Site icon Vistara News

Oscars to Air India’s order : ದಶಪಥ ಹೆದ್ದಾರಿ ಸೇರಿ 2023ರ 75 ದಿನಗಳಲ್ಲಿ ಭಾರತದ ಸಾಧನೆಗಳ ಪಟ್ಟಿ ಮಾಡಿದ ಪ್ರಧಾನಿ ಮೋದಿ

Narendra Modi

Narendra Modi

ನವ ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಭಾಗವಹಿಸಿ ಮಾತನಾಡುತ್ತಾ, 2023ರ ಮೊದಲ 75 ದಿನಗಳಲ್ಲಿ ಭಾರತದ ಪ್ರಮುಖ ಸಾಧನೆಗಳ ಪಟ್ಟಿಯನ್ನೇ ಹೇಳಿದ್ದಾರೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ, ( Oscars to Air India’s order) ಏರ್‌ ಇಂಡಿಯಾ ಸುಮಾರು 500 ಜೆಟ್‌ ವಿಮಾನಗಳನ್ನು ಖರೀದಿಸಲು ಆರ್ಡರ್‌ ಮಾಡಿರುವುದು, ಆರ್‌ಆರ್‌ಆರ್‌ ಚಿತ್ರಕ್ಕೆ ಆಸ್ಕರ್‌ ಪ್ರಶಸ್ತಿ, ಜಿ-20 ಶೃಂಗ ಸಭೆಯ ಸಾರಥ್ಯವನ್ನು ಪಟ್ಟಿ ಮಾಡಿದ್ದಾರೆ.

35 ನಿಮಿಷಗಳ ಭಾಷಣದಲ್ಲಿ ಸರ್ಕಾರದ ಪ್ರಮುಖ ಯೋಜನೆಗಳು, ಆರ್ಥಿಕ ಬೆಳವಣಿಗೆ, ಗಡಿ ಭಾಗದ ಗ್ರಾಮೀಣ ಪ್ರದೇಶಗಳು ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ, ಮಹಿಳಾ ಸಬಲೀಕರಣ, ಪಿಎಂ ಆವಾಸ್‌ ಯೋಜನೆ ಅಡಿಯಲ್ಲಿ ಕಟ್ಟಿಸಿರುವ ಕೋಟ್ಯಂತರ ಮನೆಗಳ ಬಗ್ಗೆ ಪ್ರಸ್ತಾಪಿಸಿದರು. ಸವಾಲುಗಳ ಹೊರತಾಗಿಯೂ ಭಾರತ ಇವತ್ತು ಸದೃಢ ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ. ಇಡೀ ಜಗತ್ತು ಇದನ್ನು ಒಪ್ಪಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು.

2023ರ ಮೊದಲ 75 ದಿನಗಳಲ್ಲಿ ಗ್ರೀನ್‌ ಬಜೆಟ್‌, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ, ಐಐಟಿ ಧಾರವಾಡ ಕ್ಯಾಂಪಸ್‌ ಅನಾವರಣ, ಮುಂಬಯಿನಲ್ಲಿ ಮುಂದಿನ ಹಂತದ ಮೆಟ್ರೊ ರೈಲು, ವಿಶ್ವದ ಅತಿ ಉದ್ದದ ಸಂಚಾರಿ ಹಡಗು ನಿರ್ಮಾಣವನ್ನು ಪ್ರಸ್ತಾಪಿಸಿದರು.

