Site icon Vistara News

PM Narendra Modi: ʼಮನೆಗೆ ಬಂದಂತೆ…ʼ ʼಸ್ವರವೇದ ಮಹಾಮಂದಿರʼ ಉದ್ಘಾಟಿಸಿದ ಪ್ರಧಾನಿ ಮೋದಿ

modi inagurates swaraveda

ವಾರಾಣಸಿ: ಜಗತ್ತಿನ ಅತಿ ದೊಡ್ಡ ಧ್ಯಾನ ಮಂದಿರ ʼಸ್ವರವೇದ ಮಹಾಮಂದಿರʼವನ್ನು (Swarved Mahamandir) ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಇಂದು ವಾರಾಣಸಿಯಲ್ಲಿ (Varanasi) ಉದ್ಘಾಟಿಸಿದರು.

“ಕಾಶಿಯಲ್ಲಿ ಕಳೆಯುವ ಪ್ರತಿ ಕ್ಷಣವೂ ಅದ್ಭುತವಾಗಿರುತ್ತದೆ. ಕಾಶಿಗೆ ಬರುವುದು ಯಾವಾಗಲೂ ಮನೆಗೆ ಬಂದಂತೆ ಭಾಸವಾಗುತ್ತದೆ” ಎಂದು ಸ್ವರವೇದ ಮಹಾಮಂದಿರವನ್ನು ಉದ್ಘಾಟಿಸಿದ ನಂತರ ಪ್ರಧಾನಿ ಮೋದಿ ಹೇಳಿದರು. “ಸಂತರ ಮಾರ್ಗದರ್ಶನದಲ್ಲಿ ಕಾಶಿಯ ಜನರು ಅಭಿವೃದ್ಧಿ ಮತ್ತು ಹೊಸ ನಿರ್ಮಾಣದ ವಿಷಯದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿದ್ದಾರೆ. ಸ್ವರವೇದ ಮಹಾಮಂದಿರವು ಇದಕ್ಕೆ ಉದಾಹರಣೆಯಾಗಿದೆ. ನಾನು ಸ್ವರವೇದ ಮಹಾಮಂದಿರವನ್ನು ಸುತ್ತಾಡಿದಾಗ ಮಂತ್ರಮುಗ್ಧನಾದೆ. ವೇದಗಳು, ಉಪನಿಷತ್ತುಗಳು, ರಾಮಾಯಣ, ಗೀತೆ ಮತ್ತು ಮಹಾಭಾರತದ ದೈವಿಕ ಬೋಧನೆಗಳನ್ನು ಸ್ವರವೇದ ಮಹಾಮಂದಿರದ ಗೋಡೆಗಳ ಮೇಲೆ ಭವ್ಯವಾಗಿ ಚಿತ್ರಿಸಲಾಗಿದೆ,” ಎಂದು ಪ್ರಧಾನಿ ಮೋದಿ ಹೇಳಿದರು.

ವಾರಣಾಸಿಯ ಉಮರಹಾ ಪ್ರದೇಶದಲ್ಲಿ ಏಳು ಅಂತಸ್ತಿನ ಭವ್ಯವಾದ ಸ್ವರವೇದ ಮಹಾಮಂದಿರ ಇದೆ. ಉದ್ಘಾಟನೆಯ ನಂತರ ಮೋದಿಯವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಕೇಂದ್ರವನ್ನು ವೀಕ್ಷಿಸಿದರು. ಈ ಕೇಂದ್ರದಲ್ಲಿ 20,000 ಜನ ಏಕಕಾಲದಲ್ಲಿ ಧ್ಯಾನಕ್ಕೆ ಕುಳಿತುಕೊಳ್ಳಬಹುದಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ʼವಿಹಂಗಮ ಯೋಗʼದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡರು. 19ನೇ ಶತಮಾನದ ಆಧ್ಯಾತ್ಮಿಕ ಮುಖಂಡ, ಅನುಭಾವಿ ಕವಿ ಮತ್ತು ದಾರ್ಶನಿಕ ಸದ್ಗುರು ಸದಾಫಲ್ ದೇವಜಿ ಮಹಾರಾಜ್ ಅವರು ʼವಿಹಂಗಮ ಯೋಗ ಸಂಸ್ಥಾನʼವನ್ನು ಸ್ಥಾಪಿಸಿದ್ದರು. ಇದು ಅದರ 100ನೇ ವಾರ್ಷಿಕೋತ್ಸವ. ಈ ಮಹಾಮಂದಿರದಲ್ಲಿ ದೇವಜಿಯವರ ವಿಗ್ರಹವಿದೆ.

ಮಂದಿರದಲ್ಲಿ ಏನೇನಿದೆ?

1) ದೇವಾಲಯವು 125 ದಳಗಳ ಕಮಲದ ಗುಮ್ಮಟಗಳ ಅದ್ಭುತವಾದ ವಿನ್ಯಾಸವನ್ನು ಹೊಂದಿದೆ. 20,000 ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರಗಳಲ್ಲಿ ಒಂದು.

