ಪ್ಯಾರಿಸ್: ಎರಡು ದಿನಗಳ ಫ್ರಾನ್ಸ್ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಗುರುವಾರ ಪ್ಯಾರಿಸ್‌ಗೆ (Paris) ಬಂದಿಳಿದರು. ಈ ವೇಳೆ, ಅವರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಎರಡು ದಿನಗಳ ಈ ಭೇಟಿ ವೇಳೆ ಫ್ರಾನ್ಸ್ ಜತೆಗೆ ಅವರು ದ್ವಿಪಕ್ಷೀಯ ಮಾತುಕತೆಗಳನ್ನು ನಡೆಸಲಿದ್ದಾರೆ. ಅಲ್ಲದೇ, ಫ್ರೆಂಚ್ ನ್ಯಾಷನಲ್ ಡೇ (French National Day) ಆಚರಣೆಯಲ್ಲಿ ಅವರು ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ”ನಾನೀಗ ಪ್ಯಾರಿಸ್ ತಲುಪಿದ್ದೇನೆ. ಈ ಭೇಟಿಯ ವೇಳೆ ಭಾರತ-ಫ್ರಾನ್ಸ್ ನಡುವಿನ ಸಹಕಾರ ವೃದ್ದಿಯನ್ನು ಎದುರು ನೋಡುತ್ತಿದ್ದೇನೆ. ಮೊದಲನೇ ದಿನದ ವಿವಿಧ ಕಾರ್ಯಕ್ರಮಗಳ ಪಟ್ಟಿಯಲ್ಲಿ ಭಾರತೀಯ ಸಮುದಾಯದ ಜತೆಗಿನ ಸಂವಾದ ಕೂಡ ಒಳಗೊಂಡಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ(PM Modi France Visit).
ಪ್ರಧಾನಿ ನರೇಂದ್ರ ಮೋದಿ ಅವರನ್ನು ಫ್ರಾನ್ಸ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಈ ಮೋದಿ ಅವರು ಗೌರವ ರಕ್ಷೆಯನ್ನು ನೀಡಲಾಯಿತು. ಉಭಯ ರಾಷ್ಟ್ರಗಳ ರಾಷ್ಟ್ರ ಗೀತೆಗಳನ್ನು ನುಡಿಸಲಾಯಿತು.
Atterri à Paris. Je me réjouis de pouvoir renforcer la coopération entre l'Inde et la France au cours de cette visite. Mes différents programmes comprennent une interaction avec la communauté indienne plus tard dans la soirée. pic.twitter.com/XM5j2xhEs6
— Narendra Modi (@narendramodi) July 13, 2023
ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಅವರಿಗೆ ವಿಧ್ಯುಕ್ತ ಸ್ವಾಗತವನ್ನು ನೀಡಲಾಯಿತು. ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರು ಮೋದಿ ಅವರನ್ನು ಬರಮಾಡಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ನಾಯಕತ್ವದೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಾಸ್ಟಿಲ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ವಲಸಿಗ ಸಮುದಾಯ, ಸಿಇಒಗಳು ಮತ್ತು ಪ್ರಮುಖ ವ್ಯಕ್ತಿಗಳ ಜತೆಗೆ ಮಾತುಕತೆ ನಡೆಸಲಿದ್ದಾರೆಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಪ್ರವಾಸದ ಪಟ್ಟಿ
ಜುಲೈ 13ರಿಂದ ಜುಲೈ 15ರವರೆಗೆ ನರೇಂದ್ರ ಮೋದಿ ಅವರು ಅವರು ಮೂರು ದಿನ ಎರಡು ರಾಷ್ಟ್ರಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದೇ ವೇಳೆ ಮೋದಿ ಅವರು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜುಲೈ 14ರಂದು ಮೋದಿ ಅವರು ಪ್ಯಾರಿಸ್‌ನಲ್ಲಿ ನಡೆಯುವ ಬ್ಯಾಸ್ಟೈಲ್ ಡೇ ಪರೇಡ್‌ನಲ್ಲಿ ಭಾಗವಹಿಸಲಿದ್ದು, ಗೆಸ್ಟ್ ಆಫ್ ಆನರ್ ಸ್ವೀಕರಿಸಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಸೇನೆಯ ಮೂರೂ ಪಡೆಗಳ ಯೋಧರು ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರ ಜತೆಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಅವರಿಗಾಗಿ ವಿಶೇಷ ಭೋಜನ ಕೂಟವನ್ನೂ ಆಯೋಜಿಸಲಾಗಿದೆ.
ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿ ನೆಲೆಸಿರುವ ಭಾರತೀಯರ ಜತೆ ಮಾತುಕತೆ ನಡೆಸಲಿದ್ದಾರೆ. ಫ್ರಾನ್ಸ್‌ನಲ್ಲೂ ಮೋದಿ ಅವರು ಅನಿವಾಸಿ ಭಾರತೀಯರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಹಾಗೆಯೇ, ಭಾರತ ಹಾಗೂ ಫ್ರಾನ್ಸ್ ಕಂಪನಿಗಳ ಸಿಇಒಗಳು, ಫ್ರಾನ್ಸ್‌ನ ಪ್ರಮುಖ ಗಣ್ಯರ ಜತೆಗೂ ಮೋದಿ ಚರ್ಚೆ, ಸಂವಾದ ನಡೆಸಲಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಸುದ್ದಿಯನ್ನೂ ಓದಿ: PM Narendra Modi Interview: ಜಾಗತಿಕ ನಾಯಕತ್ವ ವಹಿಸಲು ಭಾರತ ಸಿದ್ಧ: ಫ್ರಾನ್ಸ್ ಪತ್ರಿಕೆಗೆ ನರೇಂದ್ರ ಮೋದಿ ವಿಶೇಷ ಸಂದರ್ಶನ
ಜುಲೈ 15ರಂದು ಅಬುಧಾಬಿ ಪ್ರವಾಸ ಕೈಗೊಳ್ಳಲಿರುವ ಅವರು, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಯೇದ್ ಅಲ್ ನಹ್ಯಾನ್ ಅವರೊಂದಿಗೂ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಯುಎಇ ಜತೆಗಿನ ಭಾರತದ ಸಂಬಂಧ ವೃದ್ಧಿ, ರಕ್ಷಣೆ, ವ್ಯಾಪಾರ, ಆಹಾರ ಸೇರಿ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. ಅದರಲ್ಲೂ, ಫ್ರಾನ್ಸ್ ಭೇಟಿ ವೇಳೆ 90 ಸಾವಿರ ಕೋಟಿ ರೂಪಾಯಿ ಮೌಲ್ಯದ 26 ರಫೇಲ್ ಮರಿನ್ ಯುದ್ಧವಿಮಾನಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುವುದು ಪ್ರಮುಖವಾಗಿದೆ.
ವಿದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.