Bangalore mysore highway

ಪ್ರಧಾನಿಯವರು ಪ್ರಸ್ತಾಪಿಸಿದ ಸಾಧನೆಗಳ ಪಟ್ಟಿ ಇಂತಿದೆ-

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಆರಂಭ

ಐಐಟಿ ಧಾರವಾಡದಲ್ಲಿ ಶಾಶ್ವತ ಕ್ಯಾಂಪಸ್‌

ಅಂಡಮಾನ್‌ ನಿಕೋಬಾರ್‌ ವಲಯದಲ್ಲಿ 21 ದ್ವೀಪಗಳಿಗೆ ಪರಮ ವೀರ ಚಕ್ರ ವಿಜೇತರ ಹೆಸರು ನಾಮಕರಣ

E20 ಇಂಧನ ಬಿಡುಗಡೆ ( 20% ಎಥೆನಾಲ್‌ ಮಿಶ್ರಿತ ಪೆಟ್ರೋಲ್)‌

ತುಮಕೂರಿನಲ್ಲಿ ಏಷ್ಯಾದ ಅತಿ ದೊಡ್ಡ ಹೆಲಿಕಾಪ್ಟರ್‌ ಕಾರ್ಖಾನೆ

ಏರ್‌ ಇಂಡಿಯಾದಿಂದ ವಿಶ್ವದ ಅತಿ ದೊಡ್ಡ ವೈಮಾನಿಕ ಆರ್ಡರ್‌

ಇ-ಸಂಜೀವಿನಿಯ ಮೂಲಕ 10 ಕೋಟಿ ಟೆಲಿ ಕನ್ಸಲ್ಟೇಶನ್‌

8 ಕೋಟಿ ನಳ್ಳಿ ನೀರಿನ ಸಂಪರ್ಕ ವ್ಯವಸ್ಥೆ

ಉತ್ತರ ಪ್ರದೇಶ-ಉತ್ತರಾಖಂಡ್‌ನಲ್ಲಿ ರೈಲ್ವೆ ಜಾಲದ ವಿದ್ಯುದೀಕರಣ 100% ಪೂರ್ಣ

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದಿಂದ U-19 T20 ವಿಶ್ವಕಪ್‌ನಲ್ಲಿ ಗೆಲುವು

ಭಾರತಕ್ಕೆ 2 ಆಸ್ಕರ್‌ ಪ್ರಶಸ್ತಿಗಳ ಗರಿ

ನಮ್ಮ ಸರ್ಕಾರವು ಆಡಳಿತಕ್ಕೆ ಮಾನವೀಯತೆಯ ಸ್ಪರ್ಶವನ್ನು ನೀಡಿದೆ. ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನಾವು ಆದ್ಯತೆ ನೀಡಿದ್ದೇವೆ. ಗಡಿ ಭಾಗದಲ್ಲಿ ಇದುವರೆಗೆ ಹಿಂದುಳಿದಿದ್ದ ಹಳ್ಳಿಗಳಲ್ಲೂ ಈಗ ಪ್ರಗತಿಯನ್ನು ಕಾಣಬಹುದು. ಈಗ ಕೇಂದ್ರ ಸಚಿವರುಗಳು ಈಶಾನ್ಯ ರಾಜ್ಯಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಅಭಿವೃದ್ಧಿ ಯೋಜನೆಗಳು ಚುರುಕಾಗಿ ನಡೆಯುತ್ತಿವೆ. ನಾನು ಕೂಡ 50ಕ್ಕೂ ಹೆಚ್ಚು ಸಲ ಅಲ್ಲಿಗೆ ಭೇಟಿ ನೀಡಿರುವೆ ಎಂದು ಪ್ರಧಾನಿ ಮೋದಿ ವಿವರಿಸಿದರು.

ಈ ಹಿಂದೆ ಮಾಧ್ಯಮಗಳಲ್ಲಿ ಲಕ್ಷಾಂತರ ಕೋಟಿ ರೂ. ಭ್ರಷ್ಟಾಚಾರಗಳ ಹಗರಣಗಳು ವರದಿಯಾಗುತ್ತಿದ್ದವು. ಹೆಡ್‌ಲೈನ್‌ ಆಗುತ್ತಿತ್ತು. ಜನತೆ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದಿದ್ದರು. ಈಗ ಭ್ರಷ್ಟರ ವಿರುದ್ಧ ಕ್ರಮಗಳ ಬಗಗೆ ವರದಿಯಾಗುತ್ತಿವೆ. ಭ್ರಷ್ಟರನ್ನು ಬೀದಿಗೆಳೆಯಲಾಗುತ್ತಿದೆ. ನಮ್ಮ ಪ್ರಜಾಪ್ರಭುತ್ವ ಪದ್ಧತಿಯ ಯಶಸ್ಸು ಕಂಡು ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗುತಿಲ್ಲ. ಇವೆಲ್ಲದರ ಹೊರತಾಗಿಯೂ ಭಾರತ ಸಾಧಿಸುತ್ತಿದೆ ಎಂದು ವಿವರಿಸಿದರು.

Exit mobile version