Site icon Vistara News

Mary Millben: ಮೋದಿ ಬೆಸ್ಟ್‌, ಸಿಎಂ ನಿತೀಶ್‌ ರಾಜೀನಾಮೆ ನೀಡಲಿ ಎಂದ ಅಮೆರಿಕ ಗಾಯಕಿ!

Mary Millben

PM Modi is best, says US singer Mary Millben, calls resignation to Nitish Kumar

ವಾಷಿಂಗ್ಟನ್‌: ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಭಾರತದ ರಾಷ್ಟ್ರಗೀತೆ ಹಾಡುವ ಮೂಲಕ ಗಮನ ಸೆಳೆದಿದ್ದ ಅಂತಾರಾಷ್ಟ್ರಿಯ ಖ್ಯಾತಿಯ ಆಫ್ರಿಕನ್​-ಅಮೆರಿಕನ್​ ಗಾಯಕಿ ಮೇರಿ ಮಿಲ್​​ಬೆನ್ (Mary Millben) ಅವರೀಗ ಮತ್ತೆ ನರೇಂದ್ರ ಮೋದಿ (Narendra Modi) ಅವರನ್ನು ಹೊಗಳಿದ್ದಾರೆ. ಹಾಗೆಯೇ, ಹೆಣ್ಣುಮಕ್ಕಳು ಹೆಚ್ಚು ಕಲಿತರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ ಎಂಬ ಹೇಳಿಕೆ ನೀಡಿ, ವಿವಾದದ ಬಳಿಕ ಕ್ಷಮೆಯಾಚಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಬಗ್ಗೆ ಹೇಳಿದ್ದಿಷ್ಟು…

“ನೀವೇಕೆ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತೀರಿ ಎಂದು ತುಂಬ ಜನ ಕೇಳುತ್ತಾರೆ. ಹೌದು, ನಾನು ಮೋದಿ ಅವರನ್ನು ಬೆಂಬಲಿಸುತ್ತೇನೆ. ಏಕೆಂದರೆ ಅವರೊಬ್ಬ ಅದ್ಭುತ ನಾಯಕ. ಭಾರತೀಯರ ಏಳಿಗೆಗೆ ಮೋದಿ ಕೊಡುಗೆ ಹೆಚ್ಚಿದೆ. ಅವರು ಭಾರತ-ಅಮೆರಿಕ ಸಂಬಂಧ, ಜಾಗತಿಕ ಆರ್ಥಿಕ ಸ್ಥಿರತೆ ಕಾಪಾಡುವ ದಿಸೆಯಲ್ಲೂ ಅತ್ಯುತ್ತಮ ನಾಯಕ. ಅಲ್ಲದೆ, ನಾನು ಭಾರತವನ್ನು ತುಂಬ ಪ್ರೀತಿಸುತ್ತೇನೆ. ಹಾಗೆಯೇ, ಮೋದಿ ಅವರನ್ನೂ ಇಷ್ಟಪಡುತ್ತೇನೆ” ಎಂದು ತಿಳಿಸಿದ್ದಾರೆ.

ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ

“ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಹೆಣ್ಣುಮಕ್ಕಳ ಕುರಿತು ಹೇಳಿಕೆ ನೀಡಿದ್ದಾರೆ. ಬಿಹಾರದಲ್ಲಿ ಮಹಿಳೆಯರ ಘನತೆಗೆ ಧಕ್ಕೆಯಾಗುತ್ತಿದೆ. ಬಿಹಾರದಲ್ಲಿ ಧೈರ್ಯವಂತ ಮಹಿಳೆಯೊಬ್ಬರು ಬಂದು ನಿತೀಶ್‌ ಕುಮಾರ್‌ ವಿರುದ್ಧ ಸ್ಪರ್ಧಿಸಬೇಕು. ನಾನೇನಾದರೂ ಭಾರತೀಯಳಾಗಿದ್ದರೆ, ನಿತೀಶ್‌ ಕುಮಾರ್‌ ವಿರುದ್ಧ ಸ್ಪರ್ಧಿಸುತ್ತಿದ್ದೆ. ಬಿಜೆಪಿಯು ಮಹಿಳೆಯರನ್ನು ಸಬಲೀಕರಣಗೊಳಿಸಿ, ಯಾರನ್ನಾದರೂ ನಿತೀಶ್‌ ಕುಮಾರ್‌ ವಿರುದ್ಧ ಸ್ಪರ್ಧಿಸುವಂತೆ ಮಾಡಬೇಕು. ಹಾಗೆಯೇ, ನಿತೀಶ್‌ ಕುಮಾರ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಹೇಳಿರುವ ವಿಡಿಯೊವನ್ನು ಮೇರಿ ಮಿಲ್‌ಬೆನ್‌ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮೋದಿಗೆ ಮನಿಸಿದ್ದ ಮಿಲ್‌ಬೆನ್‌

ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ವೇದಿಕೆ ಮೇಲೆ ಮೇರಿ ಮಿಲ್‌ಬೆನ್‌ ಅವರು ಭಾರತದ ರಾಷ್ಟ್ರಗೀತೆ ಹಾಡಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿತ್ತು. ಭಾರತದ ರಾಷ್ಟ್ರಗೀತೆ ಹಾಡಿದ ಗಾಯಕಿ ಮೇರಿ ಮಿಲ್​​ಬೆನ್​ ​ ಅವರನ್ನು ಅಭಿನಂದಿಸಲು ಪ್ರಧಾನಿ ಮೋದಿ ವೇದಿಕೆಗೆ ಬಂದಿದ್ದರು. ಚಪ್ಪಾಳೆ ತಟ್ಟುತ್ತ ಬಂದ ಪ್ರಧಾನಿ ಮೋದಿ ಪಾದವನ್ನು ಸ್ಪರ್ಶಿಸಿ ಗಾಯಕಿ ಮೇರಿ ಮಿಲ್​​ಬೆನ್​ ​​ನಮಿಸಿದ್ದರು. ಅದಕ್ಕೆ ಪ್ರತಿಯಾಗಿ ಪ್ರಧಾನಿಯವರೂ ಗೌರವದಿಂದ ಬಾಗಿದ್ದರು.

ಮಣಿಪುರ ಹಿಂಸಾಚಾರದ ವಿಷಯದಲ್ಲೂ ಮೇರಿ ಮಿಲ್‌ಬೆನ್‌ ಅವರು ನರೇಂದ್ರ ಮೋದಿ ಪರ ಮಾತನಾಡಿದ್ದರು. “ಸತ್ಯ: ಭಾರತ ತನ್ನ ದೇಶದ ನಾಯಕನ ಮೇಲೆ ಆತ್ಮವಿಶ್ವಾಸ ಹೊಂದಿದೆ. ಮಣಿಪುರದ ಮಾತೆಯರು, ಪುತ್ರಿಯರು ಹಾಗೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆ. ನಿಮ್ಮ ಸ್ವಾತಂತ್ರ್ಯಕ್ಕಾಗಿ ನರೇಂದ್ರ ಮೋದಿ ಅವರು ಎಂದಿಗೂ ಹೋರಾಡುತ್ತಾರೆ. ನರೇಂದ್ರ ಮೋದಿ ಅವರೇ ನಿಮ್ಮ ಮೇಲೆ ವಿಶ್ವಾಸ ಇದೆ. ನಿಮಗಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್‌ ಮಾಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version