, ಮಲೇಷ್ಯಾ, ಬೆಲ್ಜಿಯಂ, ನೆದರ್ಲೆಂಡ್ಸ್, ಸ್ವಿಟ್ಜರ್‌ಲ್ಯಾಂಡ್ ಸೇರಿ ಹಲವು ರಾಷ್ಟ್ರಗಳಲ್ಲಿ ಯುಪಿಐ ಜಾರಿಯಲ್ಲಿದೆ. ಆಯಾ ದೇಶಗಳ ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಜತೆ ಯುಪಿಐ ಕೈಜೋಡಿಸಿದ್ದು, ಜನರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಜುಲೈ 14ರಂದು ಮೋದಿ ಅವರು ಪ್ಯಾರಿಸ್‌ನಲ್ಲಿ ನಡೆಯುವ ಬ್ಯಾಸ್ಟೈಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದು, ಗೆಸ್ಟ್ ಆಫ್ ಆನರ್ ಸ್ವೀಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಸೇನೆಯ ಮೂರೂ ಪಡೆಗಳ ಯೋಧರು ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರಿಗಾಗಿ ವಿಶೇಷ ಭೋಜನ ಕೂಟವನ್ನೂ ಆಯೋಜಿಸಲಾಗಿದೆ. ಅನಿವಾಸಿ ಭಾರತೀಯರೊಂದಿಗೂ ಮೋದಿ ಮಾತುಕತೆ ನಡೆಸಲಿದ್ದಾರೆ. ರಫೇಲ್ ಮರಿನ್ ಯುದ್ಧವಿಮಾನ ಖರೀದಿ, ಮಹಾರಾಷ್ಟ್ರದಲ್ಲಿ ಅಣ್ವಸ್ತ್ರ ಘಟಕ ಸ್ಥಾಪನೆ ಸೇರಿ ಹಲವು ಒಪ್ಪಂದಗಳಿಗೆ ಮೋದಿ ಸಹಿ ಹಾಕಲಿದ್ದಾರೆ. ಇದಾದ ಬಳಿಕ ಯುಎಇಗೆ ತೆರಳಲಿದ್ದಾರೆ.