ಟೋಕಿಯೊ: ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ-7 ಶೃಂಗಸಭೆಯ (G7 Summit) ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಸಮರಪೀಡಿತ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಜತೆ ಮಾತುಕತೆ ನಡೆಸಿದ್ದಾರೆ. ಉಕ್ರೇನ್ ಪರಿಸ್ಥಿತಿ ಆಲಿಸುವ ಜತೆಗೆ ಮುಂದಿನ ದಿನಗಳಲ್ಲಿ ಉಕ್ರೇನ್‌ಗೆ ಸಕಲ ರೀತಿಯ ನೆರವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ.
“ಜಪಾನ್‌ನ ಹಿರೋಶಿಮಾದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಅವರ ಜತೆ ಮಾತುಕತೆ ನಡೆಸಿದೆ. ಉಕ್ರೇನ್‌ನಲ್ಲಿ ಶಾಂತಿಸ್ಥಾಪನೆ ಕುರಿತು ರಾಜತಾಂತ್ರಿಕ ಹಾಗೂ ಮಾತುಕತೆಯ ಮಾರ್ಗದಲ್ಲಿ ಭಾರತ ಎಂದಿಗೂ ಬೆಂಬಲ ನೀಡುತ್ತದೆ. ಹಾಗೆಯೇ, ಮಾನವೀಯ ನೆಲೆಯಲ್ಲೂ ಸಕಲ ರೀತಿಯಲ್ಲಿ ಸಹಕಾರ ನೀಡುತ್ತದೆ ಎಂಬ ಭರವಸೆ ನೀಡಿದೆ” ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಮೋದಿ ಟ್ವೀಟ್
ಇನ್ನು ಉಕ್ರೇನ್ ಬಿಕ್ಕಟ್ಟನ್ನು ಜಿ-7 ರಾಷ್ಟ್ರಗಳ ಗಮನಕ್ಕೆ ತರುವ, ಅದರ ಗಂಭೀರತೆಯನ್ನು ಮನವರಿಕೆ ಮಾಡುವ ದಿಸೆಯಲ್ಲೂ ಮೋದಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. “ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಜಗತ್ತಿಗೇ ದೊಡ್ಡ ವಿಷಯವಾಗಿದೆ. ಇದೊಂದು ಕೇವಲ ರಾಜಕೀಯ, ಆರ್ಥಿಕ ಬಿಕ್ಕಟ್ಟಿನ ಸಮಸ್ಯೆ ಎಂದು ಎನಿಸುವುದಿಲ್ಲ. ಇದು ಮಾನವೀಯತೆಯ ಬಿಕ್ಕಟ್ಟಾಗಿದೆ. ಭಾರತವು ಯುದ್ಧದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲ ರೀತಿಯ ಬೆಂಬಲ ನೀಡುತ್ತದೆ” ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿ ಅವರು ಶುಕ್ರವಾರವೇ (May 19) ಜಪಾನ್‌ಗೆ ತೆರಳಿದ್ದಾರೆ. ಇದೇ ವೇಳೆ ಮಾಧ್ಯಮ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, ಪಾಕಿಸ್ತಾನದ ವಿಷಯ ಪ್ರಸ್ತಾಪಿಸಿದ್ದರು. “ನೆರೆ ರಾಷ್ಟ್ರವಾದ ಪಾಕಿಸ್ತಾನದ ಜತೆ ನಾವು ಉತ್ತಮ ಸಂಬಂಧ ಹೊಂದಲು ಬಯಸುತ್ತೇವೆ. ಆದರೆ, ಪಾಕಿಸ್ತಾನವು ಉಗ್ರವಾದದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಿಲ್ಲ, ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಮುಂದಾಗುವುದಿಲ್ಲ. ಭಯೋತ್ಪಾದನೆ ಮುಕ್ತ ವಾತಾವರಣ ನಿರ್ಮಿಸಲು ಪಾಕಿಸ್ತಾನವು ಕನಿಷ್ಠ ಪ್ರಯತ್ನವನ್ನೂ ಮಾಡುವುದಿಲ್ಲ. ಇದರಿಂದಾಗಿ ಎರಡೂ ರಾಷ್ಟ್ರಗಳ ಸಂಬಂಧ ಗಟ್ಟಿಯಾಗಿಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: PM Modi Japan Visit: ಪಾಕ್ ಜತೆ ಸಂಬಂಧ ಬೇಕು, ಆದರೆ… ಜಪಾನ್‌ನಲ್ಲಿ ಮೋದಿ ಹೇಳಿದ್ದೇನು?
“ಪಾಕಿಸ್ತಾನವು ಉಗ್ರರನ್ನು ಪೋಷಣೆ ಮಾಡುವ ಕುರಿತು, ಗಡಿ ಭಯೋತ್ಪಾದನೆಗೆ ಉತ್ತೇಜನ ನೀಡುವ ಕುರಿತು ಈಗಾಗಲೇ ಭಾರತ ಹಲವು ಬಾರಿ ಕಳವಳ ವ್ಯಕ್ತಪಡಿಸಿದೆ. ಉಗ್ರವಾದ ಹಾಗೂ ಸಂಧಾನಗಳೆರಡಕ್ಕೂ ಆಸ್ಪದವಿಲ್ಲ ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ. ನೆರೆಯ ರಾಷ್ಟ್ರದ ಜತೆ ಉತ್ತಮ ಸಂಬಂದ ಹೊಂದಬೇಕು, ದ್ವಿಪಕ್ಷೀಯ ವ್ಯಾಪಾರಗಳಿಗೆ ಆದ್ಯತೆ ನೀಡಬೇಕು ಎಂಬುದು ಭಾರತದ ಉದ್ದೇಶವಾಗಿದೆ” ಎಂದು ತಿಳಿಸಿದ್ದರು.