2) ವಾರಣಾಸಿ ನಗರ ಕೇಂದ್ರದಿಂದ ಸರಿಸುಮಾರು 12 ಕಿಮೀ ದೂರದಲ್ಲಿರುವ ಉಮರಹಾ ಪ್ರದೇಶದಲ್ಲಿ ನೆಲೆಗೊಂಡಿರುವ ಸ್ವರವೇದ ಮಹಾಮಂದಿರವು 3,00,000 ಚದರ ಅಡಿಗಳಷ್ಟು ವಿಸ್ತಾರವಾದ ಪ್ರದೇಶವನ್ನು ಒಳಗೊಂಡಿದೆ.

3) ಮಹಾಮಂದಿರದ ಅಡಿಪಾಯವನ್ನು 2004ರಲ್ಲಿ ಸದ್ಗುರು ಆಚಾರ್ಯ ಸ್ವತಂತ್ರ ದೇವ್ ಮತ್ತು ಸಂತ ಪ್ರವರ ವಿಜ್ಞಾನ ದೇವ್ ಅವರು ಹಾಕಿದರು. 600 ಕಾರ್ಮಿಕರು ಮತ್ತು 15 ಎಂಜಿನಿಯರ್‌ಗಳ ಕೆಲಸ ಇದರ ಹಿಂದಿದೆ.

4) ದೇವಾಲಯವು 101 ಕಾರಂಜಿಗಳು, ಸಂಕೀರ್ಣವಾದ ಕೆತ್ತನೆ ಕೆಲಸಗಳು, ತೇಗದ ಮರದ ಛಾವಣಿಗಳು ಮತ್ತು ಬಾಗಿಲುಗಳನ್ನು ಒಳಗೊಂಡಿದೆ. ಮಹಾಮಂದಿರದ ಗೋಡೆಗಳ ಮೇಲೆ ಸ್ವರವೇದದ ಶ್ಲೋಕಗಳನ್ನು ಕೆತ್ತಲಾಗಿದೆ. ಏಳು ಅಂತಸ್ತುಗಳಿವೆ.

5) ಗುಲಾಬಿ ಮರಳುಗಲ್ಲುಗಳಿಂದ ಗೋಡೆಗಳನ್ನು ಮಾಡಲಾಗಿದೆ. ಔಷಧೀಯ ಗಿಡಮೂಲಿಕೆಗಳಿರುವ ಸುಂದರವಾದ ಉದ್ಯಾನವನವು ಭವ್ಯತೆಯನ್ನು ಹೆಚ್ಚಿಸಿದೆ.

6) ಸದ್ಗುರು ಶ್ರೀ ಸದಾಫಲ್ ದೇವಜಿ ಮಹಾರಾಜ್, ಸನಾತನ ಯೋಗಿ ಮತ್ತು ವಿಹಂಗಮ ಯೋಗದ ಸ್ಥಾಪಕರಿಂದ ರಚಿಸಲ್ಪಟ್ಟ ಆಧ್ಯಾತ್ಮಿಕ ಪಠ್ಯವಾದ ʼಸ್ವರವೇದʼದ ಹೆಸರನ್ನು ಈ ದೇವಾಲಯಕ್ಕೆ ಇಡಲಾಗಿದೆ.

7) ದೇವಾಲಯದ ವೆಬ್‌ಸೈಟ್‌ನ ಪ್ರಕಾರ, ಸ್ವರವೇದ ಮಹಾಮಂದಿರವು “ಮನುಕುಲವನ್ನು ಅದರ ಭವ್ಯವಾದ ಆಧ್ಯಾತ್ಮಿಕ ಸೆಳವುಗಳಿಂದ ಬೆಳಗಿಸುವ, ಜಗತ್ತನ್ನು ಶಾಂತಿಯುತ ಎಚ್ಚರಿಕೆಯ ಸ್ಥಿತಿಯಲ್ಲಿ ಮಗ್ನಗೊಳಿಸುವ” ಗುರಿಯನ್ನು ಹೊಂದಿದೆ.

8) ದೇವಾಲಯವು ಸ್ವರವೇದದ ಬೋಧನೆಗಳನ್ನು ಉತ್ತೇಜಿಸುತ್ತದೆ. ಬ್ರಹ್ಮವಿದ್ಯೆಯನ್ನು ಒತ್ತಿಹೇಳುತ್ತದೆ. ಆಧ್ಯಾತ್ಮಿಕ ಅನ್ವೇಷಕರಿಗೆ ಪರಿಪೂರ್ಣವಾದ ಧ್ಯಾನಸ್ಥಿತಿಯನ್ನು ತಲುಪಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: PM Narendra Modi: ಕಾಶಿ ತಮಿಳ್ ಸಂಗಮ್ 2.0 ಮತ್ತು ಕಾಶಿ – ತಮಿಳ್ ಸಂಗಮ್ ರೈಲಿಗೆ ಮೋದಿ ಚಾಲನೆ

Exit mobile version